ಜನಪ್ರತಿನಿಧಿಗಳೇ ನಿಮ್ಮ ಹೊಣೆಗಾರಿಕೆ ಪ್ರರ್ದಶಿಸುವ ಸೂಕ್ತ ಅವಕಾಶ ನಿಮ್ಮೆದುರಿಗಿದೆ…

ಈ ರೋಗದ ನಿಯಂತ್ರಣ ಕ್ರಮದಲ್ಲಿ ವ್ಯಕ್ತಿಯ ಮಾನಸಿಕ ಮಟ್ಟದಲ್ಲಿ ವೈದ್ಯ ಜಗತ್ತಿನ ಸಲಹೆ, ಮಾರ್ಗದರ್ಶನಗಳಿಗ ಹೆಚ್ಚು ಮಹತ್ವ ನೀಡುವುದು ಮತ್ತು ಕೈಲಾದ ಮಟ್ಟಿಗೆ ಇತರರಿಗೆ ನೆರವು, ನೆಮ್ಮದಿಯನ್ನು ಕೃತಿ ಮತ್ತು ಕಾರ್ಯಗಳ ಮೂಲಕ ಸಹಭಾಗಿತ್ವವನ್ನು ವ್ಯಕ್ತಪಡಿಸಬೇಕೇ ಹೊರತು ಹಗೆತನ, ದ್ವೇಷದ ಮೂಲಕ ಕೋವಿಡ್-19 ವೈರಾಣುವು ಹುಟ್ಟಿಸುತ್ತಿರುವ ಭಯ, ಆತಂಕ, ಹತಾಶೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.

ಡಾ. ಅ.ಶ್ರೀಧರ.

ಡಾ. ಅ.ಶ್ರೀಧರ.

  • Share this:
ನಮ್ಮೆಲ್ಲರಲ್ಲಿಯೂ ವಿಚಾರ ಮಾಡುವ ಶಕ್ತಿ ಪ್ರಬಲವಾಗಿ ಇರುವಂತೆಯೇ ವಿಚಾರ ಮಾಡಲೇಬಾರದು ಎನ್ನುವ ಗುಣವೂ ಪ್ರಬಲವಾಗಿಯೇ ಇರಬಲ್ಲದು. ಪರಸ್ಪರ ವಿರುದ್ಧವೆನ್ನುವಂತಹ ಈ ಸ್ಥಿತಿಗಳು ಯಾವ ಸನ್ನಿವೇಶದಲ್ಲಿ ಮೇಲುಗೈ ಸಾಧಿಸುವುದು ಎನ್ನುವುದನ್ನು ವಿವರಿಸುವ ಮನೋವೈಜ್ಞಾನಿಕ ತತ್ವಗಳು ಈಚಿನ ದಿನಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.

ಇದೀಗ ಭೂಮಂಡಲವವನ್ನೇ ಆವರಿಸುತ್ತಿರುವ ಕೊವಿಡ್-19 ವೈರಾಣುವು ಗಾಳಿಯಷ್ಟೇ ವೇಗವಾಗಿ ಚಲಿಸುತ್ತಿರಬಹುದು. ಸಹಜವಾಗಿಯೇ ಈ ವ್ಯಾಪಕತೆಯೂ ಊರು-ಕೇರಿ, ದೇಹ-ಕೋಶಗಳ ಬಲಗಳನ್ನು ಮೀರಿ ದೇಶಗಳ ಆರ್ಥಿಕ, ಸಾಮಾಜಿಕ, ಮಾನಸಿಕ ಸ್ವಾಸ್ಥ್ಯವನ್ನು ಹಾಳುಗೆಡಿಸುತ್ತಿರುವುದು ಸ್ಪಷ್ಟ.

ರೋಗ ಲಕ್ಷಣಗಳು ವೈದ್ಯ ಜಗತ್ತಿಗೆ ವಿನೂತನ ಸವಾಲುಗಳನ್ನು ಹಾಕುತ್ತಿವೆ. ಈ ಸಮಯದಲ್ಲಿ ರೋಗ ಹರಡದಂತೆ ತಡೆಗಟ್ಟುವ ಮುಂಜಾಗ್ರತೆಯ ಕ್ರಮಗಳಾದ ಮನೆಯಲ್ಲಿರಿ, ಸಾಮಿಪ್ಯ ಬಯಸಿದಿರಿ ಎನ್ನುವಂತಹ ಅಭ್ಯಾಸಗಳು ಮೊದಲ ಹಂತದ ರೋಗ ಹಬ್ಬದಂತೆ ತಡೆಗಟ್ಟುವ ಪ್ರಯತ್ನವೆನ್ನಬಹುದು. ಈ ವಿಷಯದ ಬಗ್ಗೆಯೇ ದಿನಕ್ಕೊಂದು ಹೇಳಿಕೆ, ಪ್ರಚೋದನೆಯ ಮಾತುಗಳನ್ನು ಆಡುವ ರಾಜಕಾರಣೆಗಳು, ಜನಪ್ರತಿನಿಧಿಗಳು ಎಲ್ಲಡೇ ಇದ್ದಾರೆ. ಇವೆರಲ್ಲರ ನಿಲುವು, ಮಾತುಗಳನ್ನು ಮೀರಿಸಿರುವ ನಿದರ್ಶನವೆಂದರೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ಮಹಾಶಯರದ್ದು.

ಮಹಾ ಜವಾಬ್ದಾರಿಯುತ ಸ್ಥಾನದಲ್ಲಿರುವವರೂ ತಮ್ಮ ಆಲೋಚನೆಗಳ ಮೇಲೆ ಹಿಡಿತವಿರಿಸಿಕೊಳ್ಳದಿರುವುದಕ್ಕೆ ಮನೋವೈಜ್ಞಾನಿಕ ವಿವರಣೆಗಳಿವೆ. ಆಲೋಚನೆ, ನಿರ್ಧಾರ ಮಾಡುವಂತಹ ವಿಷಯಕ್ಕೆ ಬಂದಾಗ ಕೆಲವರು ತಾರ್ಕಿಕವಾಗಿ (ಹಿಂದು-ಮುಂದು ಏನೆಂದು ವಿಚಾರ ಮಾಡುವುದು) ವಿಷಯವನ್ನು ಗ್ರಹಿಸುವುದು ಮತ್ತು ಭಾವುಕತನದಿಂದ ತಕ್ಷಣದಲ್ಲಿ (ಮನಸಿಗೆ ಬಂದದ್ದೇ ಸರಿ ಎನ್ನುವಂತಹದ್ದು) ಅತಿ ಉತ್ಸುಕತೆಯಿಂದ ಮಾತಾಡುವ ಸ್ಚಭಾವದವರಾಗಿರುತ್ತಾರೆ. ಈ ಸ್ವಭಾವದಲ್ಲಿ ಅವಸರವೇ ಸಮಸ್ಯೆಯ ಪರಿಹಾರದ ಕ್ರಮವಾಗಿರುತ್ತದೆ. ಆದರೆ ತಾರ್ಕಿಕ ಸ್ವಭಾವದವರಲ್ಲಿ ಸಾವಧಾನದಿಂದ ಆಧಾರಗಳನ್ನು ಸಂಗ್ರಹಿಸಿ, ತಡವಾದರೂ ಸರಿಯೇ ಸಮಸ್ಯೆಯ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸುತ್ತಾರೆ.

ದುರದೃಷ್ಟದ ಸಂಗತಿ ಎಂದರೇ ಹೀಗೆ ಅವಸರವಸರಿಂದ ನಿಲುವು, ನಿರ್ಧಾರಗಳನ್ನು ತೆಗೆದುಕೊಳ್ಳುವವರು ಪ್ರಾಧಾನ್ಯತೆ ಮತ್ತು ಜನಾಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಜನಾಕರ್ಷಣೆಗೆ ಒಳಗಾಗುವುದರಿಂದ ಅವರ ಸ್ವಭಾವದಲ್ಲಿ ಇತರರ ಭಾವುಕತನವನ್ನು ಕೆದಕುವ ಮತ್ತು ಮೂಲ ವಿಷಯದ ತೀವ್ರತೆಯನ್ನು ಬದಿಗಿರಿಸುವ ಪ್ರವೃತ್ತಿಯ ಉತ್ತೇಜಕತನವೂ ಇರುತ್ತದೆ. ಉದಾಹರಣೆಗೆ … ಲಾಕ್‌ ಡೌನ್‌ ಬಗ್ಗೆ ನಿಯಮಗಳನ್ನು ಅನುಸರಿಸಿದ್ದು ಸಾಕು, ಇನ್ನು ಹೊರಬಂದು ಎಚ್ಚರಿಕೆಯಿಂದ ಅಡ್ಡಾಡಿಕೊಂಡಿರಿ- ಎನ್ನುವಂತಹ ಟ್ರಂಪ್ ನುಡಿಗಳು. ಇಂತಹ ಮಾತುಗಳನ್ನಾಡುವುದು ಬಹಳ ಸುಲಭವೇನೋ ಹೌದು, ಆದರೆ ಲಕ್ಷಾಂತರ ಜನರ ಆರೋಗ್ಯ ಮತ್ತು ದೇಶದ ಪ್ರಗತಿಗೆ ಇವುಗಳು ಅಪಾಯಕಾರಿ ಎನಿಸುವುದಿಲ್ಲವೆ?

ದುರಂತವೆಂದರೆ ಈ ನಮೂನೆಯ ವಿಚಾರಧಾರೆಯು ವಿಶ್ವದ ಎಲ್ಲಾ ದೇಶದಗಳಲ್ಲಿಯೂ ಕಂಡುಬರುತ್ತದೆ. ಅಂದರೆ, ತಕ್ಷಣದಲ್ಲಿ ಬಂದ ಆಲೋಚನೆಗಳು ನಿಜವಾಗಿಯೂ ಉತ್ತಮ ಎನ್ನುವಂತಹ ಭಾವೋದ್ರೇಕದ ಸ್ವಭಾವಗಳು. ಹೀಗಾಗುವುದಕ್ಕೆ ಬಹುಜನರ ಇದುವರೆಗಿನ ನಿತ್ಯದ ಬದುಕು ಹಾಗೂ ಹೀಗೂ ಸಾಗುತ್ತಿದ್ದು, ಭೀಕರ ಕ್ಷಾಮ, ಪ್ರಕೃತಿ ವಿಕೋಪಗಳನ್ನು ಹೊರತುಪಡಿಸಿದರೆ, ಸಾಮಾನ್ಯವಾಗಿ ಸರಾಗವಾಗಿ ಮುಂದುವರೆಯುತ್ತಿದ್ದದ್ದು ಒಂದು ಪ್ರಮುಖ ಕಾರಣ ಎನ್ನಬಹುದು. (ದಿನನಿತ್ಯದ ಸೌಲಭ್ಯಗಳನ್ನು ಕಂಡುಹಿಡಿಯುವುದಕ್ಕೆ ನೆರವಾಗಿದ್ದು ತಾರ್ಕಿಕ ಕ್ರಮದ ಅಲೋಚನೆಗಳಿಂದ ಎನ್ನುವುದು ಲೆಕ್ಕಕ್ಕೆ ಬಾರದ ಮಾತು ಎನ್ನುವುದನ್ನು ಒತ್ತಿ ಹೇಳುವ ಅಗತ್ಯವಿಲ್ಲ.) ಆದುದರಿಂದಲೇ ಕೊವಿಡ್-19 ವೈರಾಣುವಿನ ಅತಿಕ್ರಮಣ ಶಕ್ತಿಯ ಬಗ್ಗೆ ಜನಮನಸಿನಲ್ಲಿ ಭಯಂಕರ ಎನ್ನುವಂತಹ ಭಾವನೆ ಮೂಡದಿರುವುದು ಮತ್ತು ಮೂಡದಂತೆ ಮಾಡುತ್ತಿರುವ ಭಾವಗಳು. ಭಾವುಕತನ ಮತ್ತು ಆತ್ಮವಿಶ್ವಾಸದ ಮೂಲಕ ಈ ವೈರಾಣುವನ್ನು ಎದುರಿಸುವುದು ಸಾಧ್ಯವಾಗಿಲ್ಲ ಎನ್ನುವುದಕ್ಕೆ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೇ ಸಾಕ್ಷಿ.

ಹೀಗೆ ಸಾವಿನ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದ್ದಾಗ್ಯೂ ವೈದ್ಯ ವಲಯಗಳಿಂದ ಬರುತ್ತಿರುವಂತಹ ಎಚ್ಚರಿಕೆಯ ಕ್ರಮಗಳು ಜನಮನಸ್ಸಿನಲ್ಲಿ ನಾಟದಿರುವುದಕ್ಕೆ "ನನಗೇನು ಆಗಲ್ಲ, ನನಗೆ ದೈವ ಬಲವೋ ಬೆಂಬಲವೋ ಇದೆ," ಎನ್ನುವಂತಹ ಆಂತರಿಕ ಭಾವ. ಹೀಗೆ ಗಟ್ಟಿ ಮಾಡಿಕೊಳ್ಳುವ ಮನಸ್ಸಿನಲ್ಲಿ ವೈರಾಣುವಿನ ಸೂಕ್ಷ್ಮ ಮತ್ತು ಅದೃಶ್ಯ ಶಕ್ತಿಯ ಬಗ್ಗೆ ಇರದ ಅರಿವು. ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿರುವ ತಿಳಿವಳಿಕೆಗಳು ಎಂದರೆ: ಸಾಮಾನ್ಯ ರೀತಿಯ ಎಚ್ಚರಿಕೆಗಳು, ಆಹಾರ ಸೇವನೆ, ಕುಡಿಯುವ ನೀರು ಮತ್ತು ಸೂಕ್ತ ಔಷಧೋಪಚಾರ ಅನುಸರಿಸಿದರೇ ರೋಗ ತಟ್ಟುವುದಿಲ್ಲ ಎನ್ನುವಂತಹ ನಂಬಿಕೆ. ಆದರೆ ಈ ವೈರಾಣುವು ಇಂತಹ ಯಾವುದೇ ಕ್ರಮಗಳಿಗೂ ಬಗ್ಗದು ಎನ್ನುವ ಅಂತಃಪ್ರಜ್ಞೆ ವ್ಯಾಪಕವಾಗದಿರುವುದು.

ಭೀಕರ ಪ್ರಕೃತಿ ವಿಕೋಪಗಳ ಸಮಯದಲ್ಲಿ ಜನರ ಕಣ್ಣೆದುರಿಗೆ ಪ್ರಕೃತಿಯ ಭಯಂಕರ ಸ್ವರೂಪ ಕಾಣಿಸಿಕೊಂಡು ಭೀತಿಯನ್ನು ಹೆಚ್ಚಿಸುತ್ತದೆ. ಆ ಸಮಯದಲ್ಲಿ ಪ್ರಾಣ ರಕ್ಷಣೆಗಾಗಿ ವ್ಯಕ್ತಿಗಳ ಮನಸ್ಸು ಏನು ಬೇಕಾದರೂ ಮಾಡಲು ಸಿದ್ಧವಿರುವುದು. ಆದರೆ ಕೊವಿಡ್-‌19 ವೈರಾಣುವಿನ ಬಲವೇನೆನ್ನುವುದು ಜನರ ಮನಸಿಗೆ ನಾಟಿದಂತ್ತಿಲ್ಲದಿರುವುದು ಒಂದು ಅಂಶವಾದರೆ, ಅದಕ್ಕಿಂತಲೂ ಹೆಚ್ಚಾಗಿ ನಾಳೆಯ ಬಗ್ಗೆ ಮೂಡುತ್ತಿರುವ, ಅಸಹಾಯಕತೆ ಮತ್ತು ಅಸ್ಪಷ್ಟತೆಗಳು. ಹೀಗಾಗಿ ಜನಮನಸ್ಸು ವಿಚಾರ ಮಾಡುವ ಸಂಯಮ ಸ್ಥಿತಿಯನ್ನು ಕಳೆದುಕೊಂಡು ಅಪಾಯದಂಚಿಗೆ ಸುಳಿಯುತ್ತಿರುವುದು ದೊಡ್ಡ ದೌರ್ಭಾಗ್ಯವೆ ಸರಿ. ಜೊತೆಯಲ್ಲಿ ನಾಳೆಯ ಆತಂಕಗಳು ಇಂದಿನ ಅಪಾಯದ ಸನ್ನಿವೇಶಗಳನ್ನು ಎಚ್ಚರಿಕೆಯಿಂದ ನೋಡದಿರುವುಂತೆ ಮಾಡಬಲ್ಲ ಆರ್ಥಿಕ ಸಾಮಾಜಿಕ ದುಸ್ಥಿತಿಗಳು. ಹಾಗೆಯೇ ರೋಗದ ಮೂಲಗಳನ್ನು ಧರ್ಮ, ಜನಾಂಗ ಸೀಮಿತ ಎನ್ನುವ ದೃಷ್ಟಿಕೋನವನ್ನು ಬಲಪಡಿಸುತ್ತಿರುವ ಸಾಮಾಜಿಕ ಜಾಲಾತಾಣಗಳೂ ಸಹ ರೋಗಾಣುವು ಕೆಲವೊಂದು ವರ್ಗಕ್ಕೆ ಸೀಮಿತವೆನ್ನುವಂತಹ ಭಾವುಕತನವನ್ನು ಬಲಪಡಿಸುತ್ತಿರುವುದು.

ಇದನ್ನು ಓದಿ: ಉತ್ತಮ ವ್ಯಕ್ತಿಗೂ ಅಧಿಕಾರ ಸಿಕ್ಕಾಗ ಆತ ಮೊದಲು ಪ್ರದರ್ಶಿಸುವುದು ದರ್ಪ, ದೌರ್ಜನ್ಯವನ್ನೇ!

ಈ ರೋಗದಿಂದಾಗಿಯೇ ಅನೇಕರಲ್ಲಿ ಆತಂಕ ಬಲಗೊಂಡಿರುವುದಂತೂ ನಿಜ. ಆದರೆ ಇದು ರೋಗ ಹರುಡುತ್ತಿರುವ ವೈರಾಣವಿನ ಶಕ್ತಿ ಎನ್ನುವುದಕ್ಕಿಂತಲೂ ಕೆಲವು ದೇಶ, ಕೆಲ ರಿಲಿಜಿನ್‌ ಎನ್ನುವಂತಹ ಪೂರ್ವಾಗ್ರಹ ಆಧಾರಿತ ನಿಲುವುಗಳಿಂದಾಗುತ್ತಿರುವುದೇ ಹೆಚ್ಚು. ಈ ಸಮಯದಲ್ಲಿ ನಮ್ಮ ಚುನಾಯಿತ ಜನಪ್ರತಿನಿಧಿಗಳು ತಮ್ಮಲ್ಲಿರುವ ಭಾವುಕತನ, ಪೂರ್ವಾಗ್ರಹ, ರೂಢಿಗತ ವರ್ತನೆಗಳ ಬಗ್ಗೆ ಆಲೋಚಿಸುವುದರ ಮೂಲಕ ಸಂಕಷ್ಟದ ಸಮಯದಲ್ಲಿ ಜನತೆಯ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ವಿನೂತನ ಉಪಾಯಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ.

ಈ ರೋಗದ ನಿಯಂತ್ರಣ ಕ್ರಮದಲ್ಲಿ ವ್ಯಕ್ತಿಯ ಮಾನಸಿಕ ಮಟ್ಟದಲ್ಲಿ ವೈದ್ಯ ಜಗತ್ತಿನ ಸಲಹೆ, ಮಾರ್ಗದರ್ಶನಗಳಿಗ ಹೆಚ್ಚು ಮಹತ್ವ ನೀಡುವುದು ಮತ್ತು ಕೈಲಾದ ಮಟ್ಟಿಗೆ ಇತರರಿಗೆ ನೆರವು, ನೆಮ್ಮದಿಯನ್ನು ಕೃತಿ ಮತ್ತು ಕಾರ್ಯಗಳ ಮೂಲಕ ಸಹಭಾಗಿತ್ವವನ್ನು ವ್ಯಕ್ತಪಡಿಸಬೇಕೇ ಹೊರತು ಹಗೆತನ, ದ್ವೇಷದ ಮೂಲಕ ಕೋವಿಡ್-19 ವೈರಾಣುವು ಹುಟ್ಟಿಸುತ್ತಿರುವ ಭಯ, ಆತಂಕ, ಹತಾಶೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.

ಲೇಖಕರು: ಡಾ. ಅ.ಶ್ರೀಧರ, ಮನೋವಿಜ್ಞಾನಿ
First published: