ಪಕ್ಕದ ದಾವಣಗೆರೆಯಲ್ಲಿ ಸೋಂಕು ಪತ್ತೆ: ಗ್ರೀನ್ ಜೋನ್ ಶಿವಮೊಗ್ಗದಲ್ಲಿ ಶುರುವಾಯ್ತು ನಡುಕ

ಜಿಲ್ಲೆಯಲ್ಲಿ ಇತರೆ ಜಿಲ್ಲೆಗಳಿಂದ ಇರುವಂತ ಸಂಪರ್ಕ ರಸ್ತೆಗಳ ಚೆಕ್​ಪೋಸ್ಟ್ ಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿವಮೊಗ್ಗ(ಮೇ 04): ಶಿವಮೊಗ್ಗ ಜಿಲ್ಲೆ ಗ್ರೀನ್ ಝೋನ್​ ನಲ್ಲಿದೆ. ಇದುವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಈಗ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ. ಆದರೆ, ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.

ಜಿಲ್ಲೆಯಲ್ಲಿ ಇತರೆ ಜಿಲ್ಲೆಗಳಿಂದ ಇರುವಂತ ಸಂಪರ್ಕ ರಸ್ತೆಗಳ ಚೆಕ್​ಪೋಸ್ಟ್ ಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೇರೆ ಜಿಲ್ಲೆಗಳಿಂದ ಬರುವವರಿಗೆ ಶಿವಮೊಗ್ಗ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಹೇಳಲಾಗಿದೆ. ಇದರ ಜೊತೆಗೆ ಮಾಸ್ಕ್ ಧರಿಸುವುದನ್ನು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದನ್ನು ಸಾರ್ವಜನಿಕರು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಜೊತೆಗೆ ಅಧಿಕಾರಿಗಳು ಸಹ ಇದನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು. ಜಿಲ್ಲಾಡಳಿದ ಸೂಚನೆ ಉಲ್ಲಂಘನೆಗೆ ಮಾಡಿದವರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ರೂಪಾಯಿ ಹಾಗೂ ಇತರ ಕಡೆಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಸಾಮಾಜಿಕ ಅಂತರ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ನಡುವೆ ಕನಿಷ್ಟ 1 ಮೀಟರ್ ಅಂತರ ಪಾಲಿಸಬೇಕು. ಈ ಕುರಿತು ವ್ಯಾಪಕವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ  ಕೊಡಲಾಗಿದೆ. ಸಾಮಾಜಿಕ ಅಂತರ ಪಾಲಿಸಲು ಕ್ರಮ ಕೈಗೊಳ್ಳದಿರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದು ಸಂದೇಶ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ಉಸಿರಾಟದ ತೊಂದರೆ ಮತ್ತಿತರ ರೋಗ ಲಕ್ಷಣಗಳಿರುವ ರೋಗಿಗಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಚಿಕಿತ್ಸೆ ವಿವರಗಳನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ನೀಡದ ಕ್ಲಿನಿಕ್​ಗಳ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಸರಿನಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಆದೇಶ ಮಾಡಲಾಗಿದೆ. ತಹಶೀಲ್ದಾರ್ ಕಡ್ಡಾಯವಾಗಿ ಎಲ್ಲಾ ಕ್ಲಿನಿಕ್​ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಲೋಪ ಸಂಭವಿಸಿದರೆ ಸಂಬಂಧಪಟ್ಟ ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಆರೆಂಜ್ ಝೋನ್ ನಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕಿ ; ಭಟ್ಕಳ ಹೊರತುಪಡಿಸಿ ಇತರೆಡೆ ಜನ ಸಂಚಾರ ಪ್ರಾರಂಭ

ಇನ್ನು ಆಹಾರ ಪದಾರ್ಥಗಳನ್ನು ಬೀದಿ ಬದಿ ಮಾರಾಟ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಕೈಗಾರಿಕಾ ಸಂಸ್ಥೆಗಳಿಗೆ ಎರಡು ದಿನಗಳಿಗೊಮ್ಮೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ, ಈ ಕುರಿತು ಸರ್ಕಾರ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದೆಯೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ, ಕೊರೋನಾ ಶಿವಮೊಗ್ಗ ಜಿಲ್ಲೆಗೆ ಕಾಲಿಡದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು, ಜಿಲ್ಲಾಡಳಿತ ಮಾಡುತ್ತಿದೆ.

 

 
First published: