HOME » NEWS » Coronavirus-latest-news » SIDDARAMAIAH DEMANDS WHITE PAPER FROM GOVERNMENT ON ACTION TAKEN TO PREVENT CORONAVIRUS SNVS

ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಸೊಂಕು ಕಮ್ಯುನಿಟಿ ಸ್ಪ್ರೆಡ್ ಆಗಿದೆ ಎಂದು ಜನರು ಆತಂಕಗೊಂಡಿದ್ದಾರೆ. ಹಾಗಾದ್ರೆ ಹಿಂದಿನಿಂದ ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಕೈಗೊಂಡ ಕ್ರಮವೇನು? ಅದಕ್ಕೆ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇತ್ಯಾದಿ ಎಲ್ಲ ವಿವರವನ್ನ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ಧಾರೆ.

news18-kannada
Updated:June 28, 2020, 4:16 PM IST
ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು(ಜೂನ್ 28): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಪತ್ರಿಕಾ ಹೇಳಿಕೆಯೊಂದನ್ನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಅಂತ ಆಗ್ರಹ ಮಾಡಿದ್ದಾರೆ. ಮೊನ್ನೆಯಷ್ಟೇ ಕೊರೋನಾ ಸೊಂಕು ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿದ್ದ ಸಿದ್ದರಾಮಯ್ಯ , ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಪಾರದರ್ಶಕ ರೀತಿಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಜನರು ಅನುಮಾನ ಪಡುತ್ತಿದ್ದಾರೆ ಎಂದು ಹೇಳಿದ್ಧಾರೆ.

ದಿನೇದಿನೇ ಸೊಂಕು ಹೆಚ್ಚಾಗಿದೆ. ನಿನ್ನೆ ಒಂದೇ ದಿನ ಸೋಂಕು ಪ್ರಕರಣ ಒಂದು ಸಾವಿರಕ್ಕೆ ಸಮೀಪಿಸಿದೆ. ಬೆಂಗಳೂರಲ್ಲೇ 600 ಕೇಸ್ ಕಂಡುಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ಕೊರೋನಾ ವಿರುದ್ದ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಸಂಪೂರ್ಣ ವಿವರವನ್ನು ಜನತೆಯ ಮುಂದಿಟ್ಟು ಅವರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೊಂಕು ಕಮ್ಯುನಿಟಿ ಸ್ಪ್ರೆಡ್ ಆಗಿದೆ ಎಂದು ಜನರು ಆತಂಕಗೊಂಡಿದ್ದಾರೆ. ಹಾಗಾದ್ರೆ ಹಿಂದಿನಿಂದ ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಕೈಗೊಂಡ ಕ್ರಮವೇನು? ಅದಕ್ಕೆ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಮಾಸ್ಕ್, ಸಾನಿಟೈಸರ್ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಕೇಂದ್ರ ಸರ್ಕಾರದಿಂದ ಈವರೆಗೆ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹತ್ತು ಸಾವಿರ ಹಾಸಿಗೆ ಸೌಲಭ್ಯಕ್ಕೆ ಕ್ರಮ: ಸಚಿವ ಸುಧಾಕರ್

ಸೋಂಕಿನಿಂದ ಅಸ್ಪತ್ರೆಗಳಿಗೆ ಸೇರಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ. ಊಟ ಸಿಗುತ್ತಿಲ್ಲ. ಜೊತೆಗೆ ಕಳೆದ ವಾರದಿಂದ ಸೋಂಕು ಜಾಸ್ತಿಯಾಗಿದೆ. ಸೋಂಕು ಬಂದವನಿಗೆ ಅಸ್ಪತ್ರೆಗಳು ಸಿಗದೆ ಇರೋ ಪರಿಸ್ಥಿತಿ ಇದೆ. ಜನರು ಖಾಸಗಿ ಅಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಯಾವ ರೀತಿ ಖಾಸಗಿ ಆಸ್ಪತ್ರೆಗಳಲ್ಲಿ ಶುಲ್ಕ ನಿಗದಿಪಡಿಸಿದೆ? ಈ ಎಲ್ಲ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕಾಗಿದೆ. ಕೊರೋನಾ ವಿಚಾರದ ಮಾಹಿತಿಗಾಗಿ ಪತ್ರಗಳನ್ನು ಬರೆದು ವಿವರ ಕೇಳಿದರೂ ಇಲಾಖೆಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ. ಈ ರೀತಿ ಮಾಹಿತಿಯನ್ನು ನಿರಾಕರಿಸುವುದು ಹಕ್ಕುಚ್ಯುತಿಯಾಗುತ್ತದೆ. ಇಷ್ಟು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ಬಗ್ಗೆ ಸಂಪೂರ್ಣ ವಿವರವನ್ನು ಶ್ವೇತಪತ್ರದ ಮೂಲಕ ಜನರ ಮುಂದಿಡಬೇಕು ಎಂದು ವಿಪಕ್ಷ ನಾಯಕ ಆಗ್ರಹ ಮಾಡಿದ್ದಾರೆ.

ರಾಜ್ಯದ 9 ಜಿಲ್ಲೆಗಳಲ್ಲಿ ದೇಶಕ್ಕೆ ಒಂದು ದಿನ ಮೊದಲು ಮಾರ್ಚ್ 23ರಂದು ಲಾಕ್​ಡೌನ್ ಘೋಷಿಸಲಾಯಿತು. ಆಗ ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿರಲಿಲ್ಲ. 26 ಮಂದಿ ಸೋಂಕಿತರು ಮಾತ್ರ ಇದ್ದರು. ಇಂದಿನ ವರದಿಯ ಪ್ರಕಾರ ರಾಜ್ಯದ ಸೋಂಕಿತರ ಸಂಖ್ಯೆ 11,923, ಸಾವಿಗೀಡಾದವರ ಸಂಖ್ಯೆ 191 ದಾಟಿದೆ. ಆಗ ಬೆಂಗಳೂರು ಮತ್ತು ಕೆಲವು ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಈಗ ಹಳ್ಳಿ-ಊರುಗಳೆನ್ನದೆ ವ್ಯಾಪಕವಾಗಿ ಹರಡಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಕ್ವಾರಂಟೈನ್ ಒಳಪಟ್ಟವರು ತಪ್ಪಿಸಿಕೊಳ್ಳದಂತೆ ಟ್ಯಾಗ್ ಸಿಸ್ಟಂ: ಕೋವಿಡ್ ಉಸ್ತುವಾರಿ ಆರ್ ಅಶೋಕ್

ಕೊರೊನಾ ದಿಢೀರನೇ ಬಂದೆರಗಿಲ್ಲ, ಹಂತಹಂತವಾಗಿ ಕಾಣಿಸಿಕೊಂಡಿದೆ. ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್ ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ರಾಜ್ಯ ಸರ್ಕಾರ ಅದನ್ನು ಎದುರಿಸಲು ಯಾವ ತಯಾರಿಯನ್ನೂ ನಡೆಸಿಲ್ಲ. ಮೂರು ತಿಂಗಳ ಅಮೂಲ್ಯ ಸಮಯವನ್ನು ರಾಜ್ಯ ಸರ್ಕಾರ ತನ್ನ ಬೇಜವಾಬ್ದಾರಿತನದಿಂದ ವ್ಯರ್ಥಮಾಡಿದೆ. ಈ ನಿಷ್ಕ್ರಿಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ. ಈಗ ರಾಜ್ಯದಲ್ಲಿ ಕೊರೊನಾ ಸೋಂಕು ಯಾವ ನಿಯಂತ್ರಣವೂ ಇಲ್ಲದೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಲಾಕ್ ಡೌನ್​ನಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲೂ ಈಗ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗುತ್ತಿದೆ. ಮುಂದೆ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
First published: June 28, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories