ನವ ದೆಹಲಿ; ಮಾರಣಾಂತಿಕ ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ "ಜನತಾ ಕರ್ಫ್ಯೂ"ವನ್ನು ನಾವು ಬೆಂಬಲಿಸುತ್ತೇವೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಸಾಮಾಜಿಕ ದೂರವನ್ನು ಹೆಚ್ಚು ಬಲಪಡಿಸುವ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಸಂಸದ ಶಶಿ ತರೂರ್ ತಿಳಿಸಿದ್ದಾರೆ.
ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ನರೇಂದ್ರ ಮೋದಿ, "ಕೊರೋನಾ ವೈರಸ್ ಬಗ್ಗೆ ಜನರು ಎರಡು ತಿಂಗಳಿಂದ ಮಾತನಾಡುತ್ತಿದ್ದಾರೆ. ದೇಶದ ಜನರು ಕೊರೋನಾ ವೈರಸ್ ಬಗ್ಗೆ ಆತಂಕಕ್ಕೆ ಈಡಾಗಿದ್ದಾರೆ. ಇಡೀ ಮಾನವ ಸಮೂಹ ಸಂಕಟಕ್ಕೆ ಸಿಲುಕಿದೆ. ಈ ಮಾರಕ ಮಹಾಮಾರಿಗೆ ಯಾವುದೇ ಔಷಧವನ್ನು ಕಂಡು ಹಿಡಿಯಲಾಗಿಲ್ಲ. ಕೊರೋನಾ ವೈರಸ್ನಿಂದ ದೇಶದ ಜನರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಆದರೂ ಈ ವೈರಸ್ ಬಗ್ಗೆ ಜನರು ಹೆದರುವ, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ" ಎಂದಿದ್ದರು.
ಅಲ್ಲದೆ, "ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಮೂಲಕ ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ಜನತಾ ಕರ್ಫ್ಯೂಗೆ ಕರೆ ನೀಡಿದರು.
ಇದೇ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು" ಎಂದು ಮೋದಿ ಜನರಲ್ಲಿ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರವನ್ನು ಸ್ವಾಗತಿಸಿರುವ ಸಂಸದ ಶಶಿ ತರೂರ್, "ಈ ಸವಾಲಿನ ಸಮಯದಲ್ಲಿ ಐಕಮತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ನಾನು ಸ್ವಾಗತಿಸುತ್ತೇನೆ. ಭಾನುವಾರ ಇದನ್ನು ಪ್ರಯತ್ನಿಸಲು ಸುಲಭವಾದ ದಿನ ಎಂಬ ಅರಿವಿನಿಂದ" ಜನತಾ ಕರ್ಫ್ಯೂ "ಅನ್ನು ಬೆಂಬಲಿಸುತ್ತೇನೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ದೂರವನ್ನು ಹೆಚ್ಚು ಬಲಪಡಿಸುವ ಅಗತ್ಯವಿದೆ" ಎಂದು ಟ್ವಿಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಜಗತ್ತನೇ ಕಾಡುತ್ತಿರುವ ಕೊರೋನಾ ವೈರಸ್ಗೆ ಈವರೆಗೆ 7000 ಸಾವಿರಕ್ಕೂ ಅಧಿಕ ಬಲಿಯಾಗಿದೆ. ವಿಶ್ವದಾದ್ಯಂತ 2 ಲಕ್ಷ ಸೋಂಕಿತರು ಇದ್ದಾರೆ, ಭಾರತದಲ್ಲೂ ಸೋಂಕಿತರ ಸಂಖ್ಯೆ 173ಕ್ಕೆ ಏರಿಕೆಯಾಗಿದ್ದು ಈವರೆಗೆ ಒಟ್ಟು 4 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಮಾ.22ರ ಭಾನುವಾರ ಜನರು ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು; ಈ ವೇಳೆ ಯಾರೊಬ್ಬರು ಮನೆಯಿಂದ ಹೊರಗೆ ಬರಬಾರದು; ಪ್ರಧಾನಿ ಮೋದಿ ಕರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ