ಕೊರೋನಾ ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಜಗತ್ತಿನ ಎದುರು ಬೇಷ್ ಎನಿಸಿಕೊಂಡಿದ್ದ ಭಾರತ, ಎರಡನೇ ಅಲೆಯ ಹೊಡೆತಕ್ಕೆ ನಲುಗುತ್ತಿದೆ. ಎರಡನೇ ಅಲೆಯ ಕುರಿತಾದ ಎಚ್ಚರಿಕೆಗಳ ನಡುವೆಯೂ ಅಪೂರ್ಣ ಸಿದ್ಧತೆ ನಡೆಸಿದರ ಪರಿಣಾಮ ದೇಶದಲ್ಲಿ ಸೋಂಕು ಉಲ್ಬಣಗೊಂಡಿತು ಎನ್ನಲಾಗಿದೆ. ಎರಡನೇ ಅಲೆ ಸೋಂಕು ತೀವ್ರ ಮಟ್ಟದಲ್ಲಿದ್ದು, ಅತಿ ವೇಗದಲ್ಲಿ ಹರಡುತ್ತಿದೆ. ಇದೇ ಹಿನ್ನಲೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಜನರು ಸರಿಯಾದ ಸಮಯಕ್ಕೆ ಬೆಡ್, ಆಕ್ಸಿಜನ್ ಮತ್ತು ಔಷಧಗಳು ಸಿಗದೇ ಪರದಾಡುವಂತೆ ಆಗಿದೆ. ದೇಶದ ಕೊರೋನಾ ಎರಡನೇ ಅಲೆ ಈ ರೀತಿ ಹೆಚ್ಚಾಗಲು ಕಾರಣ ಜನ ಮತ್ತು ಸರ್ಕಾರಗಳ ಬೇಜವಾಬ್ದಾರಿತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಟೀಕಿಸಿದ್ದಾರೆ.
ಕೋವಿಡ್ ಸೋಂಕಿತ ಜನರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಆರ್ಎಸ್ಎಸ್ ಆಯೋಜಿಸಿದ್ದ ಪಾಸಿಟಿವಿಟಿ ಅನ್ಲಿಮಿಟೆಡ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಯಲ್ಲಿಯೇ ಎರಡನೇ ಅಲೆ ಕುರಿತು ವೈದ್ಯರು ಎಚ್ಚರಿಸಿದ್ದರು. ಎಲ್ಲರಿಗೂ ಕೊರೋನಾ ಸೋಂಕಿನ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿತ್ತು. ಆದರೂ ಕೂಡ ಸೋಂಕಿನ ಬಗ್ಗೆ ಜನರು, ಸರ್ಕಾರ, ಆಡಳಿತ ವರ್ಗ ಎಲ್ಲರೂ ನಿರ್ಲಕ್ಷ್ಯ ತಾಳಿದರು ಎಂದರು
ಈಗ ಮೂರನೇ ಅಲೆ ಕುರಿತು ಅವರು ಎಚ್ಚರಿಸುತ್ತಿದ್ದಾರೆ. ಈ ಬಗ್ಗೆ ನಾವು ಭಯ ಪಡಬೇಕಾ ಅಥವಾ ವೈರಸ್ ವಿರುದ್ಧ ಹೋರಾಡುವ ಮನೋಭಾವ ಹೊಂದಬೇಕಾ ಎಂದರು.
ಪ್ರಸ್ತುತ ದೇಶದ ಪರಿಸ್ಥಿತಿಯ ಅನುಭವಗಳಿಂದ ತಪ್ಪುಗಳನ್ನು ಬದಿಗೊರಿಸಿ ಮುಂದಿನ ಸ್ಥಿತಿ ಬಗ್ಗೆ ಸರ್ಕಾರ ಮತ್ತು ಜನರು ಕೂಡ ಸಿದ್ದತೆ ನಡೆಸಬೇಕು. ಈ ಮೂಲಕ ಮೂರನೇ ಅಲೆಯನ್ನು ಎದುರಿಸಲು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸೋಂಕಿನ ವಿರುದ್ಧ ಭಾರತ ಸಂಪೂರ್ಣ ಜಯ ಸಾಧಿಸಬೇಕಿದೆ.
ಇದನ್ನು ಓದಿ: ಬಸವಜಯಂತಿಯಂದು ಹೊಸ ಅತಿಥಿಗಳನ್ನು ಸ್ವಾಗತಿಸಿದ ನಿಖಿಲ್ ದಂಪತಿ
ಜೀವನ ಮತ್ತು ಸಾವಿನ ಚಕ್ರಗಳು ಮುಂದುವರೆಯುತ್ತದೆ. ಈ ವಿಷಯಗಳು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳೇ ಭವಿಷ್ಯಕ್ಕಾಗಿ ನಮ್ಮನ್ನು ಗಟ್ಟಿಗೊಳಿಸುತ್ತದೆ. ಗೆಲುವು ಎಂದು ಅಂತಿಮ ಅಲ್ಲ. ಸೋಲು ಕೂಡ ಶಾಶ್ವತವಲ್ಲ. ಧೈರ್ಯವಾಗಿ ಮುನ್ನುಗುವುದು ಒಂದೇ ಮುಖ್ಯ ಎಂದು ಭರವಸೆ ಮಾತುಗಳನ್ನು ಆಡಿದರು.
ಕೋವಿಡ್ ಎದುರಿಸುವ ಆತ್ಮಸ್ಥೈರ್ಯ ಹೆಚ್ಚಿಸಲು ಸಲುವಾಗಿ ಕೋವಿಡ್ ರೆಸ್ಪಾನ್ಸ್ ಟೀಮ್ ಜೊತೆ ಆರ್ಎಸ್ಎಸ್ ಮೇ 11 ರಿಂದ ಐದು ದಿನಗಳ ಕಾಲ ಸರಣಿ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಆರ್ಎಸ್ಎಸ್ ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ