ಬೆಂಗಳೂರು(ಜು.16): ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಒಂದಿಲ್ಲೊಂದು ಕ್ರಮ ಕೈಗೊಳ್ಳುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗ ಎಂಬಂತೆ ಸೋಂಕಿತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯವೊಂದು ಸದ್ದಿಲ್ಲದೇ ಶುರುವಾಗಿದೆ.
ತಾಲೂಕಿನ ಸೋಂಕಿತ ವ್ಯಕ್ತಿಗಳಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಮಾಡುವ ಮೂಲಕ ಗ್ರಾಮೀಣ ಭಾಗಕ್ಕೆ ಸೋಂಕು ಕಾಲಿಡದಂತೆ ನಿಗಾ ವಹಿಸಲಾಗಿದೆ. ನಗರಭಾಗದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿರುವ ಕೊರೋನಾ ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಡುತ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಗ್ರಾಮೀಣ ಭಾಗಕ್ಕೆ ಸೋಂಕು ಕಾಲಿಡದಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಇದೀಗ ರಾಜ್ಯದಲ್ಲೇ ಪ್ರಥಮ ಎಂಬಂತೆ ತಾಲೂಕಿನಲ್ಲಿ ಸೋಂಕಿತ ವ್ಯಕ್ತಿಗಳಿಗೆ ಪ್ರತ್ಯೇಕ ಕ್ವಾರಂಟೈನ್ ನಿಗಾ ವ್ಯವಸ್ಥೆಯನ್ನು ಮಾಡಲಾಗಿದೆ. ಗುಣಲಕ್ಷಣಗಳಿಲ್ಲದೇ ಆರೋಗ್ಯವಾಗಿರುವ ಸೋಂಕಿತರಿಗೆ ಮನೆಯಲ್ಲೇ ಕ್ವಾರಂಟೈನ್ಗೆ ಒಳಪಡಿಸಬೇಕೆಂದು ಸರ್ಕಾರ ಆದೇಶಿಸಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಒಂದೇ ಮನೆಯಲ್ಲಿ ಕೂಡು ಕುಟುಂಬವಿರುವ ಪದ್ದತಿಯಲ್ಲಿ ಒಂದೇ ಶೌಚಾಲಯ, ಒಂದೇ ಅವಶ್ಯಕತೆಗಳನ್ನು ನೆಚ್ಚಿಕೊಳ್ಳವು ಸ್ಥಿತಿಯಿದೆ.
ಇದರಿಂದ ಸೋಂಕು ಮನೆಮಂದಿಗೆಲ್ಲಾ ಹರಡಿ, ಪೂರ್ತಿ ಹಳ್ಳಿಗೂ ಹರಡುವ ಸಾಧ್ಯತೆಯಿದೆ. ಹೀಗಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜಾ ನೇತ್ರತ್ವದಲ್ಲಿ ಈ ರೀತಿಯ ಸೋಂಕಿತರಿಗೆ ಸುಸ್ಸಜ್ಜಿತ ಆಸ್ಪತ್ರೆಯ ವ್ಯವಸ್ಥೆಯನ್ನು ಮಾಡಲಾಗಿದೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಅವರ ಸಹಕಾರದೊಂದಿಗೆ ಧರ್ಮಸ್ಥಳದ ಅಂಗಸಂಸ್ಥೆಯಾದ ಲಾೈಲ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಳೇ ಕ್ಷಯ ರೋಗ ಆಸ್ಪತ್ರೆಯನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಇಲ್ಲಿ 150 ಹಾಸಿಗೆ ಸಹಿತ ಉಟೋಪಚಾರ, ಪ್ರತ್ಯೇಕ ಶೌಚಾಲಯ, ಸ್ನಾನಗೃಹ, ಮಹಿಳೆಯರಿಗೂ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ.
ಉಟೋಪಚಾರದ ಸಂಪೂರ್ಣ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದಲೇ ಮಾಡಲಾಗುತ್ತಿದೆ. ಈಗಾಗಲೇ ಆರು ಮಂದಿ ಆರೋಗ್ಯವಂತ ಸೋಂಕಿತರನ್ನು ಬೆಳ್ತಂಗಡಿ ಸರಕಾರಿ ಕೋವಿಡ್ ಆಸ್ಪತ್ರೆಯಿಂದ ಈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇಲ್ಲಿ ನುರಿತ ವೈದ್ಯರಿಂದ ಮಾನಸಿಕ ಸ್ಥೈರ್ಯ ತುಂಬಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಆರೋಗ್ಯ ಕ್ರಮಗಳನ್ನು ಸೂಚಿಸಲಾಗುತ್ತಿದೆ. 10 ದಿನಗಳ ಬಳಿಕ ಶಾಸಕ ಹರೀಶ್ ಪೂಂಜಾ ಅವರ ಸ್ವಂತ ಖರ್ಚಿನಿಂದ ಸೋಂಕಿತರ ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ಬಳಿಕ ಕ್ವಾರಂಟೈನ್ ಮುಕ್ತಾಯ ಮಾಡಲಾಗುತ್ತದೆ. ಒಟ್ಟಿನಲ್ಲಿ ಕೊರೋನಾದ ಈ ಸಂಕಷ್ಟದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ