CoronaVirus: ಭಾರತದ ಕೋವಿಡ್ ಬಿಕ್ಕಟ್ಟಿಗೆ ಸಾಮೂಹಿಕ ಸಭೆಗಳೇ ಕಾರಣ; WHO ಆರೋಪ

ಇತರೆ ದೇಶಗಳಲ್ಲಿ ಕೊರೋನಾ ಎರಡನೇ ಅಲೆ ಕೈಮೀರುತ್ತಿದ್ದಂತೆ ಭಾರತದಲ್ಲಿ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಕೊರೋನಾ ಚಂಡ ಮಾರುತವನ್ನು ಹತೋಟಿಗೆ ತರಬಹುದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. 

ಜಮ್ಮು-ಕಾಶ್ಮೀರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ದುಖಃತಪ್ತ ವ್ಯಕ್ತಿ.

ಜಮ್ಮು-ಕಾಶ್ಮೀರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ದುಖಃತಪ್ತ ವ್ಯಕ್ತಿ.

 • Share this:
  ಭಾರತದ ಜನ ಸಾಮಾನ್ಯರು ಅನಗತ್ಯವಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ, ಸಾಮೂಹಿಕ ಕೂಟಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಅಲ್ಲದೆ, ಜನರಿಗೆ ಕೊರೋನಾ ಲಸಿಕೆ ನೀಡುವ ಸಂಖ್ಯೆಯೂ ಸಾಕಷ್ಟು ಕಡಿಮೆ ಇದೆ. ಇದೇ ಕಾರಣಕ್ಕೆ ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಭವಿಷ್ಯದಲ್ಲಿ ಈ ಪರಿಸ್ಥಿತಿ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಂಗಳವಾರ ತಿಳಿಸಿದೆ. ಭಾರತದಲ್ಲಿ ಈಗಾಗಲೇ ದಿನವೊಂದಕ್ಕೆ 3.5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ, ಸಾವಿನ ಸಂಖ್ಯೆಯೂ 2 ಲಕ್ಷದ ಗಡಿ ದಾಟಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ, ವೆಂಟಿಲೇಟರ್​ ಹಾಗೂ ಬೆಡ್​ ಕೊರತೆಯಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಇಂಗ್ಲೆಂಡ್, ಫ್ರಾನ್ಸ್​, ಯುಎಇ ಸೇರಿದಂತೆ ಅನೇಕ ದೇಶಗಳು ಈಗಾಗಲೇ ಭಾರತಕ್ಕೆ ಸಹಾಯ ಹಸ್ತ ಚಾಚಿವೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತಕ್ಕೆ 4,000 ಆಮ್ಲಜನಕ ಸಾಂದ್ರಕಗಳನ್ನು ಒಳಗೊಂಡಂತೆ ನಿರ್ಣಾಯಕ ಉಪಕರಣಗಳು ಸರಬರಾಜು ಮಾಡಲಾಗಿದೆ ಎಂದು WHO ವಕ್ತಾರ ತಾರಿಕ್ ಜಸರೆವಿಕ್ ಹೇಳಿದ್ದಾರೆ.

  COVID-19 ಸೋಂಕಿತ ರೋಗಗಳ ಪೈಕಿ ಶೇ.15ಕ್ಕಿಂತ ಕಡಿಮೆ ಜನರಿಗೆ ಆಸ್ಪತ್ರೆಯ ಆರೈಕೆಯ ಅಗತ್ಯವಿರುತ್ತದೆ ಮತ್ತು ಅದಕ್ಕಿಂತ ಕಡಿಮೆ ಜನರಿಗೆ ಆಮ್ಲಜನಕದ ಅಗತ್ಯವಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  "ಭಾರತದಲ್ಲಿ ಪ್ರಸ್ತುತ ಸಮಸ್ಯೆಯ ಒಂದು ಭಾಗವೆಂದರೆ, ಅನೇಕ ಜನರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ (ಅವರಿಗೆ ಮಾಹಿತಿ / ಸಲಹೆಯ ಪ್ರವೇಶವಿಲ್ಲದ ಕಾರಣ). ಮನೆಯಲ್ಲಿ ಮನೆ ಆಧಾರಿತ ಆರೈಕೆ ಮೇಲ್ವಿಚಾರಣೆಯನ್ನು ಅತ್ಯಂತ ಸುರಕ್ಷಿತವಾಗಿ ನಿರ್ವಹಿಸಬಹುದಾದರೂ ಜನ ಆಸ್ಪತ್ರೆಗೆ ದಾವಿಸುತ್ತಿರುವ ಕಾರಣ ಕೊರೋನಾ ಸಂಖ್ಯೆ ಮತ್ತಷ್ಟು ಅಧಿಕವಾಗುತ್ತಿದೆ" ತಾರಿಕ್​ ಜಸರೆವಿಕ್ ಹೇಳಿದರು.

  "ಗ್ರಾಮೀಣ ಭಾಗದಲ್ಲಿ ಸಮುದಾಯ ಮಟ್ಟದ ಕೇಂದ್ರಗಳು ಕೊರೋನಾ ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆಯ ಸರದಿ ನಿರ್ಧಾರ ಮತ್ತು ಸುರಕ್ಷಿತ ಮನೆಯ ಆರೈಕೆಯ ಬಗ್ಗೆ ಸಲಹೆಗಳನ್ನು ನೀಡಬೇಕು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  "ಇತರೆ ದೇಶಗಳಲ್ಲಿ ಕೊರೋನಾ ಎರಡನೇ ಅಲೆ ಕೈಮೀರುತ್ತಿದ್ದಂತೆ ಭಾರತದಲ್ಲಿ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಸಾಮೂಹಿಕ ಕೂಟಗಳು, ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದ್ದರೆ ಭಾರತದಲ್ಲಿ ಕೊರೋನಾ ಚಂಡ ಮಾರುತವನ್ನು ಹತೋಟಿಗೆ ತರಬಹುದಿತ್ತು" ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.  ಮೇ ಎರಡನೇ ವಾರದಲ್ಲಿ ಕಾದಿದೆ ಆತಂಕ:

  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಆದರೀಗ ಮೇ ತಿಂಗಳ ಮಧ್ಯಭಾಗದಲ್ಲಿ ಇನ್ನೂ ದೊಡ್ಡ ಆಪತ್ತು ಕಾದಿದೆ ಎಂದು ಐಐಟಿ ವಿಜ್ಞಾನಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.

  ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿಜ್ಞಾನಿಗಳು ಗಣಿತಶಾಸ್ತ್ರೀಯ ಮಾದರಿಯಲ್ಲಿ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನದ ಪ್ರಕಾರ ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ. ಆಗ ದೇಶದಲ್ಲಿ 38ರಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಲಿವೆ. ಆ ಅವಧಿಯಲ್ಲಿ ಪ್ರತಿದಿನ 4.4 ಲಕ್ಷದಷ್ಟು ಹೊಸ ಕೇಸುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

  ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಗಣಿತಶಾಸ್ತ್ರೀಯದಲ್ಲಿನ 'ಸೂತ್ರ' ಎಂಬ ಮಾದರಿಯ ಆಧಾರದ ಮೇಲೆ ದೇಶದಲ್ಲಿ ಕಂಡುಬರುತ್ತಿರುವ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ‘ಸೂತ್ರ’ ಮಾದರಿಯು ಹಲವು ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಹೊಸ ಮಾದರಿಯಾಗಿದೆ.

  ಇದನ್ನೂ ಓದಿ: CoronaVirus: ಆಕ್ಸಿಜನ್, ವೆಂಟಿಲೇಟರ್​, ಶಸ್ತ್ರಚಿಕಿತ್ಸಾ ಮುಖವಾಡಗಳು; ಭಾರತಕ್ಕೆ ಸಹಾಯ ಹಸ್ತ ಚಾಚಿದ ವಿಶ್ವ ರಾಷ್ಟ್ರಗಳು

  ಮೂರು ಪ್ರಮುಖ ಸಂಗತಿಗಳನ್ನು ಒಳಗೊಂಡ ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊರೋನಾ ವೈರಸ್ ತಗುಲಿದ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ಹರಡುತ್ತಾನೆ ಎಂಬ ಸಂಖ್ಯೆ, ನಾಗರಿಕರು ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂಬ ಅಂಶ ಹಾಗೂ ದೃಢಪಡದ ಪ್ರಕರಣಗಳ ಸಂಖ್ಯೆಯನ್ನು ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ತಮ್ಮ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಪ್ರಕಟಣೆ ಮಾಡಿಲ್ಲ‌.

  ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ ಎಂದಿರುವ ವಿಜ್ಞಾನಿಗಳು ಅದಕ್ಕೂ ಮೊದಲು ಮೇ 11ರಿಂದ15ರ ನಡುವೆ 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳಾಗುವ ಸಾಧ್ಯತೆ ಇದೆ ಹೇಳಿದ್ದಾರೆ. ಹಾಗೆಯೇ ಮೇ ಮಧ್ಯದಲ್ಲಿ ಗರಿಷ್ಠ ಹಂತ ತಲುಪಿ ನಂತರ ಮೇ ತಿಂಗಳ ಕಡೆಯಲ್ಲಿ ಇಳಿಮುಖವಾಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಈ ಭವಿಷ್ಯ ನಿಜವಾಗಲಿದೆ ಎಂದು ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: