ಕೊರೋನಾ ರೋಗಿಯ ಬದಲು ಬೇರೊಬ್ಬರ ಶವಕ್ಕೆ ಸಂಸ್ಕಾರ; ಆಂಧ್ರ ವೈದ್ಯರ ಎಡವಟ್ಟಿಗೆ ಕುಟುಂಬಸ್ಥರು ಕಂಗಾಲು

ಕರ್ನೂಲ್​ನ ಬುಧವಾರಪೇಟೆಯ 6 ವರ್ಷದ ರಾಮ್‌ ಬಾಬು ಹಾಗೂ ಎಸ್​ ಮಾಗಪ್ಪ ಸ್ಟ್ರೀಟ್​ನ 36 ವರ್ಷದ ಕೊರೋನಾ ಸೋಂಕಿತ ಒಂದೇ ದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆಮೇಲಾಗಿದ್ದು ಮಾತ್ರ ಎಲ್ಲ ಉಲ್ಟಾ ಪ್ಲಾ...

Sushma Chakre | news18-kannada
Updated:May 15, 2020, 7:27 AM IST
ಕೊರೋನಾ ರೋಗಿಯ ಬದಲು ಬೇರೊಬ್ಬರ ಶವಕ್ಕೆ ಸಂಸ್ಕಾರ; ಆಂಧ್ರ ವೈದ್ಯರ ಎಡವಟ್ಟಿಗೆ ಕುಟುಂಬಸ್ಥರು ಕಂಗಾಲು
ಸಾಂದರ್ಭಿಕ ಚಿತ್ರ
  • Share this:
ಕರ್ನೂಲ್ (ಮೇ 15): ದೇಶದೆಲ್ಲೆಡೆ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ, ಕೊರೋನಾ ರೋಗಿ ಬದುಕಿದ್ದಾಗ ಮತ್ತು ಸತ್ತಾಗ ಹೆಚ್ಚಿನ ಮುತುವರ್ಜಿ ವಹಿಸಿ ಆತನಿಂದ ಯಾರಿಗೂ ಸೋಂಕು ಹರಡದಂತೆ ವೈದ್ಯರು ಎಚ್ಚರ ವಹಿಸುತ್ತಿದ್ದಾರೆ. ಆದರೆ, ವೈದ್ಯರ ಈ ಕಾಳಜಿಯೇ ಆಂಧ್ರ ಪ್ರದೇಶದಲ್ಲಿ ಅವಾಂತರಕ್ಕೆ ಕಾರಣವಾಗಿದೆ. ತಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕೊರೋನಾ ತಗುಲಿತ್ತು ಎಂಬ ವಿಷಯ ತಿಳಿಯುತ್ತಿದ್ದಂತೆ ತಾವೇ ಆತನ ಸಂಸ್ಕಾರ ಮಾಡಿದ್ದಾರೆ. ಆದರೆ, ಅಸಲಿ ವಿಷಯವೇ ಬೇರೆ ಇತ್ತು. ಏನದು ಅಂತೀರಾ?

ಆಂಧ್ರ ಪ್ರದೇಶದ ಕರ್ನೂಲ್​ನ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೊರೋನಾ ರೋಗಿಯೆಂದು ತಿಳಿದುಕೊಂಡು ಶವಸಂಸ್ಕಾರ ನಡೆಸಿದ ವ್ಯಕ್ತಿಗೆ ಕೊರೋನಾ ಸೋಂಕೇ ಇರಲಿಲ್ಲ. ಆ ಶವದ ನಿಜವಾದ ವಾರಸ್ದಾರರು ಬಂದು ಶವಾಗಾರದಲ್ಲಿದ್ದ ಶವವನ್ನು ತೆಗೆದುಕೊಂಡು ಹೋಗಲು ಹೋದಾಗ ಟ್ಯಾಗ್​ ಅದಲುಬದಲಾಗಿದ್ದು ಬಯಲಾಗಿದೆ. ಕೊರೋನಾ ರೋಗಿಯ ಶವವನ್ನು ಶವಾಗಾರದಲ್ಲೇ ಇಟ್ಟುಕೊಂಡು, ಕೊರೋನಾ ನೆಗೆಟಿವ್ ಇದ್ದ ರೋಗಿಯ ಶವವನ್ನು ಸಂಸ್ಕಾರ ಮಾಡಿರುವ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕರ್ನೂಲ್ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಊರಿನತ್ತ ಹೊರಟ ಗರ್ಭಿಣಿಗೆ ರಸ್ತೆಬದಿಯಲ್ಲೇ ಹೆರಿಗೆ; ಕಂದಮ್ಮನನ್ನು ಹೊತ್ತು 160 ಕಿ.ಮೀ. ನಡೆದ ಮಹಿಳೆ!

ಕರ್ನೂಲ್​ನ ಬುಧವಾರಪೇಟೆಯ 6 ವರ್ಷದ ರಾಮ್‌ ಬಾಬು ಹಾಗೂ ಎಸ್​ ಮಾಗಪ್ಪ ಸ್ಟ್ರೀಟ್​ನ 36 ವರ್ಷದ ಕೊರೋನಾ ಸೋಂಕಿತ ಒಂದೇ ದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ ರೋಗಿಗಳಿಗೆ ಕೊರೋನಾ ಸೋಂಕು ಇತ್ತೇ ಎಂದು ಖಚಿತಪಡಿಸಿಕೊಳ್ಳಬೇಕೆಂಬ ಸರ್ಕಾರ ಆದೇಶ ಹೊರಡಿಸಿರುವುದರಿಂದ ಅವರಿಬ್ಬರ ಗಂಟಲದ್ರವ ಮಾದರಿಗಳನ್ನೂ ಕೊರೋನಾ ಟೆಸ್ಟ್‌ಗೆ ಕಳಿಸಲಾಗಿತ್ತು. ಪರೀಕ್ಷೆಯ ವರದಿ ಬರುವವರೆಗೂ ಮೃತರಿಬ್ಬರ ಶವಗಳನ್ನು ಶವಾಗಾರದಲ್ಲಿಯೇ ಇರಿಸುವುದಾಗಿ ಅವರ ಕುಟುಂಬಸ್ಥರಿಗೆ ತಿಳಿಸಲಾಗಿತ್ತು.

ಇಬ್ಬರೂ ರೋಗಿಗಳ ಹೆಸರು ಬಹುತೇಕ ಒಂದೇ ರೀತಿಯದ್ದಾಗಿತ್ತು. 36 ವರ್ಷದ ರೋಗಿಗೆ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಖಚಿತವಾಗಿತ್ತು. 66 ವರ್ಷದ ರಾಮ್‌ಬಾಬುಗೆ ಕೊರೋನಾ ಇಲ್ಲದಿರುವುದು ವೈದ್ಯಕೀಯ ವರದಿಯಲ್ಲಿ ಖಚಿತವಾದ್ದರಿಂದ ಅವರ ಕುಟುಂಬಸ್ಥರಿಗೆ ಕರೆಮಾಡಿ, ಶವವನ್ನು ತೆಗೆದುಕೊಂಡು ಹೋಗಲು ಸೂಚಿಸಲಾಗಿತ್ತು. ಶವಾಗಾರಕ್ಕೆ ಹೋಗಿ ರಾಮ್​ಬಾಬ್​ ಅವರ ಶವವನ್ನು ತೆಗೆದುಕೊಂಡು ಹೋಗಲು ನೋಡಿದ ಅವರ ಮನೆಯವರಿಗೆ ಶಾಕ್ ಆಗಿದೆ. 66 ವರ್ಷದ ರಾಮ್​ಬಾಬು ದೇಹದ ಬದಲಾಗಿ 36 ವರ್ಷದ ವ್ಯಕ್ತಿಯ ಶವ ಇರುವುದನ್ನು ನೋಡಿ ಅವರು ಕಂಗಾಲಾಗಿದ್ದಾರೆ. ಈ ಬಗ್ಗೆ ಶವಾಗಾರದ ಸಿಬ್ಬಂದಿ ಮತ್ತು ವೈದ್ಯರನ್ನು ಕೇಳಿದಾಗ ಅವರು ಕೂಡ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನ ಈ ಹಿಟ್​ ಸಿನಿಮಾ ರೀತಿಯಲ್ಲೇ ಅದಲು ಬದಲಾಯಿತು ಶವ!

ಅಲ್ಲಿ ಆಗಿದ್ದು ಇಷ್ಟೇ. ಒಂದೇ ರೀತಿಯ ಹೆಸರು ಇದ್ದುದರಿಂದ 36 ವರ್ಷದ ರೋಗಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಕನ್​ಫ್ಯೂಸ್ ಆದ ಸಿಬ್ಬಂದಿ ಪ್ರೋಟೋಕಾಲ್​ನಂತೆ ಆತನ ಶವವನ್ನು ಸಂಸ್ಕಾರ ಮಾಡಿದ್ದರು. ಕೊರೋನಾ ರೋಗಿಯ ಬದಲಾಗಿ 66 ವರ್ಷದ ರಾಮ್​ಬಾಬು ಅವರ ಮೃತದೇಹವನ್ನು ಸಂಸ್ಕಾರ ಮಾಡಲಾಗಿತ್ತು. ತಮ್ಮ ಗಮನಕ್ಕೆ ತಾರದೆ, 36 ವರ್ಷದ ರೋಗಿಯ ಬದಲಾಗಿ 66 ವರ್ಷದ ರೋಗಿಯ ಮೃತದೇಹವನ್ನು ಹೇಗೆ ಸಂಸ್ಕಾರ ಮಾಡಿದಿರಿ? ಎಂದು ರಾಮ್​ಬಾಬು ಮನೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕರ್ನೂಲ್ ಜಿಲ್ಲಾಧಿಕಾರಿ ಜಿ. ವೀರ ಪಾಂಡ್ಯನ್ ಮೂರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಅಲ್ಲದೆ, ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. 
First published: May 15, 2020, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading