Corona Death: ಕೊರೊನಾ ಅನ್ನೋ ಈ ಸೋಂಕು ಜನರನ್ನು ಹೇಗೆಲ್ಲಾ ಮಾಡಿದೆ ಎಂದರೆ ತಮ್ಮವರನ್ನೇ ತಿರುಗಿ ನೋಡದಂಥಾ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಸೋಂಕು ಇದೆ ಎಂದು ಕುಟುಂಬಸ್ಥರೇ ದೂರ ಮಾಡಿರುವುದು, ಸತ್ತ ನಂತರ ಮೃತದೇಹ ಪಡೆಯಲೂ ಬಾರದೇ ಇರುವಂಥಾ ಅನೇಕ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇದುವರಗೆ ವಿವಿಧ ಶವಾಗಾರಗಳಲ್ಲಿ ಇದ್ದ ಸೋಂಕಿನಿಂದ ಮೃತಪಟ್ಟವರ ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಕಂದಾಯ ಇಲಾಖೆ ನಿರ್ಧರಿಸಿದೆ. ಅವರವರ ಧರ್ಮದ ವಿಧಿ ವಿಧಾನಗಳನ್ನೇ ಪಾಲಿಸಿ ಆಯಾ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಅಂತ್ಯಸಂಸ್ಕಾರ ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸದ್ಯ ಆದೇಶದಂತೆ ಜಿಲ್ಲಾಡಳಿತಗಳೇ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ನಾನಾ ಚಿತಾಗಾರಗಳಲ್ಲಿ ಕುಟುಂಬಸ್ಥರು ತೆಗೆದುಕೊಂಡು ಹೋಗದೇ ಇದ್ದ ಒಂದೂವರೆ ಸಾವಿರದಷ್ಟು ಚಿತಾಭಸ್ಮಗಳನ್ನು ಸರ್ಕಾರದ ವತಿಯಿಂದ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಕಂದಾಯ ಸಚಿವ ಆರ್ ಅಶೋಕ್ ತಾವೇ ಖುದ್ದಾಗಿ ಶ್ರೀರಂಗಪಟ್ಟಣದಲ್ಲಿ ಈ ಕೆಲಸ ನೆರವೇರಿಸಿದ್ದರು. ಆಯಾ ಜಿಲ್ಲಾಡಳಿತ ವ್ಯಾಪ್ತಿಯಲ್ಲೂ ಚಿತಾಭಸ್ಮಗಳ ವಿಸರ್ಜನೆ ಮಾಡಲು ಆದೇಶಿಸಲಾಗಿದೆ. ಈಗ ಅನೇಕ ಕಡೆಗಳಲ್ಲಿ ಕುಟುಂಬಸ್ಥರು ಪಡೆಯದ ಶವಗಳು ಅನಾಥವಾಗಿವೆ. ಅವುಗಳನ್ನು ಈಗಾಗಲೇ ಸಾಕಷ್ಟು ಸಮಯದವರಗೆ ಶವಾಗಾರಗಳಲ್ಲೇ ಇಟ್ಟುಕೊಳ್ಳಲಾಗಿದೆ. ಕುಟುಂಬಸ್ಥರನ್ನು ಅದೆಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅನೇಕರು ತಮ್ಮ ದೂರವಾಣಿ ಸಂಖ್ಯೆಯನ್ನೇ ಬದಲಿಸಿಕೊಂಡಿದ್ದರೆ ಉಳಿದವರು ಫೋನ್ ಸ್ವಿಚಾಫ್ ಆಗಿದೆ.
ಆದ್ದರಿಂದ ಕಂದಾಯ ಇಲಾಖೆ ಸಾಮೂಹಿಕ ಶವಸಂಸ್ಕಾರ ಮಾಡಲು ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಲಭ್ಯವಿರುವ ಎಲ್ಲಾ ದೂರವಾಣಿ ಸಂಖ್ಯೆಗಳಿಗೂ ಮಾಹಿತಿ ರವಾನೆ ಮಾಡಿದ್ದು ಕುಟುಂಬಸ್ಥರು ಬೇಕಿದ್ದರೆ ಈಗಲೂ ತಮ್ಮ ಸಂಬಂಧಿಗಳ ಶವಗಳನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ