ಬೆಂಗಳೂರು(ಏ. 10): ನಗರದಲ್ಲಿ ಲಾಕ್ ಡೌನ್ ಇದ್ದರೂ ಜನರು ತಲೆ ಕೆಡಿಸಿಕೊಳ್ಳದೇ ನಿರ್ಬೀಢೆಯಿಂದ ಸಾರ್ವಜನಿಕವಾಗಿ ಅಡ್ಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಬೆಂಗಳೂರನ್ನು ಸೀಲ್ ಡೌನ್ ಮಾಡಲಾಗುತ್ತಿದೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೆಂಗಳೂರು ಪೊಲೀಸರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಬೆಂಗಳೂರಿನ ಎರಡು ವಾರ್ಡ್ಗಳಲ್ಲಿ ಮಾತ್ರ ಸೀಲ್ ಡೌನ್ ಘೋಷಿಸಲಾಗಿದೆ. ಇತರೆಡೆ ಲಾಕ್ ಡೌನ್ ಮಾತ್ರ ಮುಂದುವರಿಯಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ಸೀಲ್ ಡೌನ್ ಘೋಷಿಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಈ ಸುದ್ದಿ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ವಾರ್ಡ್ ನಂಬರ್ 134 (ಬಾಪೂಜಿನಗರ) ಮತ್ತು 135 (ಪಾದರಾಯನಪುರ)ರಲ್ಲಿ ಮಾತ್ರ ಸೀಲ್ ಡೌನ್ ಘೋಷಿಸಲಾಗಿದೆ. ಇಲ್ಲಿ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಮನೆಗೇ ಸರಬರಾಜು ಮಾಡಲಾಗುತ್ತಿದೆ. ಈ ವಾರ್ಡ್ನ ಜನರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಥ್ಯಾಂಕ್ಯೂ ಕೊರೋನಾವೈರಸ್’ –ಸೋಂಕು ತಗುಲಿದ ಲಂಡನ್ ವೈದ್ಯ, ಕನ್ನಡಿಗ ನೀರಜ್ ಪಾಟೀಲ್ ಹೀಗೆ ಉದ್ಗರಿಸಿದ್ದು ಯಾಕೆ ಗೊತ್ತಾ?
ಬಾಪೂಜಿನಗರ ಮತ್ತು ಪಾದರಾಯನಪುರದಲ್ಲಿ ಹೊಸ ಪ್ರಕರಣಗಳು ಕಂಡು ಬಂದಿದೆ. ಆ ಪ್ರದೇಶದಲ್ಲಿ ಸೋಂಕು ವ್ಯಾಪಿಸುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡುವ ಕ್ರಮ ಜರುಗಿಸಲಾಗಿದೆ.
ಇದೇ ವೇಳೆ, ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಕೂಡ ಇಡೀ ಬೆಂಗಳೂರು ಸೀಲ್ ಡೌನ್ ಆಗುತ್ತೆ ಎಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಬಾಪೂಜಿ ನಗರ ಮತ್ತು ಪಾದರಾಯಪುರ ವಾರ್ಡ್ಗಳಲ್ಲಿ ಹೊಸ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇಲ್ಲಿ ಮಾತ್ರ ಸೀಲ್ ಡೌನ್ ಆದೇಶ ನೀಡಲಾಗಿದೆ. ಬೇರೆ ವಾರ್ಡ್ಗಳಲ್ಲಿರುವ ಜನರು ಸುಳ್ಳು ಸುದ್ದಿಗೆ ಕಿವಿಗೊಟ್ಟು ಗಾಬರಿಯಾಗಿ ಸಾಮಾನು ಕೊಳ್ಳಲು ನುಗ್ಗದಿರಿ ಎಂದು ಕೋರಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ