COVID-19 - ಕೊರೋನಾ ವೈರಸ್ ಅನ್ನು ಸೋಲಿಸಬಲ್ಲ ಪ್ರತಿಕಾಯ 47D11 ಈಗ ಲ್ಯಾಬ್​ನಲ್ಲಿ ಸಿದ್ಧ

ಈ ಪ್ರತಿಕಾಯದ ಮೇಲೆ ಇನ್ನಷ್ಟು ಸಂಶೋಧನೆಯಾಗಬೇಕಿದೆ. ಮನುಷ್ಯನ ದೇಹಕ್ಕೆ ಸೂಕ್ತವಾಗುವಂತೆ ಈ ಪ್ರತಿಕಾಯವನ್ನು ಪುನರ್​ರಚಿಸಬೇಕಿದೆ ಎಂದು ನೆದರ್​ಲೆಂಡ್ಸ್​ನ ಈ ವಿಜ್ಞಾನಿಗಳ ತಂಡ ಹೇಳಿದೆ.

news18-kannada
Updated:May 5, 2020, 3:07 PM IST
COVID-19 - ಕೊರೋನಾ ವೈರಸ್ ಅನ್ನು ಸೋಲಿಸಬಲ್ಲ ಪ್ರತಿಕಾಯ 47D11 ಈಗ ಲ್ಯಾಬ್​ನಲ್ಲಿ ಸಿದ್ಧ
ಪ್ರಾತಿನಿಧಿಕ ಚಿತ್ರ
  • Share this:
ನೂತನ ಕೊರೋನಾ ವೈರಸ್ ಕೋವಿಡ್-19 ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಪ್ರಯತ್ನಗಳಾಗುತ್ತಿವೆ. ಔಷಧ, ಲಸಿಕೆ ತಯಾರಿಗೆ ಅವಿರತ ಶ್ರಮ ಹಾಕಲಾಗುತ್ತಿದೆ. ಅಲ್ಲಲ್ಲಿ ಒಂದಷ್ಟು ಪ್ರಯೋಗಗಳು ಯಶಸ್ವಿಯಾಗಿವೆ. ಆದರೆ, ಯಾವುದೂ ಕೂಡ ಅಂತಿಮಗೊಂಡಿಲ್ಲ. ಈಗ ನೆದರ್​ಲೆಂಡ್ಸ್ ದೇಶದ ಉಟ್ರೆಷ್ಟ್ ಯೂನಿವರ್ಸಿಟಿಯ ವಿಜ್ಞಾನಿಗಳ ತಂಡವೊಂದು ಕೊರೋನಾ ವೈರಸ್​ಗೆ ಪ್ರತಿಕಾಯ ತಯಾರಿಸಿರುವುದಾಗಿ ಹೇಳಿಕೊಂಡಿದೆ. ಲ್ಯಾಬ್​ನಲ್ಲಷ್ಟೇ ಅವರು ಪ್ರತಿಕಾಯ ರೂಪಿಸಿದ್ಧಾರೆ. ಇದು ಮನುಷ್ಯರ ಮೇಲೆ ಕೆಲಸ ಮಾಡುವುದು ಹೌದಾದಲ್ಲಿ ಹೊಸ ಭರವಸೆಯ ಹೊಂಗಿರಣ ಮೂಡಿದೆ ಎನ್ನಬಹುದು.

ಬೆರೆಂಡ್ ಜನ್ ಬಾಷ್ ಮತ್ತವರ ತಂಡವು ಈ ಸಾಧನೆ ಮಾಡಿದೆ. ಇವರು ಏಕತದ್ರೂಪಿ ಪ್ರತಿಕಾಯವನ್ನು (Monoclonal Antibodies) ಪ್ರಯೋಗಾಲಯದಲ್ಲಿ ರೂಪಿಸಿದ್ಧಾರೆ. ಕೋಶಗಳಲ್ಲಿ ಸೋಂಕಿಸಲಾದ ಕೋವಿಡ್-19 ವೈರಸ್ ಅನ್ನು ಈ ಪ್ರತಿಕಾಯಗಳು ನಾಶ ಮಾಡುವಲ್ಲಿ ಯಶಸ್ವಿಯಾಗಿವೆ.

ಇದನ್ನೂ ಓದಿ: ಯುಎಇ ದೇಶವೊಂದರಿಂದಲೇ ಭಾರತಕ್ಕೆ ಮರಳಲು ಹೆಸರು ನೊಂದಾಯಿಸಿದ ಜನರು ಎಷ್ಟು ಗೊತ್ತಾ?

ಈ ಪ್ರತಿಕಾಯಕ್ಕೆ 47D11 ಎಂದು ಕರೆಯಲಾಗಿದೆ. ಕೊರೋನಾ ವೈರಸ್ ಹೊರಮೈನಲ್ಲಿ ಪ್ರೋಟೀನ್​ಗಳು ಮುಳ್ಳಿನಂತೆ ಚಾಚಿರುತ್ತವೆ. ಮಾನವನ ಕೋಶದೊಳಗೆ ತೂರಿಕೊಳ್ಳಲು ಈ ಪ್ರೋಟೀನ್ ಮುಳ್ಳುಗಳೇ ಕಾರಣವಾಗುತ್ತವೆ. ಲ್ಯಾಬ್​ನಲ್ಲಿ ರೂಪಿಸಲಾಗಿರುವ 47D11 ಪ್ರತಿಕಾಯವು ಕೊರೋನಾ ವೈರಸ್​ನ ಈ ಪ್ರೋಟೀನ್​ಗಳನ್ನ ನಾಶ ಮಾಡುತ್ತದೆ. ಕೋವಿಡ್-19 ಅಷ್ಟೇ ಅಲ್ಲ ಸಾರ್ಸ್ ವೈರಸ್ ಅನ್ನೂ ಈ ಪ್ರತಿಕಾಯ ಪರಿಣಾಮಕಾರಿಯಾಗಿ ಎದುರಿಸಬಲ್ಲುದು ಎಂದು ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.

ದೇಹಕ್ಕೆ ಪ್ರತಿಕೂಲವಾಗುವಂತಹ ವೈರಸ್ ಅಥವಾ ಬ್ಯಾಕ್ಟೀರಿಯಾದ ಪ್ರವೇಶವಾದರೆ ಸಹಜವಾಗಿಯೇ ದೇಹದೊಳಗೆ ಪ್ರತಿಕಾಯಗಳ ಉತ್ಪತ್ತಿಯಾಗುತ್ತದೆ. ಈ ಪ್ರತಿಕಾಯಗಳೇ ವೈರಸ್ ವಿರುದ್ಧ ಹೋರಾಡಿ ನಾಶ ಮಾಡುತ್ತವೆ. ವಿಜ್ಞಾನಿಗಳು ಇಲಿಯಲ್ಲಿ ಕೊರೋನಾ ವೈರಸ್​ನ ಪ್ರೋಟೀನ್​ಗಳಿಗೆ ಪ್ರತಿಯಾಗಿ ವಿವಿಧ ಪ್ರತಿಕಾಯಗಳನ್ನ ಸೃಷ್ಟಿಸಿದ್ದಾರೆ. ಅದರಲ್ಲಿ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಪ್ರತಿಕಾಯವನ್ನು ಪತ್ತೆ ಮಾಡಿದ್ದಾರೆ. ಅದೇ 47ಡಿ11 ಪ್ರತಿಕಾಯ.

ಇದನ್ನೂ ಓದಿ: ನಿಮ್ಮನ್ನು ಆಪ್ತರಾಗಿ ಪಡೆದ ನಾವೇ ಧನ್ಯರು; ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ ಕಪೂರ್​ ಫ್ಯಾಮಿಲಿ

ಈ ಪ್ರತಿಕಾಯದ ಮೇಲೆ ಇನ್ನಷ್ಟು ಸಂಶೋಧನೆಯಾಗಬೇಕಿದೆ. ಮನುಷ್ಯನ ದೇಹಕ್ಕೆ ಸೂಕ್ತವಾಗುವಂತೆ ಈ ಪ್ರತಿಕಾಯವನ್ನು ಪುನರ್​ರಚಿಸಬೇಕಿದೆ ಎಂದು ನೆದರ್​ಲೆಂಡ್ಸ್​ನ ಈ ವಿಜ್ಞಾನಿಗಳ ತಂಡ ಹೇಳಿದೆ.ಲ್ಯಾಬ್​ನಲ್ಲಿ ಈ ಪ್ರಯೋಗ ನಡೆದಿದೆ. ಆದರೆ, ಮುಂದಿನ ಕೆಲ ಪರೀಕ್ಷಾ ಹಂತಗಳನ್ನು ಇದು ದಾಟಬೇಕು. ಮನುಷ್ಯರ ಮೇಲೆ ಪ್ರಯೋಗ ನಡೆಸಬೇಕು. ಅವೆಲ್ಲಾ ಸರಿಯಾಗಿ ಆದಲ್ಲಿ ಔಷಧ ತಯಾರಿಕೆಗೆ ಸಿದ್ಧವಾಗಬಹುದು.

ಮಾನೊಕ್ಲೋನಲ್ ಆ್ಯಂಟಿಬಾಡಿ ಎಂಬುದು ಜಗತ್ತಿನಾದ್ಯಂತ ವಿವಿಧ ಔಷಧ ತಯಾರಿಕೆಗೆ ಸಹಾಯಕವಾಗಿದೆ. ಅನೇಕ ಕ್ಯಾನ್ಸರ್ ರೋಗಗಳ ಚಿಕಿತ್ಸೆಗೂ ಇದು ಉಪಯುಕ್ತವೆನಿಸಿದೆ.

ಮಾಹಿತಿ ಕೃಪೆ: Bloomberg.com

First published: May 5, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading