ಮುಖ್ಯಮಂತ್ರಿಗಳ ತವರೂರಲ್ಲಿ ಬಡ ಕುಟುಂಬದ ಆಕ್ರಂದನ ; ಕಿಡ್ನಿ ಕಸಿಗೆ ದುಡ್ಡಿಲ್ಲದೆ ಪರದಾಟ

ಸದ್ಯ ಮಹಿಳೆಯ ತಾಯಿ, ತಂದೆ ಕಿಡ್ನಿ ಕೊಡುವುದಕ್ಕೆ ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಎಲ್ಲ ಪ್ರಕ್ರಿಯೆಗಳು ನಡೆಯವುದು ತುಂಬಾ ಕಷ್ಟವಾಗಿದೆ.

ದ್ಯಾಮವ್ವ

ದ್ಯಾಮವ್ವ

  • Share this:
ಶಿವಮೊಗ್ಗ(ಮೇ.02): ಒಂದು ಕಡೆ ಕಿತ್ತು ತಿನ್ನುವ ಬಡತನ. ಮತ್ತೊಂದೆಡೆ, ಒಂದೇ ಬಾರಿಗೆ ಎರಗಿ ಬಂದ ಸಾಲು ಸಾಲು ಖಾಯಿಲೆಗಳು. ಇದರ ಜೊತೆಗೆ ಕೊರೋನಾ ವೈರಸ್ ಸೋಂಕಿನ ಭೀತಿ, ಲಾಕ್ ಡೌನ್ ಪರೀಕ್ಷೆ. ಕೆಲಸ ಇಲ್ಲ, ದುಡಿಮೆ ಇಲ್ಲ. ತಿಂಗಳ ಆದಾಯ ಮರಿಚಿಕೆಯಾಗಿದೆ. ಮೊದಲೇ ಸಂಬಳವಿಲ್ಲದೆ ಬದುಕು ಮೂರಾಬಟ್ಟೆಯಾಗಿದೆ. ಇದೆಲ್ಲದರ ನಡುವೆ, ಖಾಯಿಲೆಯಿಂದ ಬಳಲುತ್ತಿರುವ ಈ ದ್ಯಾಮವ್ವಳಿಗೆ ತಿಂಗಳಿಗೆ ಹತ್ತಾರು ಸಾವಿರ ರೂ ಮಾತ್ರೆ, ಇಂಜಕ್ಷನ್ ಬೇಕು. ಜೊತೆಗೆ ಎರಡು ಪುಟ್ಟ ಪುಟ್ಟ ಕಂದಮ್ಮಗಳು.  ಪ್ರಸ್ತುತ ಬದುಕು ಸಾಗಿಸುವುದೇ ದೊಡ್ಡ ಸವಾಲು-ಸಮಸ್ಯೆಯಾಗಿರುವ ನಡುವೆಯೇ ಮೂರು ಮೂರು ಖಾಯಿಲೆಗಳಿಂದ ಬಳಲುತ್ತಿರುವ ಈ ಮಹಿಳೆಯ ಪರಿಸ್ಥಿತಿ ಹೇಗಾಗಿರಬೇಡ.! 

ಶಿವಮೊಗ್ಗ ನಗರದ ನವುಲೆ ಬಡಾವಣೆಯ ಚಾನಲ್ ಏರಿಯಾ ನಿವಾಸಿಯಾಗಿರುವ ದ್ಯಾಮವ್ವ ಮತ್ತು ಮಂಜುನಾಥ್ ದಂಪತಿ ಬಡತನದಲ್ಲಿ ದಿನ ದೂಡುತ್ತಿದ್ದಾರೆ. ಗಾರೆ ಕೆಲಸ ಮಾಡುವ ಮಂಜುನಾಥ್​​ಗೆ ಲಾಕ್ ಡೌನ್​ನಿಂದಾಗಿ ಕೆಲಸವಿಲ್ಲದಂತಾಗಿ, ದಿನನಿತ್ಯದ ಜೀವನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ತಿಂಗಳಿನಿಂದ  ಟಿ.ಬಿ. ಖಾಯಿಲೆಯಿಂದಾಗಿ ಪತ್ನಿ ದ್ಯಾಮವ್ವಳಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದಕ್ಕೆ ಜೊತೆಯಾಗಿ ಜಾಂಡಿಸ್ ಖಾಯಿಲೆ ಶುರುವಾಗಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗಲೇ, ಎರಡು ಕಿಡ್ನಿಗಳ ಸಮಸ್ಯೆ ಉಂಟಾಗಿದೆ. ಇದೀಗ ಎರಡು ಕಿಡ್ನಿಗಳು ಶೇ. 30 ರಷ್ಟು ಸೋಂಕಿನಿಂದ ಕೂಡಿವೆ.   ಹಣವಿಲ್ಲದೆ ಈ ಬಡ ಕುಟುಂಬ ನಲುಗಿ ಹೋಗಿದೆ.

ಸದ್ಯ ಪತ್ನಿಯನ್ನು ಬಚಾವ್ ಮಾಡಿಕೊಳ್ಳುವುದೇ ದೊಡ್ಡ ಸವಾಲು ಪತಿಗೆ ಎದುರಾಗಿದೆ. ವಾರಕ್ಕೆ 2,500 ರೂ. ವೆಚ್ಚದ ಇಂಜೆಕ್ಷನ್, ಮಾತ್ರೆಗಳು ತಿಂಗಳು ವೈದ್ಯಕೀಯ ಪರೀಕ್ಷೆಗಳು. ಹೀಗೆ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಖರ್ಚು ಇದೆ. ಸಾಲವನ್ನು ಮಾಡಿಕೊಂಡು ಪತಿ ನಿರ್ವಹಣೆ ಮಾಡುತ್ತಿದ್ದಾನೆ. ಜೊತೆಗೆ ತವರು ಮನೆಯವರೂ ಕೂಡ ಸಾಲ ಮಾಡಿ ಮಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಸದ್ಯ ಕೊರೋನಾ ದಿಂದ ಲಾಕ್ ಡೌನ್ ಆಗಿ ಈ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ.

ದ್ಯಾಮವ್ವಳಿಗೆ ಕೇವಲ 24 ವರ್ಷ ವಯಸ್ಸು.  ಮದುವೆಯಾಗಿ ಕೇವಲ 4 ವರ್ಷವಾಗಿದೆ.  ಎರಡು ಮಕ್ಕಳಿದ್ದು, 2 ವರ್ಷದ ಗಂಡು ಮಗು ಮತ್ತು 7 ತಿಂಗಳ ಹೆಣ್ಣು ಮಗುವಿದೆ. ಚಿಕ್ಕ ವಯಸ್ಸಿನಲ್ಲೇ ತನ್ನ ಎರಡು ಕಿಡ್ನಿ ಕಳೆದುಕೊಂಡಿರುವ ಮಡದಿಯ ಆರೈಕೆ, ಮಕ್ಕಳನ್ನು ನೋಡಿಕೊಳ್ಳುವುದು ಎಲ್ಲವನ್ನು ಪತಿಯೇ ಮಾಡಬೇಕಿದೆ. ಸದ್ಯ ಕಿಡ್ನಿ ವರ್ಗಾವಣೆಗೆ ವೈದ್ಯರು ಎರಡು ತಿಂಗಳ ಗಡುವು ನೀಡಿದ್ದಾರೆ. ಒಂದು ಕಿಡ್ನಿಯಾದರೂ ವರ್ಗಾವಣೆ ಮಾಡಬೇಕಿದೆ.

ಇದನ್ನೂ ಓದಿ : ಲಾಕ್ ಡೌನ್ ವೇಳೆ ಹೆಚ್ಚಿನ ದರಕ್ಕೆ ವಸ್ತುಗಳ ಮಾರಾಟ - ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ಹಲವೆಡೆ ದಾಳಿ

ಸದ್ಯ ಮಹಿಳೆಯ ತಾಯಿ, ತಂದೆ ಕಿಡ್ನಿ ಕೊಡುವುದಕ್ಕೆ ಮುಂದಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಈ ಎಲ್ಲ ಪ್ರಕ್ರಿಯೆಗಳು ನಡೆಯವುದು ತುಂಬಾ ಕಷ್ಟವಾಗಿದೆ. ಜಿಲ್ಲಾಡಳಿತವು ಅಥವಾ ಸಂಘ ಸಂಸ್ಥೆಗಳು ಸಹಾಯ ಮಾಡಿದ್ರೆ  ಚಿಕಿತ್ಸೆಗೆ ಅನುಕೂಲವಾಗುತ್ತದೆ. ಶಿವಮೊಗ್ಗ ಜಿಲ್ಲೆಯವರೇ ಮುಖ್ಯಮಂತ್ರಿ ಇದ್ದು, ಅವರಾದರೂ ನಮ್ಮ ಸಹಾಯಕ್ಕೆ ಬರುತ್ತಾರಾ ಎನ್ನುವ ಆಶಾ ಭಾವನೆಯಲ್ಲಿದೆ ಈ ಬಡ ಕುಟುಂಬ.
First published: