ಲಾಕ್​​ಡೌನ್​ನಿಂದ ಹಳ್ಳಿಗಳಲ್ಲಿ ದಂಗೆ ಏಳಬಹುದು: ಮಾರ್ಗಸೂಚಿ ಗೊಂದಲದ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ!

ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್ ಗೊಂದಲದ ಗೂಡಾಗಿದ್ದು ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಹೆಚ್ಚಾಗಿರುವುದರಿಂದ ನಾಳೆಯಿಂದ 2 ವಾರಗಳ ಕಾಲ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಕ್​ಡೌನ್​ ಮಾರ್ಗಸೂಚಿಯಲ್ಲಿ ಹಲವು ಗೊಂದಲಗಳಿವೆ ಎಂದು ಆರೋಪಿಸಿ ಸಿದ್ದರಾಮುಯ್ಯ ಟ್ವೀಟ್​ ಮೂಲಕ ರಾಜ್ಯ ಸರ್ಕಾರನ್ನು ತಿವಿದಿದ್ದಾರೆ. ಕೊರೋನಾ ರೋಗಕ್ಕಿಂತ ರಾಜ್ಯ ಬಿಜೆಪಿ ಸಕಾರ ಹೆಚ್ಚು ರೋಗಗ್ರಸ್ಥವಾಗಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‌ಡೌನ್ ಗೊಂದಲದ ಗೂಡಾಗಿದ್ದು ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಇಲ್ಲ. ಪರಿಷ್ಕೃತ ಲಾಕ್‌ಡೌನ್ ಅನ್ವಯ ಬೆಳಿಗ್ಗೆ  6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ದಿನಸಿ, ತರಕಾರಿ, ಮೀನು-ಮಾಂಸದ ಅಂಗಡಿಗಳು ತೆರೆಯಲು ಅವಕಾಶ ನೀಡಿ ಈ ಅವಧಿಯಲ್ಲಿ ವಾಹನ ಸಂಚಾರ ಮಾತ್ರ ನಿಷೇಧಿಸಿರುವುದು ಬಿಜೆಪಿ ಸರ್ಕಾರದ ಮೂರ್ಕತನದ ನಿರ್ಧಾರ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ ಎಂದು ಪ್ರಶ್ನಿಸಿದ್ದಾರೆ.

ಹೊಸ‌ ಲಾಕ್‌ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕು, ಎಟಿಎಂ ಆಸ್ಪತ್ರೆ ತೆರೆದಿರುತ್ತದೆ. ಆದರೆ ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು ವಾಹನ ಬಳಸಲು ನಿಷೇಧ ಇದೆ. ಹೊಟೇಲ್‌ನಲ್ಲಿ ಪಾರ್ಸಲ್‌ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ. ಇದೆಂತಹ ತುಘಲಕ್ ಸರ್ಕಾರ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಹೊಸ ಲಾಕ್ ಡೌನ್ ಜಾರಿಗೆ ತರಲು ಹೊರಟಿರುವ ರಾಜ್ಯದ ಆಡಳಿತಗಾರರು ಮತ್ತು ಅಧಿಕಾರಿಗಳು ಮೊದಲು ಬೆಂಗಳೂರಿನ ಹವಾನಿಯಂತ್ರಿತ ಕಚೇರಿಯಿಂದ ಹೊರಬಂದು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯಲಿ ಎಂದು ಸವಾಲಾಕಿದ್ದಾರೆ.

ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯ ಆಗಿರುವುದು ನಿಜ. ಆದರೆ ರಾಜ್ಯ ಬಿಜೆಪಿ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ಜಿಲ್ಲಾಧಿಕಾರಿಗಳಿಂದ ವಾಸ್ತವ ಸ್ಥಿತಿಯ ವರದಿ ಪಡೆಯಬೇಕಾಗಿತ್ತು. ಇದರಿಂದ ಪೊಲೀಸರು ಮತ್ತು ಜನತೆಯ ನಡುವಿನ‌ ಸಂಘರ್ಷವನ್ನು ತಪ್ಪಿಸಿದಂತಾಗುತ್ತಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ನಾಳೆಯಿಂದ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಗುತ್ತಿರುವ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಡಿಸಿಪಿಗಳು ಫೀಲ್ಡಿಗಿಳಿದು ಪರಿಶೀಲನೆ ನಡೆಸಿದರು.  ನಾಳೆಯಿಂದ ಲಾಕ್​ಡೌನ್​ ಅಂತೇಳಿ ನಿನ್ನೆ, ಇಂದು  ವೀಕೆಂಡ್​​​ ಹೆಸರಿನಲ್ಲಿ ರಸ್ತೆಯಿಳಿದಿದ್ದ 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ನಾಳೆಯಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದ್ದು, ವಿನಾಕಾರಣ ಲಾಕ್​ಡೌನ್​ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್​ ಕಮಿಷನರ್​ ಕಮಲ್​ ಪಂಥ್​ ಎಚ್ಚರಿಸಿದ್ದಾರೆ.
Published by:Kavya V
First published: