ಮೂರು ತಿಂಗಳು ಯಾವುದೇ ಇಎಂಐ ಕಟ್ಟಬೇಕಿಲ್ಲ; ಬ್ಯಾಂಕ್ ವ್ಯವಹಾರದ ಕುರಿತ ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ!

ರಿಸರ್ವ್ ಬ್ಯಾಂಕ್‌ನ ಈ ನಿರ್ಧಾರದಿಂದಾಗಿ ಬ್ಯಾಂಕ್ ಗ್ರಾಹಕರು ಮುಂದಿನ ಮೂರು ತಿಂಗಳ ಅವಧಿಗೆ ಯಾವುದೇ ಇಎಂಐ ಪಾವತಿ ಮಾಡುವಂತಿಲ್ಲ. ಆದರೆ, ಈ ನಿರ್ಧಾರದಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ? ಈ ನಿಯಮ ಯಾವ ಯಾವ ಸಾಲಗಳಿಗೆ ಅನ್ವಯಿಸುತ್ತದೆ? ಸೇರಿದಂತೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲದೆ ಉತ್ತರ. 

MAshok Kumar | news18-kannada
Updated:March 27, 2020, 2:58 PM IST
ಮೂರು ತಿಂಗಳು ಯಾವುದೇ ಇಎಂಐ ಕಟ್ಟಬೇಕಿಲ್ಲ; ಬ್ಯಾಂಕ್ ವ್ಯವಹಾರದ ಕುರಿತ ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ!
ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್
  • Share this:
COVID-19 ಪರಿಣಾದಿಂದಾಗಿ ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಮಾರ್ಚ್ 25 ರಿಂದ 21 ದಿನಗಳ ಸುದಿರ್ಘ ಲಾಕ್‌ಡೌನ್ ಘೋಷಿಸಿದೆ. ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳ ಕಂತು ಪಾವತಿಯನ್ನು (ಇಎಂಐ) ಮೂರು ತಿಂಗಳ ಮಟ್ಟಿಗೆ ಮುಂದೂಡಿದೆ. ಅಲ್ಲದೆ, ಈ ನಿರ್ಧಾರವನ್ನು ಪಾಲಿಸುವಂತೆ ಎಲ್ಲಾ ಬ್ಯಾಂಕುಗಳಿಗೂ ಸೂಚನೆಯನ್ನೂ ನೀಡಲಾಗಿದೆ.

ರಿಸರ್ವ್ ಬ್ಯಾಂಕ್‌ನ ಈ ನಿರ್ಧಾರದಿಂದಾಗಿ ಬ್ಯಾಂಕ್ ಗ್ರಾಹಕರು ಮುಂದಿನ ಮೂರು ತಿಂಗಳ ಅವಧಿಗೆ ಯಾವುದೇ ಇಎಂಐ ಪಾವತಿ ಮಾಡುವಂತಿಲ್ಲ. ಆದರೆ, ಈ ನಿರ್ಧಾರದಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ? ಈ ನಿಯಮ ಯಾವ ಯಾವ ಸಾಲಗಳಿಗೆ ಅನ್ವಯಿಸುತ್ತದೆ? ಸೇರಿದಂತೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲದೆ ಉತ್ತರ.

ಪ್ರಶ್ನೆ: ಶೀಘ್ರದಲ್ಲೇ ನನ್ನ ಇಎಂಐ ದಿನಾಂಕ ಹತ್ತಿರಾಗಲಿದೆ. ನನ್ನ ಖಾತೆಯಿಂದ ಹಣ ಕಡಿತವಾಗುವುದಿಲ್ಲವೇ?

ಉತ್ತರ: ಸಾಲದ ಕಂತು ಪಾವತಿಯನ್ನು ಮೂರು ತಿಂಗಳ ಕಾಲ ಮುಂದೂಡುವಂತೆ ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಹೀಗಾಗಿ ಬ್ಯಾಂಕುಗಳು ಇಎಂಐ ಅನ್ನು ಸದ್ಯಕ್ಕೆ ಅಮಾನತಿನಲ್ಲಿಟ್ಟಿದೆ. ಇದರರ್ಥ ನಿಮ್ಮ ಬ್ಯಾಂಕಿನಿಂದ ನಿರ್ದಿಷ್ಟ ಅನುಮೋದನೆ ಇಲ್ಲದಿದ್ದರೆ, ನಿಮ್ಮ ಇಎಂಐ ಹಣವನ್ನು ನಿಮ್ಮ ಖಾತೆಯಿಂದ ಕಡಿತಗೊಳಿಸಲಾಗುವುದಿಲ್ಲ.

ಪ್ರಶ್ನೆ: ನನ್ನ ಇಎಂಐ ಅನ್ನು ಅಮಾನತಿನಲ್ಲಿಡಲಾಗಿದೆ ಎಂಬುದು ನನಗೆ ಹೇಗೆ ತಿಳಿಯುತ್ತದೆ?

ಉತ್ತರ: ಈ ಕುರಿತು ಆರ್‌ಬಿಐ ಇನ್ನೂ ವಿವರವಾದ ಮಾರ್ಗಸೂಚಿಗಳನ್ನು ನೀಡಿಲ್ಲ. ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ನಂತರ, ಈ ಕುರಿತು ನಿರ್ದಿಷ್ಟವಾಗಿ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

ಪ್ರಶ್ನೆ: ಬ್ಯಾಂಕ್ ಮಟ್ಟದಲ್ಲಿ ಈ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ?ಉತ್ತರ: ಆರ್‌ಬಿಐ ತೆಗೆದುಕೊಂಡಿರುವ ನಿಷೇಧದ ತೀರ್ಮಾನವನ್ನು ಎಲ್ಲಾ ಬ್ಯಾಂಕುಗಳು ಮೊದಲು ಚರ್ಚೆ ನಡೆಸುತ್ತವೆ. ಮೊದಲು ಅವರ ಮಂಡಳಿಯ ಮಟ್ಟದಲ್ಲಿ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆದ ನಂತರ ನಿಷೇಧದ ತೀರ್ಮಾನವನ್ನು ಎಲ್ಲಾ ಬ್ಯಾಂಕುಗಳು ಅವರ ಗ್ರಾಹಕರಿಗೆ ತಿಳಿಸುತ್ತವೆ.

ಪ್ರಶ್ನೆ: ಬ್ಯಾಂಕ್ ನನ್ನ ಇಎಂಐಗಳನ್ನು ಅಮಾನತುಗೊಳಿಸಿದರೆ, ನಿರ್ದಿಷ್ಟ ಸಮಯಕ್ಕೆ ನಾನು ಹಣ ಪಾವತಿಸದ ಕಾರಣ ನನ್ನ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

ಉತ್ತರ; ಇಲ್ಲ. ಯಾವುದೇ ಕಾರಣಕ್ಕೂ ಇದು ನಿಮ್ಮ ಕ್ರಿಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರದು.

ಪ್ರಶ್ನೆ : ಯಾವ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಇಎಂಐ ಮುಂದೂಡಿಕೆ ಅವಕಾಶ ನೀಡಬಹುದು?

ಉ: ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕುಗಳು ಸೇರಿದಂತೆ), ಸಹಕಾರಿ ಬ್ಯಾಂಕುಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಮತ್ತು ಎನ್‌ಬಿಎಫ್‌ಸಿಗಳು (ವಸತಿ ಹಣಕಾಸು ಕಂಪನಿಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು) ಸೇರಿದಂತೆ ಎಲ್ಲಾ ಬ್ಯಾಂಕುಗಳು ಈ ಅವಕಾಶವನ್ನು ನೀಡುತ್ತವೆ.

ಪ್ರಶ್ನೆ: ಇದು ಇಎಂಐಗಳ ಮನ್ನಾ ಅಥವಾ ಮುಂದೂಡುವಿಕೆಯೇ?

ಉತ್ತರ: ಇದು ಇಎಂಐ ಮನ್ನಾ ಅಲ್ಲ ಬದಲಿಗೆ ಮುಂದೂಡಿಕೆ ಅಷ್ಟೆ. ಮೂರು ತಿಂಗಳ ನಂತರ ಸಾಲ ಮರುಪಾವತಿ ವೇಳಾಪಟ್ಟಿ ಮತ್ತು ಬಾಕಿ ದಿನಾಂಕ ಎಂದಿನಂತೆ ಮುಂದುವರೆಯಲಿದೆ.

ಪ್ರಶ್ನೆ: ಈ ನಿಷೇಧವು ಪ್ರಧಾನ ಸಾಲ ಮತ್ತು ಬಡ್ಡಿ ಎರಡಕ್ಕೂ ಅನ್ವಯವಾಗುತ್ತದೆಯೇ?

ಉತ್ತರ: ಹೌದು. ಬ್ಯಾಂಕ್ ಘೋಷಣೆ ಮಾಡಿದ ನಂತರ ನಿಮ್ಮ ಪ್ರಧಾನ ಸಾಲ ಮತ್ತು ಬಡ್ಡಿ ಎರಡರಿಂದಲೂ ನಿಮಗೆ ವಿನಾಯಿತಿ ನೀಡಲಾಗುತ್ತದೆ. ಮಾರ್ಚ್ 1, 2020 ರಂತೆ ಬಾಕಿ ಇರುವ ಎಲ್ಲಾ ಸಾಲಗಳಿಗೂ ಇದು ಅನ್ವಯವಾಗುತ್ತದೆ.

ಪ್ರಶ್ನೆ: ಯಾವ ರೀತಯ ಸಾಲಗಳು ಈ ಮೂರು ತಿಂಗಳ ಇಎಂಐ ನಿಷೇಧಕ್ಕೆ ಒಳಗೊಂಡಿರುತ್ತವೆ?

ಉತ್ತರ: ಆರ್‌ಬಿಐ ತನ್ನ ನೀತಿ ಹೇಳಿಕೆಯಲ್ಲಿ ಯಾವ ಯಾವ ಸಾಲಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಅದರಂತೆ ಗೃಹ ಸಾಲಗಳು, ವೈಯಕ್ತಿಕ ಸಾಲಗಳು, ಶಿಕ್ಷಣ ಸಾಲಗಳು, ಆಟೋ ಮತ್ತು ನಿಗದಿತ ಅಧಿಕಾರಾವಧಿಯನ್ನು ಹೊಂದಿರುವ ಯಾವುದೇ ಸಾಲಗಳು ವಿನಾಯಿತಿ ಪಡೆಯಲಿದೆ. ಮೊಬೈಲ್, ಟಿವಿ, ರೆಫ್ರಿಜರೇಟರ್ ಸೇರಿದಂತೆ ಎಲ್ಲಾ ಸಾಲಗಳೂ ಇದರಲ್ಲಿ ಒಳಗೊಂಡಿದೆ.

ಪ್ರಶ್ನೆ: ಈ ನಿಷೇಧವು ಕ್ರೆಡಿಟ್ ಕಾರ್ಡ್ ಪಾವತಿಗಳನ್ನೂ ಒಳಗೊಳ್ಳುತ್ತದೆಯೇ?

ಉತ್ತರ: ಕ್ರೆಡಿಟ್ ಕಾರ್ಡ್‌‌ಗಳನ್ನು ರಿವಾಲ್ವಿಂಗ್ ಕ್ರೆಡಿಟ್ ಎಂದು ವ್ಯಾಖ್ಯಾನಿಸಲಾಗಿದೆ ಏಕೆಂದರೆ ಇದು ಯಾವುದೇ ನಿರ್ದಿಷ್ಟ ಅವಧಿಯ ಸಾಲವಲ್ಲ. ಹೀಗಾಗಿ ಕ್ರೆಡಿಟ್ ಕಾರ್ಡ್ ಸಾಲ ನಿಷೇಧದ ವ್ಯಾಪ್ತಿಗೆ ಒಳಪಡುವುದಿಲ್ಲ.

ಪ್ರಶ್ನೆ: ಕಾರ್ಖಾನೆ ಸ್ಥಾಪಿಸಲು ನಾನು ಯೋಜನಾ ಸಾಲವನ್ನು ತೆಗೆದುಕೊಂಡಿದ್ದೇನೆ. ನನ್ನ ಇಎಂಐ ಪಾವತಿಸುವಂತಿಲ್ಲವೇ?

ಉತ್ತರ: ಟರ್ಮ್ ಸಾಲ ಎಂದು ವರ್ಗೀಕರಿಸಿದ ಯಾವುದೇ ಸಾಲದ ಮೇಲೆ ನಿಷೇಧವನ್ನು ಅನುಮತಿಸಲಾಗಿದೆ. ನೀವು ಇಎಂಐಗಳನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಬ್ಯಾಂಕಿಗೆ ಮನವರಿಕೆಯಾದರೆ ನೀವು ಸಾಲ ಪಾವತಿ ಮಾಡುವಂತಿಲ್ಲ.

ಪ್ರಶ್ನೆ: ವ್ಯವಹಾರಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಘೋಷಣೆ ಏನು?

ಉತ್ತರ: ವ್ಯವಹಾರಗಳಿಗಾಗಿ ತೆಗೆದುಕೊಂಡಿರುವ ಎಲ್ಲಾ ಕಾರ್ಯನಿರತ ಬಂಡವಾಳ ಸಾಲಗಳಿಗೆ ಬಡ್ಡಿ ಪಾವತಿಗಳನ್ನು ಮುಂದೂಡಲು ಆರ್‌ಬಿಐ ಅನುಮತಿ ನೀಡಿದೆ. ಮಾರ್ಚ್ 1, 2020 ರಂತೆ ಬಾಕಿ ಇರುವ ಎಲ್ಲಾ ಕಾರ್ಯನಿರತ ಬಂಡವಾಳ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಇದು ಅನ್ವಯವಾಗುತ್ತದೆ. ಮುಂದೂಡಲ್ಪಟ್ಟ ಅವಧಿ ಮುಗಿದ ನಂತರ ಈ ಅವಧಿಗೆ ಸಂಗ್ರಹವಾದ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಎಲ್ಲಾ ಜಿಲ್ಲೆಗಳಲ್ಲೂ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವ ಜವಾಬ್ದಾರಿ ಉಸ್ತುವಾರಿ ಸಚಿವರ ಹೊಣೆ; ಬಿಎಸ್‌ವೈ ತೀರ್ಮಾನ
First published: March 27, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading