RBI measures - ಸಾಲ ಮರುಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ ಹೆಚ್ಚಳ

RBI Governor Press Conference - ಲಾಕ್ ಡೌನ್ ಆದ ನಂತರ ಬ್ಯಾಂಕ್ ಗ್ರಾಹಕರಿಗೆ ಸಾಲದ ಕಂತು ಮರುಪಾವತಿ ಮಾಡಲು ಒಟ್ಟು 6 ತಿಂಗಳು ಕಾಲಾವಧಿ ಹೆಚ್ಚಾಗಿದೆ.

ಆರ್​ಬಿಐ

ಆರ್​ಬಿಐ

 • Share this:
  ನವದೆಹಲಿ(ಮೇ 22): ಲಾಕ್ ಡೌನ್ ಘೋಷಣೆಯಾದ ನಂತರ ಮೂರನೇ ಬಾರಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ಹರಿವಿಗೆ ಹಲವು ಕ್ರಮ ಕೈಗೊಂಡಿದ್ಧಾರೆ. ಕಳೆದ ಬಾರಿ ಅವರು ಸಾಲದ ಮರುಪಾವತಿಗೆ ಮೂರು ತಿಂಗಳು ಕಾಲಾವಕಾಶ ಹೆಚ್ಚಳ ಘೋಷಿಸಿದ್ದ ಅವರು ಈಗ ಇನ್ನೂ ಮೂರು ತಿಂಗಳು ಅದನ್ನು ವಿಸ್ತರಿಸಿದ್ಧಾರೆ.

  ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸಣ್ಣ ಉದ್ಯಮಗಳ ಹಿತದೃಷ್ಟಿಯಿಂದ ಶಕ್ತಿಕಾಂತ ದಾಸ್ ಈ ಕ್ರಮ ಕೈಗೊಂಡಿದ್ದಾರೆ. ಲಾಕ್ ಡೌನ್ ಆದ ನಂತರ ಬ್ಯಾಂಕ್ ಗ್ರಾಹಕರಿಗೆ ಸಾಲದ ಕಂತು ಮರುಪಾವತಿ ಮಾಡಲು ಒಟ್ಟು 6 ತಿಂಗಳು ಕಾಲಾವಧಿ ಹೆಚ್ಚಾಗಿದೆ. ಮೂರು ತಿಂಗಳಾದ ಬಳಿಕ ಒಟ್ಟಾರೆ ಆರು ತಿಂಗಳು ಬಾಕಿ ಉಳಿದ ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಪಾವತಿ ಮಾಡಬೇಕಾಗುತ್ತದೆ.

  ಇವತ್ತು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ಬಿಐ ಗವರ್ನರ್, ಒಂದು ಸಣ್ಣ ವೈರಸ್ ಹೇಗೆ ಜಗತ್ತಿನಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆಮೀರಿ ತೀರಾ ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದರು.

  ಇದನ್ನೂ ಓದಿ: RBI Governor Press Conference - ಹಣಕಾಸು ಹರಿವಿಗೆ ಆರ್​ಬಿಐ ವಿವಿಧ ಕ್ರಮ; ರೆಪೋ ದರ ಶೇ.4ಕ್ಕೆ ಇಳಿಕೆ

  ಕಚ್ಛಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್​ನಲ್ಲಿ ಶೆ. 8.6ಕ್ಕೆ ಹೆಚ್ಚಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.

  ಲಾಕ್ ಡೌನ್ ನಂತರ ಖಾಸಗಿ ಭೋಗದ ಪ್ರಮಾಣ ಕಡಿಮೆ ಆಗಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ ಎಂದು ಸಂಕಷ್ಟಗಳ ವಿವರ ನೀಡಿದರು.

  ರೆಪೋ ಇಳಿಕೆ:

  ಸಾಲ ಮರುಪಾವತಿ ಅವಧಿ ಹೆಚ್ಚಳದ ಜೊತೆ ಇವತ್ತು ಆರ್​ಬಿಐ ಗವರ್ನರ್ ಪ್ರಕಟಿಸಿದ ಮತ್ತೊಂದು ಪ್ರಮುಖ ಕ್ರಮ ಎಂದರೆ ರೆಪೋ ಮತ್ತು ರಿವರ್ಸ್ ರೆಪೋ ದರಗಳ ಇಳಿಕೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಅಂದರೆ ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.35ಕ್ಕೆ ಇಳಿಸಲಾಗಿದೆ.

  ಏನಿದು ರೆಪೋ, ರಿವರ್ಸ್ ರೆಪೋ?:
  ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ಸಂಸ್ಥೆ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಠೇವಣಿ ಇಡುವ ಹಣಕ್ಕೆ ಆರ್​ಬಿಐ ಕೊಡುವ ಬಡ್ಡಿಯ ದರವಾಗಿರುತ್ತದೆ.
  First published: