ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರ ತುಂಬುವುದಾಗಿ ಘೋಷಿಸಿದ ಕಾಂಗ್ರೆಸ್

Congress: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಉಚಿತವಾಗಿ ಕರೆತರಲಾಗುತ್ತಿದೆ. ಆದರೆ ಬಡ ವಲಸೆ ಕಾರ್ಮಿಕರಿಗೆ ಮಾತ್ರ ಏಕೆ ಉಚಿತ ಪ್ರಯಾಣದ ವ್ಯವಸ್ಥೆ ಇಲ್ಲ ಎಂಬುದು ಕಾಂಗ್ರೆಸ್ ಪ್ರಶ್ನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ: ಮಾರ್ಚ್ 25ರಿಂದ ಸತತವಾಗಿ ಲಾಕ್​ಡೌನ್ ಜಾರಿ ಇರುವುದರಿಂದ ಇದ್ದ ಕಡೆ ಕೆಲಸ, ಕೂಳು ಇಲ್ಲದೆ, ತವರೂರಿಗೆ ಹೋಗುವುದಕ್ಕೂ ಸಾಧ್ಯವಾಗದೆ ನರಕಸ್ವರೂಪಿ ಜೀವನ ಸಾಗಿಸುತ್ತಿರುವ ವಲಸೆ ಕಾರ್ಮಿಕರ ನೆರವಿಗೆ ಕಾಂಗ್ರೆಸ್ ಧಾವಿಸಿದೆ. ವಲಸೆ ಕಾರ್ಮಿಕರು ಅವರವರ ಊರುಗಳನ್ನು ತಲುಪಿಕೊಳ್ಳಲು ರೈಲ್ವೆ ಪ್ರಯಾಣದರ ತುಂಬುವುದಾಗಿ ಕಾಂಗ್ರೆಸ್ ಘೋಷಿಸಿದೆ.

ವಲಸಿಗರ ನೆರವಿಗೆ ಧಾವಿಸಿದ ಕಾಂಗ್ರೆಸ್:

ಸದ್ಯ ಈಗ ಕಾಂಗ್ರೆಸ್ ಪಕ್ಷ ದೇಶಾದ್ಯಂತ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರವನ್ನು ತುಂಬಿ ಅವರವರ ಊರಿಗೆ ಕಳುಹಿಸಿಕೊಡಲು ಮುಂದಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರದೇಶ ಕಾಂಗ್ರೆಸ್  ಘಟಕಗಳಿಗೆ ತಮ್ಮ ರಾಜ್ಯಗಳ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರ ತುಂಬುವಂತೆ ಸೂಚಿಸಿದ್ದಾರೆ. ಅಲ್ಲದೆ ಇತರೆ ಸಹಾಯ ಮಾಡುವಂತೆಯೂ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರದ ತಲೆ ಕೆಡಿಸಿರುವ ಈ ಮಹಾ ನಗರಗಳು; ಈ 20 ನಗರಗಳಲಿದ್ದಾರೆ ಶೇ.78ರಷ್ಟು ಕೊರೋನಾ ಪೀಡಿತರು

ಕಷ್ಟಕಾಲದಲ್ಲೂ ತಾರತಮ್ಯವೇ?

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿಮಾನಗಳನ್ನು ಕಳುಹಿಸಲಾಗುತ್ತಿದೆ. ಅವರನ್ನು ಉಚಿತವಾಗಿ ಕರೆತರಲಾಗುತ್ತಿದೆ. ಆದರೆ ತುತ್ತು ಅನ್ನಕ್ಕಾಗಿ ಊರು ಬಿಟ್ಟು ಬಂದಿರುವ ಬಡ ವಲಸೆ ಕಾರ್ಮಿಕರಿಗೆ ಮಾತ್ರ ಏಕೆ ಉಚಿತ ಪ್ರಯಾಣದ ವ್ಯವಸ್ಥೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೂಡಲೇ ವಲಸಿಗರನ್ನು ರೈಲಿನಲ್ಲಿ ಉಚಿತವಾಗಿ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿ. ಇಂಥ ಕಡುಕಷ್ಟದ ಸಂದರ್ಭದಲ್ಲಿ ಅವರ ಪ್ರಯಾಣದರ ತುಂಬಿಲ್ಲ, ಅವರು ತುಂಬಿಲ್ಲ, ರಾಜ್ಯ ಸರ್ಕಾರಗಳು ತುಂಬಿಲ್ಲ ಎಂದು ವಲಸೆ ಕಾರ್ಮಿಕರನ್ನು ಕೈಬಿಡಬೇಡಿ. ಈ ಪರಿಸ್ಥಿತಿಯಲ್ಲಿ ಬಡ ವಲಸೆ ಕಾರ್ಮಿಕರಿಗೆ ಸ್ಪಂದಿಸಬೇಕಾದುದು ಸರ್ಕಾರದ ಕರ್ತವ್ಯ ಎಂದು ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ.

ಲಾಕ್​ಡೌನ್ ದೇಶದ ಪ್ರತಿಪ್ರಜೆಯನ್ನೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬಾಧಿಸಿದೆ. ವಲಸೆ ಕಾರ್ಮಿಕರನ್ನು ಹೆಚ್ಚಾಗಿ ಕಾಡಿದೆ‌. ಅನ್ನಕ್ಕಾಗಿ ಹುಟ್ಟೂರು ಬಂದು ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಪರಿಸ್ಥಿತಿ ಲಾಕ್​ಡೌನ್ ಸಂದರ್ಭದಲ್ಲಿ ಆತಂಕ, ಅತಂತ್ರ ಮತ್ತು ಅಭದ್ರತೆಗಳೆಲ್ಲವೂ ಮಿಳಿತಗೊಂಡಿದೆ. ಇದೇ ಕಾರಣಕ್ಕೆ ಅಮಾಯಕ ವಲಸೆ ಕಾರ್ಮಿಕರು ಯಾವುದೋ ಒಂದು 'ಅನಾಮಿಕ ಕರೆಗೆ ಓಗೊಟ್ಟು' ದೆಹಲಿಯ ಆನಂದ್ ವಿಹಾರ ರೈಲ್ವೆ ನಿಲ್ದಾಣದ ಎದುರು, ಮುಂಬೈನ ರೈಲ್ವೆ ನಿಲ್ದಾಣದ ಮುಂದೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಸೇರಿದ್ದರು.

ಇದನ್ನೂ ಓದಿ: LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ; ದಾಖಲೆಯ ಕುಸಿತ ಕಂಡ ಅಡುಗೆ ಅನಿಲ

ನಂತರ ದೇಶದ ಬಹುತೇಕ ರಾಜ್ಯಗಳು ತಮ್ಮ ರಾಜ್ಯದ ವಲಸಿಗರನ್ನು ಊರಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಪರಿಪರಿಯಾಗಿ ಕೇಂದ್ರ ಸರ್ಕಾರವನ್ನು ಬೇಡಿಕೊಂಡವು. ನೂರೆಂಟು ನಮನದ ಬಳಿಕ ಅಂತಿಮವಾಗಿ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಲಾಕ್​ಡೌನ್ ನಿಯಮಗಳನ್ನು ಸಡಿಲಿಸುವುದಾಗಿ ಘೋಷಿಸಿತ್ತು. ಅದಕ್ಕಾಗಿ ವಿಶೇಷ ರೈಲುಗಳನ್ನು ಬಿಡುವುದಾಗಿಯೂ ಹೇಳಿತು.

ಆದರೆ ರೈಲ್ವೆ ಬೋರ್ಡ್ ರಾಜ್ಯ ಸರ್ಕಾರಗಳಿಗೆ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರ ತುಂಬಲು ಸೂಚಿಸಿತು. ಮೊದಲೇ ಸಂಪನ್ಮೂಲ ಇಲ್ಲದೆ ನಲುಗಿಹೋಗಿರುವ ರಾಜ್ಯ ಸರ್ಕಾರಗಳು ರೈಲ್ವೆ ಇಲಾಖೆಯೇ ಭರಿಸುವಂತೆ ಆಗ್ರಹಿಸಿದವು. ರೈಲ್ವೆ ಬೋರ್ಡ್ ಮತ್ತು ರಾಜ್ಯ ಸರ್ಕಾರಗಳ ಕಿತ್ತಾಟದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ 'ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು' ಎಂಬಂತಾಗಿತ್ತು.

ವರದಿ: ಧರಣೀಶ್ ಬೂಕನಕೆರೆ

 
First published: