HOME » NEWS » Coronavirus-latest-news » SCIENTIFIC REASON BEHIND NIGHT CURFEW TO CURB COVID 19 SPREAD SNVS

Night Curfew - ನೈಟ್ ಕರ್ಫ್ಯೂ ಎಷ್ಟರಮಟ್ಟಿಗೆ ಸಹಾಯಕಾರಿ? ಪ್ರಬಲ ಕಾರಣ ಇದೆಯಾ?

ರಾತ್ರಿಯ ತಂಪು ವಾತಾವರಣದಲ್ಲಿ ವೈರಸ್ ಹೆಚ್ಚು ಚದುರುವುದಿಲ್ಲ. ಹೀಗಾಗಿ ರಾತ್ರಿ ಹೊತ್ತು ಕೊರೋನಾ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಮೇಲಾಗಿ ಇಂಡೋರ್ ಪಾರ್ಟಿಗಳೆಲ್ಲಾ ನಡೆಯುವುದು ರಾತ್ರಿಯಲ್ಲೇ ಹೆಚ್ಚು. ಹೀಗಾಗಿ ನೈಟ್ ಕರ್ಫ್ಯೂ ಪ್ರಯೋಜನಕಾರಿ ಎಂಬ ವಾದ ಇದೆ.

news18-kannada
Updated:April 9, 2021, 11:10 AM IST
Night Curfew - ನೈಟ್ ಕರ್ಫ್ಯೂ ಎಷ್ಟರಮಟ್ಟಿಗೆ ಸಹಾಯಕಾರಿ? ಪ್ರಬಲ ಕಾರಣ ಇದೆಯಾ?
ನೈಟ್ ಕರ್ಫ್ಯೂ
  • Share this:
ದೇಶಾದ್ಯಂತ ಕೊರೋನಾದ ಎರಡನೇ ಅಲೆ ಬಹಳ ಪ್ರಬಲವಾಗಿ ಎದ್ದಿದೆ. ದಾಖಲೆ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಮಹಾರಾಷ್ಟ್ರ ನಂತರ ಕರ್ನಾಟಕದಲ್ಲೇ ಅತಿ ಹೆಚ್ಚು ಕೊರೋನಾ ಕೇಸ್​ಗಳು ಬರುತ್ತಿವೆ. ರಾಜ್ಯದಲ್ಲಿ ಶನಿವಾರದಿಂದ 10 ದಿನಗಳ ಕಾಲ ಕೊರೋನಾ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ವೇಳೆ ಯಾರೂ ಕೂಡ ಗುಂಪುಗೂಡುವಂತಿಲ್ಲ, ಹೋಟೆಲ್, ರೆಸ್ಟೋರೆಂಟ್, ಪಾರ್ಟಿ ಇತ್ಯಾದಿಗಳನ್ನು ಮಾಡುವಂತಿಲ್ಲ. ಈಗಾಗಲೆ ಕೆಲ ದಿನಗಳ ಹಿಂದಿನಿಂದಲೂ ಮುಂಬೈ, ದೆಹಲಿ ಮೊದಲಾದ ದೇಶದ ಕೆಲವೆಡೆ ನೈಟ್ ಕರ್ಫ್ಯೂ ಮೊದಲಾದ ನಿರ್ಬಂಧಗಳು ಜಾರಿಯಲ್ಲಿವೆ. ಕಳೆದ ಒಂದು ವರ್ಷದಿಂದ ದೇಶದ ವಿವಿಧೆಡೆ ನಾವು ಹಲವು ಬಾರಿ ನೈಟ್ ಕರ್ಫ್ಯೂವನ್ನು ಕಂಡಿದ್ದೇವೆ. ಸಾಕಷ್ಟು ಬಾರಿ ಇದರ ಬಗ್ಗೆ ಅಚ್ಚರಿ ಪಟ್ಟಿದ್ದೇವೆ. ನೈಟ್ ಕರ್ಫ್ಯೂನಿಂದ ಕೊರೋನಾ ಹೇಗೆ ಕಂಟ್ರೋಲ್ ಆಗುತ್ತೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ಇದ್ದೇವೆ. ಆದರೆ, ನೈಟ್ ಕರ್ಫ್ಯೂ ಜಾರಿ ಮಾಡುತ್ತಿರುವುದು ಸುಮ್ಮನೆಯಾ? ಅದರಿಂದ ಪ್ರಯೋಜನವೇ ಇಲ್ಲವಾ?

ನೈಟ್ ಕರ್ಫ್ಯೂನಿಂದ ಒಂದಷ್ಟು ಪ್ರಯೋಜನ ಇದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ ಶ್ರೀನಾಥ್ ರೆಡ್ಡಿ ಹೇಳುತ್ತಾರೆ. “ಕೆಲ ಪ್ರಾಯೋಗಿಕ ಹಾಗೂ ತಾತ್ವಿಕ ಕಾರಣಗಳಿಗೆ ನೈಟ್ ಕರ್ಫ್ಯೂ ಕ್ರಮ ಸ್ವಾಗತಾರ್ಹ. ಒಳಾಂಗಣದಲ್ಲಿ ನಡೆಯುವ ಪಾರ್ಟಿಗಳು, ಸಭೆ ಸಮಾರಂಭಗಳು, ಹೋಟೆಲ್ ರೆಸ್ಟೋರೆಂಟ್ ಇತ್ಯಾದಿಗಳು ಒಂದು ರೀತಿ ಕೊರೋನಾದ ಸೂಪರ್ ಸ್ಪ್ರೆಡರ್​ಗಳಾಗಿರುತ್ತವೆ. ನೈಟ್ ಕರ್ಫ್ಯೂನಂಥ ನಿರ್ಬಂಧಗಳ ಮೂಲಕ ಈ ಸೂಪರ್ ಸ್ಪ್ರೆಡರ್ ಅನ್ನು ನಿಯಂತ್ರಿಸಲು ಸಾಧ್ಯವಿದೆ” ಎಂದು ಶ್ರೀನಾಥ್ ರೆಡ್ಡಿ ವಿವರಿಸುತ್ತಾರೆ.

“ರಾತ್ರಿಯ ತಂಪಾದ ಹವೆಯಲ್ಲಿ ವೈರಸ್ ಬೇಗ ಚದುರುವುದಿಲ್ಲ. ಒತ್ತೊಟ್ಟಾಗಿ ಇರುತ್ತದೆ. ಹಾಗೆಯೇ, ಹಗಲಿಗೆ ಹೋಲಿಸಿದರೆ ರಾತ್ರಿಯ ಹೊತ್ತು ಅತಿನೇರಳೆ ಕಿರಣದ (Ultra Violet Light) ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ಹೊರಗಿನ ಬಹಿರಂಗ ಸ್ಥಳದಲ್ಲೂ ರಾತ್ರಿಯ ಹೊತ್ತು ವೈರಸ್ ಬದುಕುಳಿಯುವ ಸಾಧ್ಯತೆ ಹೆಚ್ಚೇ ಇರುತ್ತದೆ” ಎಂಬುದು ಕೆ ಶ್ರೀನಾಥ್ ರೆಡ್ಡಿ ಅವರು ವೈಜ್ಞಾನಿಕ ಕಾರಣವನ್ನೂ ಮುಂದಿಡುತ್ತಾರೆ.

ಇದನ್ನೂ ಓದಿ: ನಿರ್ಲಕ್ಷ್ಯ ಬೇಡ; ಜಾಗರುಕತೆ ಅವಶ್ಯ: ಮೈಕ್ರೋ ಕಂಟೈನ್ಮೆಂಟ್​ ವಲಯ ಬಗ್ಗೆ ಗಮನಹರಿಸಿ ಪ್ರಧಾನಿ ಕರೆ

ಇಂಡೋರ್ ಪಾರ್ಟಿಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತೇ ಹೆಚ್ಚಾಗಿ ನಡೆಯುವುದು. ಬೆಂಗಳೂರು, ಮುಂಬೈ, ದೆಹಲಿಯಂತ ಮಹಾನಗರಿಗಳಲ್ಲಿ ನೈಟ್ ಲೈಫ್ ಹೆಚ್ಚೇ ಇದೆ. ಅದರಲ್ಲೂ ಮುಂಬೈನ ನೈಟ್ ಲೈಫ್​ಗೆ ಬಹಳ ಖ್ಯಾತಿ ಇದೆ. ಕಟ್ಟಡದೊಳಗೆ ಮೋಜು ಮಸ್ತಿ ಇತ್ಯಾದಿ ಹೆಚ್ಚು ನಡೆಯುತ್ತವೆ. ಹೀಗಾಗಿ, ನೈಟ್ ಕರ್ಫ್ಯೂ ಮಾಡಿದರೆ ಇಂಥವನ್ನು ನಿಯಂತ್ರಿಸುವ ಆಶಯ ಇದೆ. ಹಾಗೆಯೇ, ಮುಂಬೈನಂಥ ನಗರಗಳಿಗೆ ಇದರಿಂದ ಆರ್ಥಿಕ ಪೆಟ್ಟೂ ಬಿದ್ದರೆ ಅಚ್ಚರಿ ಇಲ್ಲ.

ಇನ್ನು, ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಆಕಾಶ್ ಆಸ್ಪತ್ರೆಯ ವೈದ್ಯ ಡಾ. ಸುನೀಲ್ ಅವರೂ ಕೂಡ ನೈಟ್ ಕರ್ಫ್ಯೂ ಬಗ್ಗೆ ಇದೇ ಅಭಿಪ್ರಾಯ ಪುನರುಚ್ಚರಿಸಿದ್ದಾರೆ. ನೈಟ್ ಕರ್ಫ್ಯೂನಿಂದ ಕೊರೋನಾವನ್ನು ಹತೋಟಿಗೆ ತರಲು ಸಾಧ್ಯವಿಲ್ಲವಾದರೂ ಜನರ ಮನಸ್ಸಿನಲ್ಲಿ ಕೊರೋನಾ ಬಗ್ಗೆ ಒಂದು ಎಚ್ಚರಿಕೆ ಮೂಡಿಸಲು ಇದು ಮಾನಸಿಕವಾಗಿ ಪ್ರಭಾವಿಯಾಗಬಲ್ಲುದು ಎಂಬುದು ಡಾ. ಸುನೀಲ್ ಅವರ ಅನಿಸಿಕೆ.

ಆದರೆ ಬಹಳಷ್ಟು ಪರಿಣಿತರಿಗೆ ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ಇದೆ. ಹಗಲಿನಲ್ಲಿ ಜನಜಾತ್ರೆ ನಿರ್ಮಿಸಲು ಅನುವು ಮಾಡಿಕೊಟ್ಟು, ಜನಸಂದಣಿ ಇಲ್ಲದ ರಾತ್ರಿ ಹೊತ್ತಿನಲ್ಲಿ ಕರ್ಫ್ಯೂ ಹೇರುವುದು ಎಷ್ಟು ಸರಿ ಎಂದು ಈ ಕ್ರಮದ ಔಚಿತ್ಯವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಇವರ ಪ್ರಕಾರ, ಜನರು ಗುಂಪುಗೂಡುವ ಮಾರುಕಟ್ಟೆ, ಸಿನಿಮಾ ಮಂದಿರ, ಸಭೆ ಸಮಾರಂಭ, ಚುನಾವಣಾ ಸಮಾವೇಶ ಇತ್ಯಾದಿಗಳಲ್ಲಿ ಕಠಿಣ ನಿರ್ಬಂಧಗಳನ್ನ ಹಾಕಬೇಕು. ಕಚೇರಿ ಹೊರತುಪಡಿಸಿ ಬೇರೆಡೆ ಒಳಾಂಗಣದಲ್ಲಿ ಕಾರ್ಯಕ್ರಮ ಇತ್ಯಾದಿ ನಡೆಸುವುದಕ್ಕೆ ಅವಕಾಶ ಕೊಡಬಾರದು ಎಂಬಿತ್ಯಾದಿ ಸಲಹೆಗಳನ್ನ ಪರಿಣಿತರು ನೀಡುತ್ತಾರೆ. ಆದರೆ, ಸರ್ಕಾರಕ್ಕೆ ನೈಟ್ ಕರ್ಫ್ಯೂ ಎಂಬುದು ಹೆಚ್ಚು ರಿಸ್ಕ್ ಇಲ್ಲದ ಸುಲಭ ಮಾರ್ಗವಾಗಿದೆ.
Published by: Vijayasarthy SN
First published: April 9, 2021, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories