HOME » NEWS » Coronavirus-latest-news » SECOND CORONAVIRUS CASE REPORTED IN KERALA CHINA DEATH TOLL RISES TO 361 SCT

ಕೇರಳದಲ್ಲಿ ಮತ್ತೊಂದು ಕೊರೋನಾ ವೈರಸ್ ಪ್ರಕರಣ ಪತ್ತೆ; ಚೀನಾದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ

ಕೆಲವು ದಿನಗಳ ಹಿಂದೆ ಚೀನಾದಿಂದ ಕೇರಳಕ್ಕೆ ವಾಪಾಸಾಗಿದ್ದ ವ್ಯಕ್ತಿಯಲ್ಲಿ ಕೊರೋನಾ ವೈರಸ್​ನ ಕೆಲವು ಲಕ್ಷಣಗಳು ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆಯಿಂದ ಆತನನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ.

Sushma Chakre | news18-kannada
Updated:February 3, 2020, 8:45 AM IST
ಕೇರಳದಲ್ಲಿ ಮತ್ತೊಂದು ಕೊರೋನಾ ವೈರಸ್ ಪ್ರಕರಣ ಪತ್ತೆ; ಚೀನಾದಲ್ಲಿ ಸಾವಿನ ಸಂಖ್ಯೆ 361ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ತಿರುವನಂತಪುರಂ (ಫೆ. 3): ಚೀನಾದಲ್ಲಿ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಈಗಾಗಲೇ 361 ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಈಗಾಗಲೇ 300ಕ್ಕೂ ಅಧಿಕ ಜನರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತಂದು, ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಇದೀಗ 2ನೇ ವಿಮಾನದ ಮೂಲಕ ಚೀನಾದಲ್ಲಿರುವ ಭಾರತೀಯರನ್ನು ಕರೆತರಲಾಗಿದೆ. ಇದರ ನಡುವೆ ಕೇರಳದಲ್ಲಿ ಕೊರೋನಾ ವೈರಸ್​​ನ 2ನೇ ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ ಆತಂಕ ಮೂಡಿಸಿದೆ.

3 ದಿನಗಳ ಹಿಂದೆ ಚೀನಾದ ವುಹಾನ್​ನಿಂದ ಶಿಕ್ಷಣ ಮುಗಿಸಿ, ಕೇರಳಕ್ಕೆ ಬಂದಿದ್ದ ಓರ್ವ ವ್ಯಕ್ತಿಯಲ್ಲಿ ಕೊರೋನಾ ವೈರಸ್​ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಪ್ರತ್ಯೇಕವಾಗಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಇದೀಗ ಎರಡನೇ ಸೋಂಕು ಪ್ರಕರಣ ಪತ್ತೆಯಾಗಿದೆ. ರೋಗಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಚೀನಾದಿಂದ ವಾಪಾಸಾಗಿದ್ದ ವ್ಯಕ್ತಿಯಲ್ಲಿ ಕೊರೋನಾ ವೈರಸ್​ನ ಕೆಲವು ಲಕ್ಷಣಗಳು ಕಂಡುಬಂದಿದ್ದರಿಂದ ಮುನ್ನೆಚ್ಚರಿಕೆಯಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪುಣೆಯ ಲ್ಯಾಬ್​ನಿಂದ ವರದಿ ಬಂದ ಬಳಿಕ ಅದು ಖಚಿತವಾಗಲಿದೆ ಎಂದು ಕೇರಳದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Video: ಸಾಯುವುದಾದರೆ ಚೀನಾದಲ್ಲೇ ಸಾಯಿರಿ; ಕೊರೋನಾ ಭೀತಿಯಲ್ಲಿರುವ ಪಾಕ್​ ವಿದ್ಯಾರ್ಥಿಗಳಿಗೆ ಸರ್ಕಾರದ ಸಂದೇಶ!

ಚೀನಾದಿಂದ ಕೇರಳಕ್ಕೆ ವಾಪಾಸಾಗಿರುವ 1,793 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 1,723 ಮಂದಿಯನ್ನು ಪ್ರತ್ಯೇಕ ಕೊಠಡಿಗಳಲ್ಲಿ ಮತ್ತು 70 ಮಂದಿಯನ್ನು ಆಯ್ದ ಪ್ರತ್ಯೇಕ ವ್ಯವಸ್ಥಾ ಕೇಂದ್ರಗಳಲ್ಲಿ ಇರಿಸಲಾಗಿದೆ. ಚೀನಾದ ವುಹಾನ್​ನಿಂದ ಭಾರತಕ್ಕೆ ಬಂದ ಕೇರಳ ಮೂಲದ ವಿದ್ಯಾರ್ಥಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿತ್ತು. ಅದು ಭಾರತದಲ್ಲಿ ಪತ್ತೆಯಾದ ಮೊದಲ ಕೊರೋನಾ ವೈರಸ್ ಪ್ರಕರಣವಾಗಿತ್ತು. ಆ ವಿದ್ಯಾರ್ಥಿಯ ಜೊತೆಗೆ ಪ್ರಯಾಣಿಸಿದ್ದ ಪಶ್ಚಿಮ ಬಂಗಾಳದ 8 ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿದೆ. ಸೋಂಕು ಪೀಡಿತನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಓರ್ವ ದೆಹಲಿಯ ವ್ಯಕ್ತಿಯನ್ನೂ ನಿಗಾದಲ್ಲಿ ಇರಿಸಲಾಗಿದೆ.

ಚೀನಾದಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 361ಕ್ಕೆ ಏರಿಕೆಯಾಗಿದೆ. ಭಾನುವಾರ ಒಂದೇ ದಿನ 57 ಜನ ಸಾವನ್ನಪ್ಪಿರುವುದು ಆತಂಕಕ್ಕೀಡುಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತದಿಂದ ಯಾರೂ ಚೀನಾಗೆ ತೆರಳದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಒಟ್ಟು 20 ದೇಶಗಳಿಗೆ ಹರಡಿದೆ ಎನ್ನಲಾದ ಕೊರೋನಾ ವೈರಸ್ ಇಡೀ ವಿಶ್ವದಲ್ಲಿ ಸಾವಿನ ಭೀತಿ ಸೃಷ್ಟಿಸಿದೆ.

 
First published: February 3, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories