ದೆಹಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಿ ಡಾ.ವಿ.ಕೆ.ಪೌಲ್ ಸಮಿತಿ ಶಿಫಾರಸು

ವೆಂಟಿಲೇಟರ್ ಜೊತೆ ಐಸಿಯು ಹಾಸಿಗೆಗಳು ಸೇರಿ ಒಂದು ದಿನಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 44 ರಿಂದ 45 ಸಾವಿರ ರೂ ನಿಗದಿಪಡಿಸಲಾಗಿತ್ತು. ಈಗ ದರವನ್ನು 15 ರಿಂದ18 ಸಾವಿರಕ್ಕೆ ಇಳಿಸಿ ಶಿಫಾರಸು ಮಾಡಲಾಗಿದೆ. ಈ ದರಗಳು ಪಿಪಿಇ ವೆಚ್ಚವನ್ನು ಒಳಗೊಂಡಿರುತ್ತವೆ ಎಂದು ಸಮಿತಿ ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವ ದೆಹಲಿ (ಜೂನ್‌ 19); ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ರಚಿಸಿರುವ ಉನ್ನತ ಮಟ್ಟದ ಸಮಿತಿಯು ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ವಿಧಿಸಬಹುದಾದ ದರವನ್ನು ಈಗಿರುವ ದರಗಳ ಮೂರನೇ ಎರಡಷ್ಟು ಕಡಿಮೆ ಮಾಡಲು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಗಳು ಹಣವನ್ನು ಲೂಟಿ ಮಾಡುತ್ತಿವೆ ಎಂಬ ಸುದ್ದಿ ಇತ್ತೀಚೆಗೆ ರಾಷ್ಟ್ರಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ಈ ಕುರಿತು ಖಾಸಗಿ ಆಸ್ಪತ್ರೆಗಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಿಗೆ ಕೊರೋನಾ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ನಿಗದಿಪಡಿಸಬೇಕು ಎಂಬ ಕೂಗು ಕೇಳಿ ಬಂದಿತ್ತು.

ಹೀಗಾಗಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ನೇತೃತ್ವದ ಸಮಿತಿಗೆ ಕೇಂದ್ರ ಸರ್ಕಾರ ಈ ಜವಾಬ್ದಾರಿಯನ್ನು ವಹಿಸಿತ್ತು. ಇಂದು ಈ ಕುರಿತ ಶಿಫಾರಸು ನೀಡಿರುವ ಡಾ.ವಿ.ಕೆ ಪಾಲ್ ನೇತೃತ್ವದ ಸಮಿತಿ, ಖಾಸಗಿ ಆಸ್ಪತ್ರೆಗಳಲ್ಲಿ ಈಗಿರುವ ದರಗಳಲ್ಲಿ ಶೇ.30ರಷ್ಟು ಕಡಿತಗೊಳಿಸಿದೆ. ವೆಂಟಿಲೇಟರ್, ಪ್ರತ್ಯೇಕ ಹಾಸಿಗೆಗಳು ಮತ್ತು ಐಸಿಯು ಹಾಸಿಗಳ ದರವನ್ನು ನಿಗದಿಪಡಿಸಿದೆ.

ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಹಾಸಿಗೆಗಳಿಗೆ 24 ರಿಂದ 25 ಸಾವಿರ ರೂ ವಿಧಿಸುತ್ತಿವೆ. ಆದರೆ, ಸಮಿತಿ ಅದನ್ನು 8 ರಿಂದ 10 ಸಾವಿರ ರೂಪಾಯಿಗೆ ಇಳಿಸಿದೆ. ವೆಂಟಿಲೇಟರ್ ಇಲ್ಲದ ಐಸಿಯು ಹಾಸಿಗೆಗಳಿಗೆ 34 ರಿಂದ 35 ಸಾವಿರ ಇದ್ದು ಈ ದರವನ್ನು 13 ರಿಂದ 15 ಸಾವಿರಗಳಿಗೆ ಇಳಿಕೆ ಮಾಡಲಾಗಿದೆ.

ವೆಂಟಿಲೇಟರ್ ಜೊತೆ ಐಸಿಯು ಹಾಸಿಗೆಗಳು ಸೇರಿ ಒಂದು ದಿನಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 44 ರಿಂದ 45 ಸಾವಿರ ರೂ ನಿಗದಿಪಡಿಸಲಾಗಿತ್ತು. ಈಗ ದರವನ್ನು 15 ರಿಂದ18 ಸಾವಿರಕ್ಕೆ ಇಳಿಸಿ ಶಿಫಾರಸು ಮಾಡಲಾಗಿದೆ. ಈ ದರಗಳು ಪಿಪಿಇ ವೆಚ್ಚವನ್ನು ಒಳಗೊಂಡಿರುತ್ತವೆ ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ : Health Bulletien: ಒಂದೇ ದಿನ ರಾಜ್ಯದಲ್ಲಿಂದು ದಾಖಲೆಯ 337, ಬೆಂಗಳೂರಲ್ಲಿ 138 ಕೊರೋನಾ ಪ್ರಕರಣ; 10 ಸಾವು ದಾಖಲು!

ಈ ಮೊದಲು ಖಾಸಗಿ ಆಸ್ಪತ್ರೆಗಳು ಪಿಪಿಇ ಕಿಟ್ ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದ್ದವು. ಆದರೆ, ಸರ್ಕಾರ ನೇಮಕ ಮಾಡಿರುವ ಸಮಿತಿ ಈ ರೀತಿಯ ಹೆಚ್ಚುವರಿ ಶುಲ್ಕವನ್ನು ರದ್ದು ಮಾಡಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ದೆಹಲಿ ಸರ್ಕಾರಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ಆದೇಶ ಹೊರಡಿಸುವ ಮೊದಲು ದೆಹಲಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
First published: