Covid Pills: ಕೋವಿಡ್ ಮಾತ್ರೆ ನಾವೇ ತೆಗೆದುಕೊಳ್ಳುವುದು ಅಪಾಯ ಅಂತಿದ್ದಾರೆ ವೈದ್ಯರು

ವೈದ್ಯಕೀಯ ವೃತ್ತಿನಿರತರು ಶಿಫಾರಸು ಮಾಡದ ಹೊರತು ಜನರು ಮಾಲ್ನುಪಿರಾವಿರ್ ಆ್ಯಂಟಿ ವೈರಲ್ ಮಾತ್ರೆ ಬಳಸಕೂಡದು. ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ವೈದ್ಯಕೀಯ ವಿಜ್ಞಾನ (Indian Medical Council) ಮಂಡಳಿ ಶಿಫಾರಸು(Recommended) ಮಾಡಿರುವ ಕೋವಿಡ್-19 (Covid-19) ಚಿಕಿತ್ಸಾ ಶಿಷ್ಟಾಚಾರದಿಂದ ಮಾಲ್ನುಪಿರಾವಿರ್ (MALNUPIRAVIR) ಆ್ಯಂಟಿ ವೈರಲ್ ಮಾತ್ರೆಯನ್ನು ಹೊರಗಿಟ್ಟಿದ್ದರೂ, ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಈ ಮಾತ್ರೆಯನ್ನು ಸ್ವಯಂ ಚಿಕಿತ್ಸೆಯ (Self-Treatment) ಭಾಗವಾಗಿ ಬಳಸುವುದರಿಂದ ತೀವ್ರ ಸ್ವರೂಪದ ಸುರಕ್ಷಾ ಸಮಸ್ಯೆ ಎದುರಾಗಬಹುದು ಎಂದು ರೋಗಿಗಳಿಗೆ ವೈದ್ಯರು ಎಚ್ಚರಿಸಿದ್ದಾರೆ.

ಅಡ್ಡ ಪರಿಣಾಮ
ಅಪೋಲೋ ಸಮೂಹ ಆಸ್ಪತ್ರೆಗಳ ಶ‍್ವಾಸಕೋಶ ತಜ್ಞ ಡಾ. ರವೀಂದ್ರ ಮೆಹ್ತಾ ಈ ಕುರಿತು ಎಚ್ಚರಿಸಿದ್ದು, ವೈದ್ಯಕೀಯ ವೃತ್ತಿನಿರತರು ಶಿಫಾರಸು ಮಾಡದ ಹೊರತು ಜನರು ಮಾಲ್ನುಪಿರಾವಿರ್ ಆ್ಯಂಟಿ ವೈರಲ್ ಮಾತ್ರೆ ಬಳಸಕೂಡದು. ಈ ಮಾತ್ರೆಯು ಹೊಸದಾಗಿದ್ದು, ನಿರ್ದಿಷ್ಟವಾದ ಸೂಚನೆಗಳು ಹಾಗೂ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

ತಯಾರಿಕಾ ಕಂಪನಿ ಪ್ರತಿಪಾದನೆ
ಮಾಲ್ನುಪಿರಾವಿರ್ ಮಾತ್ರೆಯನ್ನು ಮೂಲತಃ ಇನ್ಫ್ಲ್ಯುಯೆಂಜಾ ಕಾಯಿಲೆಗೆ ಚಿಕಿತ್ಸೆ ನೀಡಲು ಅಭಿವೃದ್ಧಿ ಪಡಿಸಲಾಗಿತ್ತು. ನಂತರ ಈ ಮಾತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಬಳಸಲು ಶಿಫಾರಸು ಮಾಡಲಾಗಿತ್ತು. ಗಂಭೀರ ಅಸ್ವಸ್ಥತೆಗೆ ಒಳಗಾಗುವ ಸಾಧ್ಯತೆ ಇರುವ ರೋಗಿಗಳಲ್ಲಿನ ಸೌಮ್ಯ ಅಥವಾ ಸಾಮಾನ್ಯ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಮಾತ್ರ ಈ ಮಾತ್ರೆಯನ್ನು ಬಳಸಲಾಗುತ್ತದೆ. ಸೋಂಕಿಗೆ ಒಳಗಾದ ಮೊದಲ 5 ದಿನಗಳ ಒಳಗೆ ಈ ಮಾತ್ರೆ ಸೇವಿಸಿದರೆ ಅಂತಹ ರೋಗಿಗಳು ಗಂಭೀರ ಅಸ್ವಸ್ಥತೆಗೆ ಒಳಗಾಗುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಈ ಮಾತ್ರೆಯ ತಯಾರಿಕಾ ಕಂಪನಿಗಳು ಪ್ರತಿಪಾದಿಸಿವೆ.

ಇದನ್ನೂ ಓದಿ: Covid Pill: ಮುಂದಿನ ವಾರದಿಂದ ಎಲ್ಲಾ ಕಡೆ ಕೋವಿಡ್ ಮಾತ್ರೆ ಲಭ್ಯ, ಬೆಲೆ ಎಷ್ಟು? ಎಲ್ಲಿ ಸಿಗುತ್ತದೆ? ಫುಲ್ ಡೀಟೆಲ್ಸ್

ವೈದ್ಯರು ಕಳವಳ
ಆದರೆ, ವೈದ್ಯರು ಮಾತ್ರ ಮಾತ್ರೆಯ ಕ್ಷೀಣ ಪರಿಣಾಮ ಹಾಗೂ ಸಾಧ್ಯತಾ ಅಡ್ಡ ಪರಿಣಾಮಗಳ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕ ಡಾ. ಬಲರಾಂ ಭಾರ್ಗವ, ಪರೀಕ್ಷಾ ಹಂತದಲ್ಲಿ ಕಂಪನಿಗಳು ಈ ಹಿಂದೆ ಪ್ರತಿಪಾದಿಸಿರುವುದಕ್ಕೆ ಹೋಲಿಸಿದರೆ ಈ ಮಾತ್ರೆಗಳು ಕೇವಲ ಶೇ. 30ರಷ್ಟು ಪರಿಣಾಮಕಾರಿಯಾಗಿರುವುದು ಕಂಡು ಬಂದಿದೆ. ಇದಲ್ಲದೆ ಈ ಆ್ಯಂಟಿವೈರಲ್ ಮಾತ್ರೆಯ ಸಹ ಔಷಧಿಯ ಸಣ್ಣ ಕಣವು ತಾನೇ ವೈರಸ್‌ನ ಆರ್‌ಎನ್‌ಎ ಜೊತೆಗೂಡಿ ತೀವ್ರ ಸ್ವರೂಪದ ದ್ವಿಗುಣಕ್ಕೆ ಕಾರಣವಾಗುವ ರೂಪಾಂತರವನ್ನು ತಡೆಗಟ್ಟುತ್ತದೆ. ಆದರೆ, ಈ ಮಾತ್ರೆಯು ವೈರಸ್ ಅನ್ನು ಬಲಿಷ್ಠಗೊಳಿಸಿ ಮತ್ತಷ್ಟು ಅಪಾಯಕಾರಿಯಾದ ರೂಪಾಂತರವನ್ನು ಪರಿಚಯಿಸುವ ಅಪಾಯವೂ ಇದೆ ಎಂದು ಹೇಳಿದ್ದಾರೆ.

ಗರ್ಭಿಣಿಯರಿಗೆ ನಿಷೇಧ
ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ಸೋಂಕು ರೋಗಗಳು ಹಾಗೂ ಪ್ರಯಾಣ ಔಷಧಗಳ ಸಮಾಲೋಚಕಿ ಡಾ. ಸ್ವಾತಿ ರಾಜಗೋಪಾಲ್ ಪ್ರಕಾರ, “ಈ ಔಷಧವನ್ನು ಗರ್ಭಿಣಿ ಸ್ತ್ರೀಯರಿಗೆ ನೀಡಬಾರದು ಹಾಗೂ ಈ ಔಷಧವನ್ನು ಮಕ್ಕಳು ಹೆರುವ ವಯೋಮಾನದ ಸ್ತ್ರೀಯರಿಗೆ ನೀಡುವ ಮುನ್ನ ಗರ್ಭಧಾರಣೆಯ ಮೂತ್ರ ಪರೀಕ್ಷೆ ಅಗತ್ಯ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ರೋಗ ಚಿಕಿತ್ಸಕರು ತಾವು ಯಾವಾಗ ಮತ್ತು ಯಾವ ವಯೋಮಾನದ ಗುಂಪಿನ ರೋಗಿಗಳಿಗೆ ಈ ಔಷಧ ನೀಡುತ್ತಿದ್ದೇವೆ ಹಾಗೂ ಯಾವ ರೂಪಾಂತರಿ ವೈರಸ್ ಗುರಿಯಾಗಿಸಿಕೊಂಡು ನೀಡುತ್ತಿದ್ದೇವೆ ಎಂಬ ಕುರಿತು ಸ್ಪಷ್ಟತೆ ಹೊಂದಿರಬೇಕು” ಎಂದು ಎಚ್ಚರಿಸಿದ್ದಾರೆ.

ಔಷಧ ಬಳಕೆಯ ಮೇಲೆ ಕಣ್ಗಾವಲು
“ಒಂದು ವೇಳೆ ಈ ಔಷಧವು ಬಳಕೆಗೆ ಸುರಕ್ಷಿತವಲ್ಲದಿದ್ದರೆ ಔಷಧ ವಿಚಕ್ಷಣೆಯಲ್ಲಿ ಪಾಲುದಾರ ಅಂಗವಾದ ಭಾರತೀಯ ಔಷಧಗಳ ಮಹಾ ನಿಯಂತ್ರಕರು ಅನುಮೋದನೆ ನೀಡುತ್ತಿರಲಿಲ್ಲ. ಈ ಕುರಿತು ಬ್ರಿಟನ್ ಹಾಗೂ ರಾಷ್ಟ್ರೀಯ ಆರೋಗ್ಯ ಪರಿಮಾಣ ಸಂಸ್ಥೆಗಳು ಮಾರ್ಗದರ್ಶಿ ಸೂತ್ರಗಳನ್ನು ಅಂತಿಮಗೊಳಿಸಿದ್ದು, ರೋಗ ಚಿಕಿತ್ಸಕರು ಈ ಔಷಧದ ಉಪಯೋಗಗಳನ್ನು ಮೊದಲು ಮೌಲ್ಯಮಾಪನ ಮಾಡಿ. ನಂತರ ಬಳಕೆಯ ನಿರ್ಧಾರ ಕೈಗೊಳ್ಳಬೇಕು.

ಇದನ್ನೂ ಓದಿ: Health Tips: ಅವಧಿ ಮುಗಿದ ಔಷಧ ಸೇವನೆ ಸೂಕ್ತವೇ ? ಅವಧಿ ಮುಗಿದ ಯಾವ ಮೆಡಿಸಿನ್ ಸೇವನೆ ಮಾಡಬಹುದು ?

ಈ ಔಷಧವು ಓಮಿಕ್ರಾನ್ ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿಯಲ್ಲದೆ ಇರುವುದರಿಂದ ಇದನ್ನು ರಾಷ್ಟ್ರೀಯ ಮಾರ್ಗಸೂಚಿಯಲ್ಲಿ ಅಳವಡಿಸುವುದು ನ್ಯಾಯಸಮ್ಮತವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. “ವಸ್ತುಸ್ಥಿತಿಯನ್ನು ಆಧರಿಸಿ ಹೇಳುವುದಾದರೆ, ಈ ಔಷಧವು ಮಾರುಕಟ್ಟೆಯಲ್ಲಿ ಸುಲಭವಾಗಿ ಹಾಗೂ ಅಷ್ಟೇನೂ ದುಬಾರಿಯಲ್ಲದ ಬೆಲೆಗೆ ದೊರೆಯುತ್ತಿರುವುದರಿಂದ ಇದಕ್ಕೆ ಜಾಹೀರಾತಿನ ಅಗತ್ಯತೆ ಬೀಳುವುದಿಲ್ಲ. ಆದರಿದು ಪ್ರಕರಣಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ ಈ ಔಷಧ ಬಳಕೆಯ ಮೇಲೆ ಕಣ್ಗಾವಲಿಡುವುದು ಉತ್ತಮ” ಎಂದು ಡಾ. ರವೀಂದ್ರ ಮೆಹ್ತಾ ಅಭಿಪ್ರಾಯ ಪಟ್ಟಿದ್ದಾರೆ.
Published by:vanithasanjevani vanithasanjevani
First published: