Coronavirus: ಶಾಲೆ ಆರಂಭ- ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಹೀಗೆ ಮಾಡಿ

Covid19: ಮಕ್ಕಳಲ್ಲಿ ಸಹ ದೊಡ್ಡವರಂತೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಸೋಂಕಿನ ಪ್ರಮಾಣ ಹಾಗೂ ಹರಡುವಿಕೆಯ ಪ್ರಮಾಣ ಒಂದೇ ಇರುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
18 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸಧ್ಯ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಅವಶ್ಯಕತೆ ಇದೆ. ಕೊರೊನಾ ಸಮಯದಲ್ಲಿ ಅವರ ಆರೈಕೆಯ ಬಗ್ಗೆ ಪೋಷಕರು ಹೆಚ್ಚು ಗಮನ ನೀಡಬೇಕು. ಅವರಿಗೆ ಯಾವುದೇ ಲಸಿಕೆ ಕೂಡ ಇಲ್ಲದ ಕಾರಣ, ಕೊರೊನಾ ಮತ್ತು ಅದರ ಯಾವುದೇ ರೂಪಾಂತರ ಸೋಂಕುಗಳು ಅವರಿಗೆ ಕಾಡದಂತೆ ಎಚ್ಚರಿಕೆವಹಿಸಬೇಕು. ಮಕ್ಕಳಲ್ಲಿ ಸಹ ದೊಡ್ಡವರಂತೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಸೋಂಕಿನ ಪ್ರಮಾಣ ಹಾಗೂ ಹರಡುವಿಕೆಯ ಪ್ರಮಾಣ ಒಂದೇ ಇರುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ ಎಂದು ಆಸ್ಟರ್ ಡಿಎಂ ಹೆಲ್ತ್‌ಕೇರ್ ನ ಕನ್ಸಲ್ಟೆಂಟ್ ಪೀಡಿಯಾಟ್ರಿಶಿಯನ್ ಜೀಸನ್ ಸಿ ಉನ್ನಿ ಹೇಳಿದ್ದಾರೆ.

ಹೆಚ್ಚಿನ ಮಕ್ಕಳಲ್ಲಿ ಲಕ್ಷಣರಹಿತ ಅಥವಾ ಸಣ್ಣ ಪ್ರಮಾಣದ ಸೋಂಕು ಇದ್ದರೂ ಸಹ, ಅದು ಇತರರಿಗೆ ಬಹು ಬೇಗನೆ ಹರಡಬಹುದು. ಇನ್ನು ಹೆಚ್ಚು ಸೋಂಕು ಹೊಂದಿರುವ ಮಕ್ಕಳು ಮತ್ತು ಕೊಮೊರ್ಬಿಡಿಟಿ ಹೊಂದಿರುವ ನವಜಾತ ಶಿಶುಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ.

ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಕೆಲ ಸಲಹೆಗಳು ಇಲ್ಲಿದೆ:

ಈಗಾಗಲೇ ಭಾರತದ ಅನೇಕ ರಾಜ್ಯಗಳು ಶಾಲೆಗಳನ್ನು ಆರಂಭಿಸಲು ನಿರ್ಧರಿಸಿವೆ. ಕರ್ನಾಟಕದಲ್ಲಿ ಸಹ ಇಂದಿನಿಂದ ಶಾಲೆಗಳು ಆರಂಭವಾಗಲಿದೆ. ಆದರೆ ಕೊರೊನಾ ಸಮಯದಲ್ಲಿ ಮಕ್ಕಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರತಿ ಸಮಯದಲ್ಲಿಯೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದನ್ನ ಮರೆಯಬಾರದು. ಆದರೆ ಮಕ್ಕಳು, ಅವರಿಗೆ ಹೆಚ್ಚು ತಿಳಿಯುವುದಿಲ್ಲ. ಪೋಷಕರಾಗಿ ಅವರಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನ ತಿಳಿ ಹೇಳಬೇಕು. ಒಂದು ವರ್ಷದ ನಂತರ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಮತ್ತೆ ಭೇಟಿ ಮಾಡುವ ಉತ್ಸಾಹವು ಮಕ್ಕಳಲ್ಲಿ ಹೆಚ್ಚಿರುತ್ತದೆ. ಮಕ್ಕಳು ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಅದಕ್ಕೆ ನೀವು ಮನೆಯಲ್ಲಿ ಅದರ ಅನುಕರಣೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹೇಳಿಕೊಡಿ.

ಇದನ್ನೂ ಒದಿ: ಮೊದಲ ದಿನ ಉತ್ತಮ ಹಾಜರಾತಿಯ ನಿರೀಕ್ಷೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್; ಆ.23ರಿಂದ ಶಾಲೆಗಳು ಆರಂಭ

ಇನ್ನು ಊಟ, ನೀರಿನ ಬಾಟಲಿಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಹಂಚಿಕೊಳ್ಳದಿರುವುದು ಸಹ ಈ ಸಮಯದಲ್ಲಿ ಮುಖ್ಯ. ಮಕ್ಕಳಿಗೆ ಮೊದಲೆಲ್ಲ ಹಂಚಿಕೊಂಡು ತಿನ್ನುವುದು ಒಳ್ಳೆಯದು ಎಂದು ಹೇಳಿ ಕೊಟ್ಟಿರುತ್ತೇವೆ, ಆದರೆ ಈಗ ಅದು ಆಹಾರದ ದೃಷ್ಟಿಯಿಂದ ಅಪಾಯ. ಹಾಗಾಗಿ ಮಕ್ಕಳಿಗೆ ಸ್ನೇಹಿತರ ಜೊತೆ ಯಾವುದೇ ವಸ್ತುಗಳನ್ನು ಹಂಚಿಕೊಳ್ಳಬೇಡಿ ಎಂದು ಹೇಳಿ. ಜೊತೆಗೆ ಪ್ರತಿ ಗಂಟೆಗೆ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಲು ಮಕ್ಕಳಿಗೆ ಹೇಳಿಕೊಡಿ. ಮಕ್ಕಳು ಆಟವಾಡುವಲ್ಲಿ ಮಗ್ನರಾಗಿರುತ್ತಾರೆ, ಅಥವಾ ಅವರಿಗೆ ಇವುಗಳ ಬಗ್ಗೆ ಅರಿವು ಕಡಿಮೆ ಇರುವ ಕಾರಣ ಮನೆಯಲ್ಲಿ ಸಹ ಇದನ್ನು ಮಾಡಿ ಅಭ್ಯಾಸ ಮಾಡಿಸಿ.

ಮಾಸ್ಕ್ ಧರಿಸುವುದು ಬಹಳ ಮುಖ್ಯವಾದ ಅಭ್ಯಾಸ. . ಯಾವಾಗಲೂ ಮಾಸ್ಕ್ ಧರಿಸುವುದು ಮುಖ್ಯ ಎಂದು ತಿಳಿಸಿ. ಮಕ್ಕಳು ಮನೆಯಿಂದ ಹೆಚ್ಚು ಹೊರಗೆ ಹೋಗದ ಕಾರಣ ಮಾಸ್ಕ್ ಧರಿಸುವ ಅಭ್ಯಾಸ ಕಡಿಮೆ ಇರುತ್ತದೆ. ಅವರಿಗೆ ಆರಾಮದಾಯಕ ಎನಿಸುವ ಮಾಸ್ಕ್​ಗಳನ್ನು ಹಾಕಿ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಊಟ ಮತ್ತು ನೀರು ಕುಡಿಯುವಾಗ ಬಿಟ್ಟು ಬೇರೆ ಸಮಯದಲ್ಲಿ ಮಾಸ್ಕ್ ತೆಗೆಯಬಾರದು ಎಂದು ಹೇಳಿ.

ಕೊರೊನಾ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ. ಸ್ನೇಹಿತರೊಂದಿಗೆ ಆಟವಾಡಲು, ಅಥವಾ ಕುಟುಂಬದೊಂದಿಗೆ ಹೊರಗೆ ಹೋಗಲು ಅಥವಾ ಶಾಲೆಗೆ ಮತ್ತು ತರಬೇತಿ ಯಾವುದಕ್ಕೆ ಹೋಗಲಿ, ಮಕ್ಕಳು ತಮ್ಮೊಂದಿಗೆ ಪ್ರತ್ಯೇಕ ಸ್ಯಾನಿಟೈಸರ್‌ಗಳನ್ನು ತೆಗೆದುಕೊಂಡು ಹೋಗಬೇಕು ಎಂಬುದನ್ನ ಮರೆಯಬೇಡಿ. ಬೇರೆ ವಸ್ತುಗಳನ್ನು ಬಳಕೆ ಮಾಡುತ್ತಿದ್ದಲ್ಲಿ ಅಥವಾ ಮುಟ್ಟಿದ್ದಲ್ಲಿ ಸ್ಯಾನಿಟೈಸರ್ ಹಾಕಿ ಕೈ ಸ್ವಚ್ಛ ಮಾಡುವುದನ್ನ ಮಕ್ಕಳಿಗೆ ತರಬೇತಿ ನೀಡಿ. ಇನ್ನು ಮಕ್ಕಳಿಗೆ ಲಸಿಕೆ ಲಭ್ಯವಾದ ತಕ್ಷಣ , ಯಾವುದೇ ರೀತಿ ಭಯಪಡದೆ ಮಕ್ಕಳಿಗೆ ಲಸಿಕೆ ಹಾಕಿಸಿ.
Published by:Sandhya M
First published: