ಅಸಹಿಷ್ಣುತೆ, ಆರ್ಥಿಕ ಕುಸಿತ, ಕೊರೋನಾ ವೈರಸ್​ ಸಮಸ್ಯೆ ನಿವಾರಿಸುವಂತೆ ಕೇಂದ್ರಕ್ಕೆ ಮನಮೋಹನ್ ಸಿಂಗ್ ಸಲಹೆ

ರಾಷ್ಟವನ್ನು ಕಾಡುತ್ತಿರುವ ಸಮಸ್ಯೆಗಳು ಸಾಕಷ್ಟಿವೆ. ಯಾರು ಸಮಸ್ಯೆಯ ಬೆಂಕಿಯನ್ನು ಹಚ್ಚಿದ್ದಾರೋ ಅವರೇ ಆ ಬೆಂಕಿಯನ್ನು ನಂದಿಬಹುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

 • Share this:
  ನವದೆಹಲಿ: ಸಾಮಾಜಿಕ ಅಶಾಂತಿ, ಆರ್ಥಿಕ ಕುಸಿತ ಮತ್ತು ಜಾಗತಿಕ ಸಾಂಕ್ರಮಿಕ ರೋಗ.. ಇವುಗಳಿಂದ ಭಾರತ ಎದುರಿಸುತ್ತಿರುವ ಸನ್ನಿಹಿತ ಅಪಾಯಗಳ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. ಈ ಮೂರು ಸಮಸ್ಯೆಗಳು ಭಾರತವನ್ನು ಛಿದ್ರಗೊಳಿಸಬಹುದು ಮತ್ತು ಜಾಗತಿಕ ಸ್ಥಾನಮಾನವನ್ನು ಕುಗ್ಗಿಸಬಹುದು ಎಂದಿದ್ದಾರೆ.

  ದಿ ಹಿಂದೂ ಪತ್ರಿಕೆಯ ಅಂಕಣವೊಂದರಲ್ಲಿ ಮನಮೋಹನ್ ಸಿಂಗ್ ಅವರು, ದೆಹಲಿ ಗಲಭೆಯನ್ನು ಉಲ್ಲೇಖಿಸಿ ಕೋಮು ಸಾಮರಸ್ಯ ಕದಡುವ ಮತ್ತು ಧಾರ್ಮಿಕ ಅಸಹಿಷ್ಣುತೆ ಸೃಷ್ಟಿಸುತ್ತಿರುವ ರಾಜಕಾರಣಿಗಳನ್ನು ಮತ್ತು ಸಮಾಜವನ್ನು ದೂರಿದ್ದಾರೆ.

  ವಿಶ್ವ ವಿದ್ಯಾನಿಲಯಗಳು , ಸಾರ್ವಜನಿಕ ಸ್ಥಳಗಳು ಮತ್ತು ಖಾಸಗಿ ಅಸ್ತಿ ಪಾಸ್ತಿಗಳು ಕೋಮು ದಳ್ಳುರಿಗೆ ಸುಟ್ಟು ಕರಕಲಾಗಿವೆ. ಈ ಘಟನೆಗಳು ಭಾರತದ ಕರಾಳ ದಿನಗಳನ್ನು ನೆನಪಿಸುತ್ತವೆ. ಜನರನ್ನು ರಕ್ಷಿಸಬೇಕಿರುವ ಕಾನೂನು ಸಹ ತನ್ನ ಧರ್ಮವನ್ನು ಪಾಲಿಸುತ್ತಿಲ್ಲ. ಇನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಸಹ ವೃತ್ತಿ ಧರ್ಮ ಪಾಲಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಈ ಲೇಖನದಲ್ಲಿ ಮನಮೋಹನ್ ಸಿಂಗ್ ಅವರು, ಸಮಾಜದಲ್ಲಿ ಬೆಂಕಿ ಹಚ್ಚಿರುವವರೇ ಆ ಬೆಂಕಿಯನ್ನು ನಂದಿಸಬಹುದು ಎಂದಿದ್ದಾರೆ.

  ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಸಮರ್ಥಿಸಲು, ಇತಿಹಾಸದಲ್ಲಿ ನಡೆದ ಘಟನೆಗಳನ್ನು ತೋರಿಸುವುದು ಸರಿಯಲ್ಲ. ಈ ಹಿಂಸಾಚಾರಗಳು ಮಹಾತ್ಮ ಗಾಂಧಿಯವರ ಭಾರತಕ್ಕೆ ಕಳಂಕ ತರುತ್ತವೆ ಎಂದಿದ್ದಾರೆ.

  ಆರ್ಥಿಕತೆ ತತ್ತರಿಸುತ್ತಿರುವ ಈ ಸಮಯದಲ್ಲಿ ಇಂತಹ ಸಾಮಾಜಿಕ ಅಶಾಂತಿಗಳು ಆರ್ಥಿಕ ಕುಸಿತವನ್ನು ಉಲ್ಬಣಗೊಳಿಸುತ್ತದೆ ಎಂದು ಸಿಂಗ್ ಎಚ್ಚರಿಸಿದ್ದಾರೆ. ಹೂಡಿಕೆದಾರರು ಮತ್ತು ಉದ್ಯಮಿಗಳು ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಿದ್ಧರಿಲ್ಲ. ಅಪಾಯವನ್ನು ಎದುರಿಸುವ ಧೈರ್ಯವನ್ನು ಅವರು ಕಳೆದುಕೊಂಡಿದ್ದಾರೆ. ಈ ಸಾಮಾಜಿಕ ತೊಂದರೆಗಳು ಮತ್ತು ಕೋಮು ಗಲಭೆಗಳು ಇವೆಲ್ಲವನ್ನು ಹೆಚ್ಚಿಸುತ್ತವೆ. ಆರ್ಥಿಕ ಅಭಿವೃದ್ಧಿಯ ತಳಪಾಯವಾದ ಸಾಮಾಜಿಕ ಸಾಮರಸ್ಯವು ಅಪಾಯದಲ್ಲಿದೆ ಎಂದರು.

  ವಿಶ್ವದಾದ್ಯಂತ 3000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ವಿಷಯದಲ್ಲಿ ಭಾರತ ಶೀಘ್ರವಾಗಿ ಕಾರ್ಯತತ್ಪರವಾಗಬೇಕು. ಇದಕ್ಕಾಗಿಯೇ ಒಂದು ತಂಡವನ್ನು ರಚಿಸಿ, ಸಮಸ್ಯೆ ಪರಿಹರಿಸುವಂತೆ ನೋಡಿಕೊಳ್ಳಬೇಕು. ಇತರೆ ರಾಷ್ಟ್ರಗಳು ನಮ್ಮನ್ನು ನೋಡಿ ಅಳವಡಿಸಿಕೊಳ್ಳುವಂತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಂಗ್ ಸಲಹೆ ನೀಡಿದ್ದಾರೆ.

  ಇಂತಹ ಆರ್ಥಿಕತೆಯ ನಡುವೆ ಕೊರೋನಾ ವೈರಸ್ ಭಾರತದ ಜಿಡಿಪಿ ಬೆಳವಣಿಗೆಯನ್ನು ಸುಮಾರು ಅರ್ಧದಷ್ಟು ಕಡಿಮೆಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ನಮ್ಮ ಆರ್ಥಿಕ ಪರಿಸ್ಥಿತಿ ಕಳಪೆಯಾಗಿದೆ. ಈ ಸಮಯದಲ್ಲಿ ಕೊರೋನಾ ವೈರಸ್​ನಂತಹ ಮಾರಕ ಕಾಯಿಲೆ ದೇಶದ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದರು.

  ಇದನ್ನು ಓದಿ: YES ಬ್ಯಾಂಕ್ ಬಿಕ್ಕಟ್ಟು: ಭಾರತೀಯ ಷೇರುಪೇಟೆಗೆ ಭಾರೀ ಹೊಡೆತ; ಪ್ರಪಾತಕ್ಕೆ ಕುಸಿದ ಸೆನ್ಸೆಕ್ಸ್, ನಿಫ್ಟಿ

  ಸಿಂಗ್ ಸೂಚಿಸಿದ ಪರಿಹಾರ ಮಾರ್ಗಗಳು

  ಮೊದಲು ಕೊರೋನಾ ವೈರಸ್​ಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಕೊಳ್ಳಿ ಮತ್ತು ರೋಗ ಉಲ್ಬಣವಾಗದಂತೆ ಎಚ್ಚರಿಕೆ ವಹಿಸಿ. ನಂತರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕು. ಮತ್ತೊಂದು ಬಳಕೆಯ ಬೇಡಿಕೆಯ ಹೆಚ್ಚಿಸಲು ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ವಿವರವಾದ ಮತ್ತು ನಿಖರವಾದ ಹಣಕಾಸಿನ ಯೋಜನೆಯಗಳನ್ನು ತರಬೇಕು ಎಂದು ಸಿಂಗ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  1991ರ ಆರ್ಥಿಕತೆ ಕುಸಿತವನ್ನು ನೆನಪಿಸಿದ ಡಾ. ಸಿಂಗ್, ಅಂದಿನ ಆರ್ಥಿಕ ಹಿಂಜರಿತದ ಸಮಯದಲ್ಲಿ ನಾವು ತೀವ್ರ ಸುಧಾರಣೆಗಳನ್ನು ತರುವ ಮೂಲಕ ಆರ್ಥಿಕತೆಯನ್ನು  ಪುನರುಜ್ಜೀವನಗೊಳಿಸಲು ಸಾಧ್ಯವಾಯಿತು ಎಂದು ಹೇಳಿದರು.

  ಸತ್ಯವೆಂದರೆ ಪ್ರಸ್ತುತ ಪರಿಸ್ಥಿತಿ  ತುಂಬಾ ಕಠೋರವಾಗಿದೆ. ಆಧುನಿಕ ಭಾರತ ವೇಗವಾಗಿ ಪತನವಾಗುತ್ತಿದೆ. ಉದ್ದೇಶಪೂರ್ವಕವಾಗಿ ಆರಂಭಿಸಿದ ಕೋಮು ಗಲಭೆಗಳು ಆರ್ಥಿಕ ಪರಿಸ್ಥಿಯನ್ನು ಹದಗೆಡುಸುತ್ತಿದೆ. ರಾಷ್ಟ್ರ ಅನುಭವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಇದು ಸರಿಯಾದ ಸಮಯ ಎಂದು ಮಾಜಿ ಪ್ರಧಾನಿ ಸಿಂಗ್ ಹೇಳಿದ್ದಾರೆ.

  • ವರದಿ: ಸಂಧ್ಯಾ


  First published: