• Home
  • »
  • News
  • »
  • coronavirus-latest-news
  • »
  • ಕೊರೋನಾ ಭೀತಿ: ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ; ರಜೆಗಾಗಿ ನಾಟಕವಾಡಿದ ವಿದ್ಯಾರ್ಥಿಗಳು

ಕೊರೋನಾ ಭೀತಿ: ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ; ರಜೆಗಾಗಿ ನಾಟಕವಾಡಿದ ವಿದ್ಯಾರ್ಥಿಗಳು

ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಎಲ್ಲೆಡೆ ಕೊರೋನಾ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿತ್ತು. ಅದರಂತೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವಾಗಲೇ ಈ ಘಟನೆ ನಡೆದಿದೆ. ಅರಿವು ಕಾರ್ಯಕ್ರಮ ಮುಗಿದ ನಂತರ ರಜೆ ಸಿಗುತ್ತದೆ ಎಂದು ಮಕ್ಕಳು ಈ ರೀತಿ ವರ್ತಿಸಿದ್ದಾರೆ. 

ಮುಂದೆ ಓದಿ ...
  • Share this:

ಚಾಮರಾಜ‌ನಗರ (ಮಾ. 6): ಜಗತ್ತನ್ನು ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲು ಹೋದ ಶಿಕ್ಷಕರಿಗೆ ವಿದ್ಯಾರ್ಥಿಗಳು ಶಾಕ್ ನೀಡಿದ್ದಾರೆ. ರಜೆಗಾಗಿ ಸೋಂಕಿನ ಲಕ್ಷಣಗಳನ್ನು ಅಸ್ತ್ರವಾಗಿಸಿಕೊಂಡು ನಾಟಕವಾಡಿ ದಂಗು ಬಡಿಸಿದ್ದಾರೆ. 


ಜಿಲ್ಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ತಮಗೂ ಸಹ ವಾಂತಿ ಕೆಮ್ಮು, ಜ್ವರ ಇದೆ ಎಂದು ಇಬ್ಬರು ವಿದ್ಯಾರ್ಥಿಗಳು ಹೇಳಿದ್ದಾರೆ. ಇದರಿಂದ ಗಾಬರಿಯಾದ ಶಿಕ್ಷಕರು ಕೂಡಲೇ ಈ ಇಬ್ಬರು ವಿದ್ಯಾರ್ಥಿಗಳನ್ನು ಆಟೋದಲ್ಲಿ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ವಾಪಸ್ ಶಾಲೆಗೆ ಬರುವಷ್ಟರಲ್ಲಿ ಇನ್ನೂ ಇಪ್ಪತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ತಮಗು ಸಹ ವಾಂತಿ, ಕೆಮ್ಮು, ಜ್ವರ ಇದೆ ಎಂದು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಈ ವಿದ್ಯಾರ್ಥಿಗಳನ್ನು ಸಹ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ಆದರೆ ಇವರಿಗೆ ಯಾವುದೇ ರೀತಿಯ ಕೆಮ್ಮು, ಜ್ವರದ ಲಕ್ಷಣ ಇಲ್ಲದಿರುವ ಬಗ್ಗೆ ಗೊತ್ತಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳೆಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಶಾಲೆಗೆ ವಾಪಸ್ ಕರೆದೊಯ್ಯಲಾಯಿತು. ಈ ವೇಳೇ  ರಕ್ತ ಪರೀಕ್ಷೆಯಲ್ಲೂ ಯಾವುದೇ ತೊಂದರೆ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.


ಇದನ್ನು ಓದಿ: ಕೊರೋನಾ ಅಟ್ಟಹಾಸ: ಭೂತಾನ್​ನಲ್ಲಿ ಮೊದಲ ಪ್ರಕರಣ ಪತ್ತೆ; ಅಮೆರಿಕದಲ್ಲಿ 12ಕ್ಕೇರಿದ ಸಾವಿನ ಸಂಖ್ಯೆ


ವಿಷಯ ತಿಳಿಯುತ್ತಿದ್ದಂತೆ ಹನೂರು ಶೈಕ್ಷಣಿಕ ವಲಯದ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ನಂತರ ಶಾಲೆಯಲ್ಲೇ ಬಿಸಿಯೂಟ ಊಟ ಮಾಡಿ ಆಹಾರವನ್ನು ಪರೀಕ್ಷಿಸಿದ್ದಾರೆ.  ಈ ವೇಳೆ ರಜೆಗಾಗಿ ಮಕ್ಕಳು ಮಾಡಿರುವ ನಾಟಕವಿದು ಎಂಬುದು ಬಯಲಾಗಿದೆ.


ಶಾಲೆಗಳಿಗೆ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ


ಎಲ್ಲೆಡೆ ಕೊರೋನಾ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿತ್ತು. ಅದರಂತೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವಾಗಲೇ ಈ ಘಟನೆ ನಡೆದಿದೆ. ಅರಿವು ಕಾರ್ಯಕ್ರಮ ಮುಗಿದ ನಂತರ ರಜೆ ಸಿಗುತ್ತದೆ ಎಂದು ಮಕ್ಕಳು ಈ ರೀತಿ ವರ್ತಿಸಿದ್ದಾರೆ.  ಇದೊಂದು ರೀತಿಯಲ್ಲಿ ಸಮೂಹ ಸನ್ನಿಯಂತಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ ಹನೂರು ಬಿಇಓ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.


(ವರದಿ: ಎಸ್.ಎಂ.ನಂದೀಶ್)

Published by:Seema R
First published: