ಮುಂಬೈ ( ಮೇ 27): ಭಾರತದಾದ್ಯಂತ ಕೊರೋನಾ ಅಟ್ಟಹಾಸ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಈಗಾಗಲೇ ದೇಶಾದ್ಯಂತ ಕೊರೋನಾ ಲಸಿಕಾ ಅಭಿಯಾನ ಶುರುವಾಗಿದ್ದು, 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಆದರೂ ಅಲ್ಲಲ್ಲಿ ಕೊರೋನಾ ಲಸಿಕೆಯ ಅಭಾವ ಎದುರಾಗಿರುವುದರಿಂದ ಅನೇಕ ಜನರು ಲಸಿಕೆ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಿಂದ ಅತಿದೊಡ್ಡ ಕೊರೋನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ನಡಿ ಕೆಲಸ ಮಾಡುವ ಸಿಬ್ಬಂದಿಗೆ, ಬಿಪಿ, ಗೂಗಲ್ ಮುಂತಾದ ಪಾರ್ಟನರ್ ಸಂಸ್ಥೆಗಳ ಸಿಬ್ಬಂದಿಗೆ ಹಾಗೂ ಅವರ ಕುಟುಂಬಸ್ಥರಿಗೆ ಕೊರೋನಾ ಲಸಿಕೆ ಹಾಕಿಸಲು ಮುಂದಾಗಿದೆ. ಈ ಅತಿ ದೊಡ್ಡ ಅಭಿಯಾನದಲ್ಲಿ 1.3 ಮಿಲಿಯನ್ ಸಿಬ್ಬಂದಿಗೆ ಹಾಗೂ ಅವರ ಕುಟುಂಬಸ್ಥರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಭಾರತದ 880 ನಗರಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದ್ದು, ಇದು ಸಂಪೂರ್ಣ ಉಚಿತವಾಗಿರಲಿದೆ ಎಂಬುದು ಮತ್ತೊಂದು ವಿಶೇಷ.
ರಿಲಯನ್ಸ್ ಇಂಡಸ್ಟ್ರೀಸ್ನ ಸಿಬ್ಬಂದಿಯ ಹೆಂಡತಿ/ ಗಂಡ, ತಂದೆ-ತಾಯಿ, ಅಜ್ಜ-ಅಜ್ಜಿ, ಅತ್ತೆ-ಮಾವ, ಮಕ್ಕಳು, ಸಹೋದರ-ಸಹೋದರಿಯರು ಕೂಡ ಈ ಅಭಿಯಾನದಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದಾಗಿದೆ. ಈ ಸೌಲಭ್ಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾಜಿ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ. ಯಾರೆಲ್ಲ ಪ್ರಸ್ತುತ ರಿಲಯನ್ಸ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೋ ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ. ಹಾಗೇ, ರಿಲಯನ್ಸ್ನಲ್ಲಿ ಕೆಲಸ ಮಾಡಿ, ನಿವೃತ್ತರಾದವರು ಮತ್ತು ಅವರ ಕುಟುಂಬಸ್ಥರು ಕೂಡ ಉಚಿತ ಕೊರೋನಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.
ರಿಲಾಯನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಲಸಿಕೆ ವೆಚ್ಚವಷ್ಟೇ ಅಲ್ಲ ಕೊರೋನಾ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿಗಳಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳಿದ್ಧಾರೆ. ಅವರ ನೊಂದಾಯಿತ ಕುಟುಂಬ ಸದಸ್ಯರ ಸಂಖ್ಯೆಯನ್ನೂ ಸೇರಿಸಿದರೆ 19 ಲಕ್ಷ ಮಂದಿಯಾಗುತ್ತಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಇಷ್ಟೂ ಮಂದಿಯ ಚಿಕಿತ್ಸೆ ಮತ್ತು ಲಸಿಕಾ ವೆಚ್ಚವನ್ನ ಕಂಪನಿಯೇ ಭರಿಸುತ್ತಿರುವುದು ಗಮನಾರ್ಹ.
ಯಾರೆಲ್ಲ ಈ ಅತಿದೊಡ್ಡ ಕೊರೋನಾ ಲಸಿಕಾ ಅಭಿಯಾನದಲ್ಲಿ ಲಸಿಕೆ ಪಡೆಯಲು ಇಚ್ಛಿಸುತ್ತಾರೋ ಅವರು ಕೋವಿನ್ ಆ್ಯಪ್ನಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಆ ಆ್ಯಪ್ನಲ್ಲಿ RIL ಆನ್ಲೈನ್ ಹೆಲ್ತ್ಕೇರ್ ವೇದಿಕೆಯಾದ ಜಿಯೋ ಹೆಲ್ತ್ಹಬ್ ಆಯ್ಕೆ ಮಾಡಿಕೊಂಡು ತಮ್ಮ ಸ್ಲಾಟ್ ಬುಕ್ ಮಾಡಬಹುದು. ಹಾಗೇ, ತಮ್ಮ ಲೊಕೇಷನ್ ಕೂಡ ಆಯ್ಕೆ ಮಾಡಿದರೆ ನಿಗದಿತ ದಿನದಂದು ಹೋಗಿ ಲಸಿಕೆ ಪಡೆಯಬಹುದು.
ದೇಶದ 800ಕ್ಕೂ ಹೆಚ್ಚು ನಗರಗಳಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಪಾರ್ಟನರ್ ಆಸ್ಪತ್ರೆಗಳಾದ ಅಪೋಲೋ, ಮಾಕ್ಸ್, ಮಣಿಪಾಲ್ ಮುಂತಾದ ಆಸ್ಪತ್ರೆಗಳಲ್ಲಿ ರಿಲಯನ್ಸ್ ಸಿಬ್ಬಂದಿ ಉಚಿತ ಲಸಿಕೆಯನ್ನು ಪಡೆಯಬಹುದು. ಲಸಿಕೆಯನ್ನು ಪಡೆದ ಬಳಿಕ ಅದರ ಬಿಲ್ ನೀಡಿದರೆ ಆ ಹಣವನ್ನು ವಾಪಾಸ್ ನೀಡುವ ವ್ಯವಸ್ಥೆಯೂ ಇದೆ. ಇದುವರೆಗೂ ರಿಲಯನ್ಸ್ನ 3.30 ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ.
ಜೂನ್ 15ರೊಳಗೆ ರಿಲಯನ್ಸ್ನ ಎಲ್ಲ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರು ಕೊರೋನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಳ್ಳಲೇಬೇಕೆಂದು ಸೂಚಿಸಲಾಗಿದೆ. ಹಾಗೇ, ರಿಲಯನ್ಸ್ನ ಸ್ಟೋರ್, 13 ಸಾವಿರಕ್ಕೂ ಹೆಚ್ಚು ರೀಟೇಲ್ ಮತ್ತು ಜಿಯೋ ಸ್ಟೋರ್ಗಳ ಸಿಬ್ಬಂದಿ ಕೂಡ ಈ ಅಭಿಯಾನದಡಿ ಕೊರೋನಾ ಲಸಿಕೆ ಪಡೆಯಬಹುದು. ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ಲಸಿಕೆಗಳು ಲಭ್ಯವಿರಲಿದ್ದು, ಸಿಬ್ಬಂದಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: Cyclone Yaas: ಯಾಸ್ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 1 ಕೋಟಿ ಜನರಿಗೆ ಹಾನಿ; ಒರಿಸ್ಸಾದಲ್ಲಿ ಗುಡುಗು ಸಹಿತ ಮಳೆ
ಇಷ್ಟು ಮಾತ್ರವಲ್ಲದೆ ಕೊರೋನಾ ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್ನ ಜಮ್ನಾಗರ್ದಲ್ಲಿ 1,000 ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರನ್ನು ತೆರೆದಿದೆ. ಈ ಕೋವಿಡ್ ಕೇರ್ ಸೆಂಟರ್ ಮೂಲಕ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಆಕ್ಸಿಜನ್ ಸೌಲಭ್ಯ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚವನ್ನು ರಿಲಯನ್ಸ್ ಸಂಸ್ಥೆಯೇ ಭರಿಸಲಿದೆ. ಇಲ್ಲಿನ ಮೆಡಿಕಲ್ ಕಾಲೇಜ್ನಲ್ಲಿ ಸದ್ಯ 400 ವೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ