ರಿಪೋ ದರ 75, ರಿವರ್ಸ್ ರೆಪೋ 90 ಮೂಲಾಂಕ ಇಳಿಕೆ; 3 ತಿಂಗಳು ಸಾಲ ಮರುಪಾವತಿಗೆ ವಿನಾಯಿತಿ

ಆರ್​ಬಿಐ ತನ್ನ ರೆಪೋ, ರಿವರ್ಸ್ ರೆಪೋ ದರಗಳಲ್ಲಿ ಭಾರೀ ಕಡಿತಗೊಳಿಸಿದೆ. ತಿಂಗಳ ಕಂತುಗಳಿಗೆ 3 ತಿಂಗಳ ವಿನಾಯಿತಿ ಘೋಷಿಸಿದೆ.

news18
Updated:March 27, 2020, 11:02 AM IST
ರಿಪೋ ದರ 75, ರಿವರ್ಸ್ ರೆಪೋ 90 ಮೂಲಾಂಕ ಇಳಿಕೆ; 3 ತಿಂಗಳು ಸಾಲ ಮರುಪಾವತಿಗೆ ವಿನಾಯಿತಿ
ಫೈಲ್​ ಫೋಟೊ: ಆರ್​ಬಿಐ ಕಚೇರಿ
  • News18
  • Last Updated: March 27, 2020, 11:02 AM IST
  • Share this:
ನವದೆಹಲಿ(ಮಾ. 26): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಇದೆ. ಇದರಿಂದ ಉದ್ಭವಿಸುವ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವ ಒಂದು ಕ್ರಮವಾಗಿ ಇವತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಬಿಗಿ ಕ್ರಮಗಳನ್ನ ಕೈಗೊಂಡಿದೆ. ರೆಪೋ, ರಿವರ್ಸ್ ರೆಪೋ ದರಗಳನ್ನ ಭಾರೀ ಕಡಿತಗೊಳಿಸಿದೆ. ತಿಂಗಳ ಕಂತುಗಳಿಗೆ 3 ತಿಂಗಳ ವಿನಾಯಿತಿ ಘೋಷಿಸಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇವತ್ತು ಪತ್ರಿಕಾಗೋಷ್ಠಿಯಲ್ಲಿ ಇದನ್ನು ತಿಳಿಸಿದರು.

ಆರ್​ಬಿಐ ಪ್ರಕಟಿಸಿರುವಂತೆ ರಿಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಇದು ಶೇ. 4.4ಕ್ಕೆ ಇಳಿದಿದೆ. ರಿವರ್ಸ್ ರಿಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5ರಷ್ಟಿದ್ದ ರಿವರ್ಸ್ ರಿಪೋ ಈಗ ಶೇ. 4.20ಕ್ಕೆ ಇಳಿದಿದೆ.

ಸಿಆರ್​ಆರ್ ಅಥವಾ ಕ್ಯಾಷ್ ರಿಸರ್ವ್ ರೇಷಿಯೋ ದರದಲ್ಲೂ ಭಾರೀ ವ್ಯತ್ಯಯವಾಗಿದೆ. 100 ಮೂಲಾಂಕಗಳಷ್ಟು ಇಳಿಕೆಗೊಂಡಿರುವ ಸಿಆರ್​ಆರ್​ ದರ ಈಗ ಶೇ. 3ಕ್ಕೆ ನಿಗದಿಯಾಗಿದೆ. ಮಾರ್ಚ್ 28ರಿಂದ ಒಂದು ವರ್ಷದ ಅವಧಿಯವರೆಗೆ ಈ ದರ ಅನ್ವಯವಾಗಲಿದೆ ಎಂದು ಆರ್​ಬಿಐ ಗವರ್ನರ್ ತಿಳಿಸಿದ್ದಾರೆ. ಆರ್​ಬಿಐನ ಈ ಕ್ರಮದಿಂದ ದೇಶದ ಆರ್ಥಿಕತೆಗೆ 3.75 ಲಕ್ಷ ಕೋಟಿಯಷ್ಟು ಹಣದ ಹರಿವು ಆಗಲಿದೆ. ಇದರಿಂದ ಒಂದು ವರ್ಷದಲ್ಲಿ ಒಂದಷ್ಟು ಚೇತರಿಕೆಗೆ ದಾರಿ ಆಗುವ ನಿರೀಕ್ಷೆ ಇದೆ.

3 ತಿಂಗಳು ಇಎಂಐಗೆ ವಿನಾಯಿತಿ:

ಆರ್​ಬಿಐ ಮತ್ತೊಂದು ಮಹತ್ವದ ಪ್ರಕಟಣೆಯಲ್ಲಿ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಸೂಚಿಸಿದೆ. ಅಂದರೆ ಸಾಲ ಪಡೆದವರು ಮೂರು ತಿಂಗಳ ಕಾಲ ಇಎಂಐ ಕಟ್ಟುವ ಅನಿವಾರ್ಯತೆ ಇಲ್ಲ. ಬೇಕಾದರೆ ಕಟ್ಟಬಹುದು, ಬೇಡದಿದ್ದರೆ ಇಲ್ಲ. ಆದರೆ, ಮೂರು ತಿಂಗಳ ನಂತರ ಇಎಂಐ ಮಾಮೂಲಿಯಾಗೇ ಮುಂದುವರಿಯುತ್ತದೆ. ಗಮನಿಸಬೇಕಾದ ವಿಚಾರವೆಂದರೆ ಇದು ಇಎಂಐ ಕಟ್ಟಲು ಅವಧಿ ಮುಂದೂಡಲಾಗಿದೆಯೇ ಹೊರತು ಹಣದ ಮನ್ನಾ ಆಗಿಲ್ಲ. ಜನರು ಈ ವಿಚಾರದಲ್ಲಿ ಗೊಂದಲಕ್ಕೊಳಗಾಗುವುದು ಬೇಡ.

ಏನಿದು ರೆಪೋ ದರ?

ರೆಪೋ ದರ ಎಂಬುದು ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ಅಂದರೆ ವಾಣಿಜ್ಯ ಬ್ಯಾಂಕುಗಳು ಹಣದ ಕೊರತೆ ಎದುರಿಸಿದರೆ ಆರ್​ಬಿಐನಿಂದ ಸಾಲ ಪಡೆದುಕೊಳ್ಳುತ್ತವೆ. ಆ ಹಣಕ್ಕೆ ನಿಗದಿಯಾಗಿರುವ ಬಡ್ಡಿ ದರವೇ ರೆಪೋ ರೇಟ್. ಈಗ ಅದು ಶೇ. 4.4 ಕ್ಕೆ ಇಳಿದಿದೆ.ರಿವರ್ಸ್ ರೆಪೋ ದರ:

ಇದು ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಇಡುವ ಠೇವಣಿ ಹಣದ ಮೇಲೆ ನೀಡಲಾಗುವ ಬಡ್ಡಿ ದರವಾಗಿದೆ. ಅಂದರೆ ಆರ್​ಬಿಐ ಈ ಠೇವಣಿ ಮೇಲೆ ಇಂತಿಷ್ಟು ಬಡ್ಡಿ ನೀಡುತ್ತದೆ. ಅದೇ ರಿವರ್ಸ್ ರಿಪೋ ರೇಟ್.

First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading