ಕೋವಿಶೀಲ್ಡ್ ಲಸಿಕೆ ಪೂರೈಕೆಯಲ್ಲಿ ವಿಳಂಬ – ಸೀರಂ ಇನ್ಸ್​ಟಿಟ್ಯೂಟ್​ಗೆ AstraZeneca ನೋಟೀಸ್

ಭಾರತದಲ್ಲಿ ಕೊರೋನಾ ಪರಿಸ್ಥಿತಿ ತೀವ್ರವಾಗಿರುವುದರಿಂದ ಇಲ್ಲಿ ಲಸಿಕೆ ಪೂರೈಕೆಗೆ ಸೀರಂ ಇನ್ಸ್​ಟಿಟ್ಯೂಟ್ ಆದ್ಯತೆ ಕೊಟ್ಟಿದೆ. ಹೀಗಾಗಿ, ಒಪ್ಪಂದದಂತೆ ಆಸ್ಟ್ರಾಜೆನೆಕಾಗೆ ನಿಗದಿತ ಪ್ರಮಾಣದ ಲಸಿಕೆ ಪೂರೈಸಲು ಆಗಿಲ್ಲ. ಈಗ ಎಸ್ಐಐಗೆ ಲೀಗಲ್ ನೋಟೀಸ್ ಬಂದಿರುವುದು ತಿಳಿದುಬಂದಿದೆ.

ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ

ಸೆರಮ್ ಇನ್ಸ್​ಟಿಟ್ಯೂಟ್​ನ ಸಿಇಒ ಆಡಾರ್ ಪೂನಾವಾಲ

 • News18
 • Last Updated :
 • Share this:
  ನವದೆಹಲಿ(ಏ. 08): ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ (AstraZeneca) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ (Covishield) ಕೊರೋನಾ ನಿರೋಧಕ ಲಸಿಕೆಯನ್ನ ತಯಾರಿಸಲು ಒಪ್ಪಂದ ಮಾಡಿಕೊಂಡಿರುವ ಭಾರತದ ಸೀರಮ್ ಇನ್ಸ್​ಟಿಟ್ಯೂಟ್ (SII) ಸಂಸ್ಥೆಗೆ ಈಗ ಸಂಕಷ್ಟ ಎದುರಾಗಿದೆ. ಒಪ್ಪಂದದಂತೆ ನಿಗದಿಗ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡುತ್ತಿಲ್ಲ ಎಂದು ಹೇಳಿ ಅಸ್ಟ್ರಾ ಜೆನೆಕಾ ಸಂಸ್ಥೆ ಎಸ್​ಐಐಗೆ ಲೀಗಲ್ ನೋಟೀಸ್ ಜಾರಿ ಮಾಡಿದೆ. ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಆಡಾರ್ ಪೂನವಾಲ ಅವರು ಈ ವಿಚಾರವನ್ನು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಗೆ ಬಹಿರಂಗಪಡಿಸಿದ್ದಾರೆ. ಈ ಲೀಗಲ್ ನೋಟೀಸ್ ವಿಚಾರದ ಬಗ್ಗೆ ಹೆಚ್ಚು ಮಾಹಿತಿ ನೀಡದ ಅವರು, ಭಾರತ ಸರ್ಕಾರಕ್ಕೆ ಈ ವಿಚಾರ ತಿಳಿದಿದೆ ಎಂದಿದ್ಧಾರೆ. ಹಾಗೆಯೇ, ಕೊರೋನಾ ತೀವ್ರವಾಗಿ ಬಾಧಿತವಾಗಿರುವ ಭಾರತದ ಅಗತ್ಯತೆಗಳಿಗೆ ತಮ್ಮ ಮೊದಲ ಆದ್ಯತೆ ಎಂಬುದನ್ನೂ ಈ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

  “ಕಾನೂನು ನೋಟೀಸ್ ಗೌಪ್ಯವಾಗಿರುವುದರಿಂದ ಅದರ ಬಗ್ಗೆ ಹೆಚ್ಚೇನೂ ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲಿ ಪೂರೈಕೆಗೆ ಆದ್ಯತೆ ಕೊಟ್ಟಿರುವ ಹಿನ್ನೆಲೆಯಲ್ಲಿ ಒಪ್ಪಂದದ ಪ್ರಕಾರ ಲಸಿಕೆ ಸರಬರಾಜು ಮಾಡಲು ಆಗಿಲ್ಲ. ಈ ಕಾನೂನು ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ಶಮನಗೊಳಿಸುವ ಎಲ್ಲಾ ಮಾರ್ಗಗಳನ್ನೂ ಅವಲೋಕಿಸುತ್ತಿದ್ದೇವೆ” ಎಂದು ಸೀರಂ ಇನ್ಸ್​ಟಿಟ್ಯೂಟ್ ಸಿಇಒ ಹೇಳಿದ್ದಾರೆ.

  “ಪ್ರತಿಯೊಬ್ಬರೂ ಪರಿಸ್ಥಿತಿಯನ್ನು ಅರಿತುಕೊಂಡಿದ್ಧಾರೆ. ಈ ವಿವಾದವನ್ನು ಬಗೆಹರಿಸಲು ಏನು ಮಾಡಬಹುದು ಎಂಬುದನ್ನು ಸರ್ಕಾರ ಕೂಡ ಅವಲೋಕಿಸುತ್ತಿದೆ” ಎಂದು ಅವರು ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಗೆ ತಿಳಿಸಿದ್ದಾರೆ.

  ಇದನ್ನೂ ಓದಿ: ರೈತರನ್ನೇ ದಾರಿ ತಪ್ಪಿಸಿದವರು, KSRTC ನೌಕರರನ್ನ ತಪ್ಪಿಸದೇ ಇರುತ್ತಾರಾ? ಖಾಸಗೀಕರಣಕ್ಕೆ ಅವಕಾಶ ಕೊಡಬೇಡಿ: ಪ್ರತಾಪ್ ಸಿಂಹ

  ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಭಾರತದಲ್ಲಿ ಲಸಿಕೆ ಪೂರೈಸುವುದಕ್ಕೆ ತಾವು ಆದ್ಯತೆ ಕೊಡುತ್ತೇವೆ ಎಂದಿರುವ ಅಡಾರ್ ಪೂನವಾಲಾ, “ಇದು ತಾತ್ಕಾಲಿಕ ಕ್ರಮವಾಗಬಹುದೆಂದು ಆಶಿಸಿದ್ದೇವೆ. ಭಾರತದಲ್ಲಿ ಪರಿಸ್ಥಿತಿ ಸುಧಾರಿಸಿದರೆ ವ್ಯಾಕ್ಸಿನ್ ರಫ್ತಿನ ವೇಗ ಹೆಚ್ಚಿಸುತ್ತೇವೆ. ಎರಡು ತಿಂಗಳಲ್ಲಿ ಭಾರತದಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದೆ ಭಾರತ ಮತ್ತು ಜಾಗತಿಕವಾಗಿ ಒಳಿತಾಗುವ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬಹುದು” ಎಂದು ಭರವಸೆ ನೀಡಿದ್ದಾರೆ.

  ಆಸ್ಟ್ರಾಜೆನೆಕಾದ ಲಸಿಕೆಗೆ ಜಾಗತಿಕವಾಗಿ ಒಳ್ಳೆಯ ಬೇಡಿಕೆ ಇದೆ. ಇದರ ಉತ್ಪಾದನೆ ಮಾಡುತ್ತಿರುವ ಸೆರಂ ಇನ್ಸ್​ಟಿಟ್ಯೂಟ್ ಮೇಲೆ ಅಪರಿಮಿತ ಒತ್ತಡವೂ ಇದೆ. ಆದರೆ, ಇಷ್ಟು ಒತ್ತಡಕ್ಕೆ ತಕ್ಕ ಪ್ರಮಾಣದಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಸದ್ಯಕ್ಕೆ ಎಸ್​ಐಐನ ಘಟಕಗಳಲ್ಲಿ ಇಲ್ಲ. ಇನ್ನೂ ಹೆಚ್ಚು ಲಸಿಕೆಗಳನ್ನ ಉತ್ಪಾದಿಸಲು ಸೀರಂ ಇನ್ಸ್​ಟಿಟ್ಯೂಟ್​​ಗೆ ಮೂರು ಸಾವಿರ ಕೋಟಿ ರೂ ಅಗತ್ಯ ಇದೆ ಎಂಬ ವಿಚಾರವನ್ನೂ ಸಿಇಒ ಪೂನಾವಾಲ ಅವರು ಹೇಳಿದ್ದಾರೆಂದು ಎನ್​ಡಿಟಿವಿ ವಾಹಿನಿ ವರದಿ ಮಾಡಿದೆ.
  Published by:Vijayasarthy SN
  First published: