ಉತ್ತರಪ್ರದೇಶ (ಮೇ 30); ಗಂಗಾ ನದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಕೋವಿಡ್ ಮೃತದೇಹಗಳು ತೇಲುತ್ತಿದ್ದ ವಿಚಾರ ಇತ್ತೀಚೆಗೆ ಬಯಲಾಗಿತ್ತು. ಶವ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಜನ ತಮ್ಮ ಸಂಬಂಧಿಕರ ಮೃತದೇಹಗಳನ್ನು ನೀರಿನಲ್ಲಿ ಬಿಟ್ಟು ಬರುತ್ತಿದ್ದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಇಬ್ಬರು ಯುವಕರು ನದಿಗೆ ಎಸೆಯುತ್ತಿರುವ ವಿಡಿಯೋ ಒಂದು ಮೇ 30 ರ ಮಧ್ಯಾಹ್ನದ ಹೊತ್ತಿಗೆ ಇಂಟರ್‌ನೆಟ್ ನಲ್ಲಿ ಹರಿದಾಡಲು ಆರಂಭವಾಗಿದೆ. ಅಲ್ಲದೆ, ವೈರಲ್ ಆಗಿದೆ. ವಿಡಿಯೋದಲ್ಲಿ ಸೆರೆಯಾಗಿರುವ ಘಟನೆ ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯ ರಪ್ತಿ ನದಿ ಸೇತುವೆಯ ಮೇಲೆ ನಡೆದಿದೆ ಎಂದು ಗುರುತಿಸಲಾಗಿದೆ.
ಮೇ 28 ರಂದು ನಗರದಲ್ಲಿ ಮಳೆ ಸುರಿಯುತ್ತಿದ್ದ ಕಾರಣ ಸೇತುವೆಯ ಸಮೀಪ ರಸ್ತೆಯಲ್ಲಿ ಕಾರು ನಿಲ್ಲಿಸಿ ನಿಂತಿದ್ದ ಸ್ಥಳೀಯರೊಬ್ಬರು ಯುವಕರು ದೇಹವನ್ನು ನದಿಗೆ ಎಸೆಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಪಿಪಿಇ ಕಿಟ್ ಧರಿಸಿರುವ ವ್ಯಕ್ತಿಯೊಬ್ಬ, ಮತ್ತೋರ್ವನೊಂದಿಗೆ ಸೇರಿ ಮೃತದೇಹವನ್ನು ಹಿಡಿದಿರುವುದು ಮತ್ತು ನದಿಗೆ ಎಸೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಮೇ ತಿಂಗಳ ಮಧ್ಯದಲ್ಲಿ ಉತ್ತರ ಪ್ರದೇಶದ ಗಂಗಾ ಸೇರಿದಂತೆ ಇತರ ನದಿಗಳಲ್ಲಿ ಮೃತ ದೇಹಗಳು ತೇಲಿ ಬರುತ್ತಿರುವ ಘಟನೆ ದೇಶಾದ್ಯಂತ ಜನರಲ್ಲಿ ಸಾಕಷ್ಟು ಆಕ್ರೋಶವನ್ನು ಹುಟ್ಟಿಹಾಕಿತ್ತು. ಗಂಗಾ ನದಿಯ ತಟದಲ್ಲಿ ಜನರು ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸುತ್ತಿರುವ ಮತ್ತು ಕೋವಿಡ್ ಸೋಂಕಿತರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಘಟನೆಗಳು ದೇಶಾದ್ಯಂತ ಸಂಚಲನವನ್ನು ಉಂಟುಮಾಡಿತ್ತು.
ನದಿಯಲ್ಲಿ ತೇಲಿ ಬರುತ್ತಿರುವ ಮೃತದೇಹಗಳ ಕಾರಣದಿಂದ ಸಾಕಷ್ಟು ಮುಜುಗರವನ್ನು ಎದುರಿಸಿದ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮೃತದೇಹಗಳನ್ನು ನದಿಗೆ ಎಸೆಯದಂತೆ ಜನರಲ್ಲಿ ಹಲವು ಬಾರಿ ಮನವಿಗಳನ್ನು ಕೂಡ ಮಾಡಿತ್ತು. ಜೊತೆಗೆ ಕಠಿಣ ಶಿಕ್ಷೆಯನ್ನು ವಿಧಿಸುವುದಾಗಿ ಎಚ್ಚರಿಸಿತ್ತು.
ಈ ಎಲ್ಲಾ ಘಟನೆಗಳ ನಂತರವೂ ಉತ್ತರಪ್ರದೇಶದಲ್ಲಿ ಕೋವಿಡ್ ಸೋಂಕಿತರ ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಅಮಾನವೀಯ ಕೃತ್ಯಗಳು ಮುಂದುವರೆಯುತ್ತಿರುವುದಕ್ಕೆ ವಿಡಿಯೋದಲ್ಲಿ ಸೆರೆಯಾಗಿರುವ ಘಟನೆ ಸಾಕ್ಷಿ ನೀಡಿದೆ.
ಮೃತದೇಹಗಳನ್ನು ನದಿಗೆ ಎಸೆಯುತ್ತಿರುವ ಪ್ರಕರಣಕ್ಕೆ ಸಂಬಂಧ ಸೋಂಕಿತರ ಕುಟುಂಬದ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಕಾಣಿಸಿರುವ ಮೃತದೇಹ ಸಿದ್ಧಾರ್ಥ ನಗರ ನಿವಾಸಿಯದಾಗಿದ್ದು, ಅವರು ಮೇ 25 ರಂದು ಕೋವಿಡ್ ಸೋಂಕಿನಿಂದ ಬಲರಾಮಪುರ ಆಸ್ಪತ್ರೆಗೆ ದಾಖಲಾಗಿದ್ದರು. 3 ದಿನಗಳ ನಂತರ ಅಂದರೆ ಮೇ 28 ರಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಕೋವಿಡ್ ನಿಂದ ಮೃತಪಟ್ಟ ಕಾರಣ ಅವರ ದೇಹವನ್ನು ಇಬ್ಬರು ಯುವಕರು ನದಿಗೆ ಎಸೆದಿರುವುದು ತಿಳಿದುಬಂದಿದೆ ಬಲರಾಮಪುರ ಪೊಲೀಸರು ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಮೃತಪಟ್ಟ ವ್ಯಕ್ತಿಯ ದೇಹವನ್ನು ಅವರ ಕುಟುಂಬಸ್ಥರಿಗೆ ನೀಡಲಾಗಿದೆ. ಆದರೆ, ಅವರ ಕುಟುಂಬಸ್ಥರು ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡದೆ ನದಿಗೆ ಎಸೆದಿದ್ದಾರೆ. ಹೀಗಾಗಿ ಅವರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆ ಮತ್ತು ಎಪಿಡೆಮಿಕ್ ಖಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬಲರಾಮಪುರ ಜಿಲ್ಲಾ ಪೊಲೀಸ್ ಅಧಿಕಾರಿ ಹೇಮಂತ್ ಕುಟಿಯಾಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ