ಲಾಕ್‌ಡೌನ್; ಸೋಲಿಗರನ್ನು ಇನ್ನೂ ತಲುಪದ ಪಡಿತರ ಧಾನ್ಯ; ಪರಿತಪಿಸುತ್ತಿರುವ ಬುಡಕಟ್ಟು ಸಮಾಜ

ಇಲ್ಲಿನ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡು ಗಿರಿ ಜನರ ಹಾಡಿಯಲ್ಲಿ ಒಟ್ಟು 400ಕ್ಕೂ ಅಧಿಕ ಕುಟುಂಬಗಳಿವೆ. ದಿನನಿತ್ಯ ಕೂಲಿ ಕೆಲಸ ಮಾಡಿ ಅದರಿಂದ ಸಿಗುವ ಕೂಲಿ ಹಣದಲ್ಲೇ ಇವರ ಜೀವನ ಸಾಗುತ್ತಿತ್ತು. ಆದರೆ, ಲಾಕ್‌ಡೌನ್ ಇವರ ಕೂಲಿಗೂ ಕುತ್ತು ತಂದಿದೆ.

ಸೋಲಿಗ ಜನಾಂಗ.

ಸೋಲಿಗ ಜನಾಂಗ.

 • Share this:
  ಚಾಮರಾಜ ನಗರ (ಏಪ್ರಿಲ್ 10); ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಅಷ್ಟೇ ಅಲ್ಲ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳ ಪಡಿತರವನ್ನೂ ಒಟ್ಟಿಗೆ ನೀಡಲು ಮುಂದಾಗಿದೆ. ಆದರೆ, ಚಾಮರಾಜನಗರದ ಬುಡಕಟ್ಟು ಸಮಾಜದ ಸೋಲಿಗರಿಗೆ ಮಾತ್ರ ಈವರೆಗೆ ಧಾನ್ಯ ನೀಡಲಾಗಿಲ್ಲ. ಪರಿಣಾಮ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

  ಇಲ್ಲಿನ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡು ಗಿರಿ ಜನರ ಹಾಡಿಯಲ್ಲಿ ಒಟ್ಟು 400ಕ್ಕೂ ಅಧಿಕ ಕುಟುಂಬಗಳಿವೆ. ದಿನನಿತ್ಯ ಕೂಲಿ ಕೆಲಸ ಮಾಡಿ ಅದರಿಂದ ಸಿಗುವ ಕೂಲಿ ಹಣದಲ್ಲೇ ಇವರ ಜೀವನ ಸಾಗುತ್ತಿತ್ತು. ಆದರೆ, ಲಾಕ್‌ಡೌನ್ ಇವರ ಕೂಲಿಗೂ ಕುತ್ತು ತಂದಿದೆ. ಈ ನಡುವೆ ಕೇಂದ್ರ ಸರ್ಕಾರ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದ್ದು, ಭವಿಷ್ಯದಲ್ಲೂ ಇವರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಈ ಜನರಿಗೆ ಇಂತಹ ಸಮಯದಲ್ಲಿ ಪಡಿತರ ಧಾನ್ಯವೇ ಜೀವನಾಧಾರ.

  ಚಾಮರಾಜನಗರದ ಎಲ್ಲಾ ಬುಡಕಟ್ಟು ಜನರಿಗೂ ಅಂತ್ಯೋದಯ ಪಡಿತರ ಕಾರ್ಡ್ ನೀಡಲಾಗಿದೆ. ಕಾನೂನಿನ ಪ್ರಕಾರ ಇವರಿಗೆ ಎರಡು ತಿಂಗಳಿಗೆ ಸುಮಾರು 70 ಕೆ.ಜಿ ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳನ್ನು ನೀಡಬೇಕು. ಆದರೆ, ಹೊಸಪೋಡು ಗ್ರಾಮದ ಸೋಲಿಗರಿಗೆ 50 ಕೆ.ಜಿ ಅಕ್ಕಿಯನ್ನು ಮಾತ್ರ ನೀಡಿ ವಂಚನೆ ಎಸಗಿರುವ ನ್ಯಾಯ ಬೆಲೆ ಅಂಗಡಿ ಮಾಲೀಕ, ಹಿರಿಯಂಬಲ ಹಾಗೂ ಕತ್ತೆಕಾಲು ಪೋಡು ಜನರಿಗೆ ಈವರೆಗೆ ಏನನ್ನೂ ವಿತರಿಸಿಲ್ಲ.

  ಪಡಿತರರಿಗೆ ಧಾನ್ಯ ವಿತರಿಸುವಾಗ ಬಯೋಮೆಟ್ರಿಕ್ ಕಡ್ಡಾಯ ಇಲ್ಲ ಎಂದು ಸರ್ಕಾರ ಸೂಚನೆ ನೀಡಿದೆ. ಆದರೂ, ನ್ಯಾಯಬೆಲೆ ಅಂಗಡಿ ಮಾಲೀಕ ಸರ್ಕಾರದ ಸೂಚನೆಯನ್ನು ದಿಕ್ಕರಿಸಿ ಎರಡು ದಿನಕ್ಕೆ ಮುಂಚೆಯೇ ಹಿರಿಯಂಬಲ ಹಾಗೂ ಕತ್ತೆಕಾಲು ಪೋಡು ಗ್ರಾಮಕ್ಕೆ ಆಗಮಿಸಿ ಎಲ್ಲರ ಬಳಿಯಲ್ಲೂ ಬಯೋಮೆಟ್ರಿಕ್ ಗುರುತು ಪಡೆದು ಹೋಗಿದ್ದಾನೆ. ಆದರೆ, ಈವರೆಗೆ ಅಕ್ಕಿ ಬೇಳೆ ಕಾಳುಗಳು ಮಾತ್ರ ಜನರಿಗೆ ಲಾಭ್ಯವಾಗಿಲ್ಲ. ಪರಿಣಾಮ ಇಲ್ಲಿನ ಸೋಲಿಗರು ಅತ್ತ ಕೆಲಸವೂ ಇಲ್ಲದೆ, ಇತ್ತ ಆಹಾರ ಧಾನ್ಯವೂ ಲಭ್ಯವಾಗದೆ ಪರಿತಪಿಸುವಂತಾಗಿದೆ.

  ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸೋಲಿಗ ಸಮಾಜದ ಬುಡಕಟ್ಟು ಜನ “ನಮಗ್ಯಾವ ವಿಶೇಷ ಪ್ಯಾಕೇಜು ಬೇಡ, ರಿಯಾಯ್ತಿನೂ ಬೇಡ, ಅಕ್ಕಿ ಗೋದಿ ಕೊಡಿ ಸಾಕು ಹೊಟ್ಟೆತುಂಬಿಸಿಕೊಳ್ಳುತ್ತೇವೆ” ಎಂದು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

  (ವರದಿ - ಎಸ್.ಎಂ.ನಂದೀಶ್, ಚಾಮರಾಜನಗರ)

  ಇದನ್ನೂ ಓದಿ : ವೆಂಟಿಲೇಟರ್-ಸರ್ಜಿಕಲ್ ಮಾಸ್ಕ್‌ಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ ಸರ್ಕಾರ
  First published: