ಒಂದು ದೇಶ-ಒಂದು ರೇಷನ್ ಕಾರ್ಡ್, ಕಿಸಾನ್ ಕ್ರೆಡಿಡ್ ಕಾರ್ಡ್ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರಿಯಾಯಿತಿ ಸಾಲ; ನಿರ್ಮಲಾ ಸೀತಾರಾಮನ್

ನಿನ್ನೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನಲ್ಲಿ‌ 5 ಸಾವಿರ ಕೋಟಿ ರೂಪಾಯಿ ಹಣವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(MSME) ವಲಯಗಳಿಗೆ ಮತ್ತು ಹಣದ ಹರಿವು ಹೆಚ್ಚಿಸಲು ಕೈಗೊಳ್ಳುವ ಕ್ರಮಗಳ ಭಾಗವಾಗಿ ನೀಡಲಾಗುವುದೆಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು. ಇದೀಗ ಬಾಕಿ 15 ಸಾವಿರ ಲಕ್ಷ ಕೋಟಿ ರೂಪಾಯಿಗಳ ಬಗ್ಗೆ ಇಂದು ಇನ್ನಷ್ಟು ಮಾಹಿತಿ ನೀಡಲಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್

ಸಚಿವೆ ನಿರ್ಮಲಾ ಸೀತಾರಾಮನ್

 • Share this:
  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಬಗ್ಗೆ ನಿನ್ನೆಯಷ್ಟೇ ಮೊದಲ ಹಂತದ ವಿವರಣೆ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಮತ್ತೆ ಎರಡನೇ ಹಂತದ ಬಗ್ಗೆ ವಿವರಣೆ ನೀಡಿದರು.

  ಸಂಜೆ 4 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಸ್ತೆ ಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ಈ ಪ್ಯಾಕೇಜ್​ನಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

  ಇಂದು 9 ಪ್ರಮುಖ ನಿರ್ಧಾರಗಳನ್ನು ಘೋಷಿಸಲಾಗುವುದು. ಅದರಲ್ಲಿ ಮೂರು ವಲಸೆ ಕಾರ್ಮಿಕರಿಗೆ, ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮತ್ತೊಂದು ಗೃಹ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು.

  ನಾವು ಇಂದು ಒಂದು ನಿರ್ದಿಷ್ಟ ಘಟಕದ ಬಗ್ಗೆ ಮಾತನಾಡದಿದ್ದರೆ, ಸರ್ಕಾರವು ಆ ನಿರ್ದಿಷ್ಟ ಘಟಕದ ಬಗ್ಗೆ ಮರೆತಿದೆ ಎಂದು ಅರ್ಥವಲ್ಲ. ಹೆಚ್ಚಿನ ಉಪಕ್ರಮಗಳನ್ನು ಘೋಷಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

  ಈವರೆಗೂ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 2020ರ  ಮಾರ್ಚ್ 1 ಮತ್ತು ಏಪ್ರಿಲ್​ 30 ನಡುವಲ್ಲಿ ಕೃಷಿ ವಲಯಕ್ಕೆ 86,600 ಕೋಟಿ ಸಾಲ ಮಂಜೂರು ಮಾಡಿದೆ. 63 ಲಕ್ಷ ರೈತರ ಇದರ ಉಪಯೋಗ ಪಡೆದುಕೊಂಡಿದ್ದಾರೆ. ನಬಾರ್ಡ್​ನಿಂದ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳಿಗೆ 2020ರ ಮಾರ್ಚ್​ನಲ್ಲಿ 29,500 ಕೋಟಿ ಹಣ ಒದಗಿಸಲಾಗಿದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ 2020 ರ ಮಾರ್ಚ್‌ನಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 4,200 ಕೋಟಿ ರೂ. ನೀಡಲಾಗಿದೆ. ಹಾಗೂ 2020 ರ ಮಾರ್ಚ್‌ನಿಂದ ರಾಜ್ಯ ಸರಕಾರಿ ಸಂಸ್ಥೆಗಳಿಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲು 6,700 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

  ಸುಮಾರು 3 ಕೋಟಿ ಸಾಮಾನ್ಯ ರೈತರು 4 ಲಕ್ಷ ಕೋಟಿ ರೂ.ಗಳ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದಿದ್ದಾರೆ. ಅವರಿಗೆ ಆರ್‌ಬಿಐ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಸೀತಾರಾಮನ್ ಹೇಳಿದರು.

  ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲು ಮತ್ತು ಅನ್ನಾಹಾರ ಒದಗಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್ 3 ರಂದು ಸುಮಾರು 11,002 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

  ಮಾರ್ಚ್ 15ರ ಅವಧಿಯಲ್ಲಿ 7,200 ನಗರ ಬಡವರ ಹೊಸ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಮೇ 1 ರವರೆಗೆ ಕನಿಷ್ಠ 14.62 ಕೋಟಿ  ಮನ್ರೇಗಾ ವ್ಯಕ್ತಿಗಳ ಕೆಲಸದ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷದ ನೆನ್ನೆಯವರೆಗೆ 14.6 ಕೋಟಿ ಮನ್ರೇಗಾ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.40-50 ರಷ್ಟು ಹೆಚ್ಚು. 1.87 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 2.33 ಕೋಟಿ ವೇತನ ಪಡೆಯುವವರಿಗೆ ಕೆಲಸ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

  ವಲಸಿಗರಿಗೆ ಮುಂದಿನ 2 ತಿಂಗಳು ಉಚಿತ ದಿನಸಿ ಪೂರೈಕೆ

  ಮುಂದಿನ ಎರಡು ತಿಂಗಳವರೆಗೆ ವಲಸಿಗರಿಗೆ ಉಚಿತ ಆಹಾರ ಧಾನ್ಯ ಪೂರೈಕೆ ಮಾಡಲಾಗುವುದು. ಕಾರ್ಡ್ ರಹಿತರಿಗೆ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಥವಾ ರಾಜ್ಯಮಟ್ಟದ ಕಾರ್ಡ್‌ಗಳು) 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ಮಸಾಲೆ ಸಿಗಲಿದೆ. ವಲಸಿಗರನ್ನು ಉತ್ತೇಜಿಸಲು ಮತ್ತು ಗುರುತಿಸಲು ರಾಜ್ಯ ಸರ್ಕಾರಗಳೊಂದಿಗೆ ನಾವು ನಿರತರಾಗಿದ್ದೇವೆ. ಸುಮಾರು 8 ಕೋಟಿ ವಲಸಿಗರು ಇದರ ಲಾಭ ಪಡೆಯಲಿದ್ದಾರೆ. ಮತ್ತು ಕೇಂದ್ರವು ಇದರ ವೆಚ್ಚವನ್ನು ಭರಿಸಲಿದೆ. ಇದಕ್ಕೆ 3,500 ಕೋಟಿ ರೂ. ಖರ್ಚು ಮಾಡಲಾಗುವುದು. 2021ರ ಮಾರ್ಚ್ ವೇಳೆಗೆ ದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳನ್ನು ಡಿಜಿಟಲೀಕರಣಗೊಳ್ಳಲಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಒಂದು ದೇಶ, ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಡಿ ಯಾವುದೇ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ಆಹಾರ ಧಾನ್ಯ ಪಡೆಯಬಹುದಾಗಿದೆ.  23 ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳು ಇದರ ಅನುಕೂಲ ಪಡೆಯಲಿದ್ದಾರೆ ಎಂದು ಸಚಿವೆ ಸೀತಾರಾಮನ್ ತಿಳಿಸಿದರು.

  ರೈತರಿಗೆ 30 ಸಾವಿರ ಕೋಟಿ ಹಣ

  ರೈತರಿಗೆ ನಬಾರ್ಡ್ ಮೂಲಕ 30,000 ಕೋಟಿ ರೂ. ಹೆಚ್ಚುವರಿ ತುರ್ತು ಬಂಡವಾಳ ನಿಧಿಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಹಾಗೆಯೇ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ.ಗಳ ರಿಯಾಯಿತಿ ಸಾಲವನ್ನು ನೀಡಲಾಗುವುದು. ಪಿಎಂ ಕಿಸಾನ್ ಕ್ರೆಡಿಡ್ ಕಾರ್ಡ್​ಗಳಿಗೆ ಮೀನುಗಾರರು ಮತ್ತು ಪಶು ಸಂಗೋಪನೆ ನಡೆಸುವವರನ್ನು ಸೇರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
  First published: