ನವದೆಹಲಿ(ಮೇ 13): ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪ್ರಕರಣ ಸಂಖ್ಯೆ 74,281ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 3,525 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಸಾವಿನ ಸಂಖ್ಯೆ 2,415ಕ್ಕೆ ಏರಿದೆ. ಇಲ್ಲಿಯವರೆಗೆ 24,386 ಜನರು ಗುಣಮುಖಗೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ಇವತ್ತು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ಧಾರೆ.
ಅತೀ ಹೆಚ್ಚು ಪ್ರಕರಣಗಳ ಹಣೆ ಪಟ್ಟಿ ಮಹಾರಾಷ್ಟ್ರಕ್ಕೆ ಮುಂದುವರಿದಿದೆ. ಮುಂಬೈನ ಧಾರಾವಿ ಸ್ಲಮ್ ಪ್ರದೇಶ ಕೊರೋನಾ ಹಾಟ್ ಸ್ಪಾಟ್ ಆಗಿ ಮುಂದುವರಿದಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ 1 ಸಾವಿರ ಗಡಿ ದಾಟಿ ಹೋಗಿದೆ.
ಇದೇ ವೇಳೆ, ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ದೇಶ ಯಶಸ್ಸು ಸಾಧಿಸುವ ಸೂಚನೆ ಇದೆ. ಸೋಂಕು ದ್ವಿಗುಣಗೊಳ್ಳುವ ದರ ಉತ್ತಮಗೊಳ್ಳುತ್ತಿದೆ. ಸೋಂಕು ದ್ವಿಗುಣಗೊಳ್ಳಲು ಈಗ 12.6 ದಿನಗಳಾಗುತ್ತಿವೆ ಎಂದು ಆರೋಗ್ಯ ಸಚಿವರು ಹೇಳಿದ್ಧಾರೆ.
ಕಳೆದ 24 ಗಂಟೆಯಲ್ಲಿ 9 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸೋಂಕು ಮತ್ತು ಸಾವಿನ ಅನುಪಾತ ಶೇ. 3.2 ಇದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 32.8 ಇದೆ ಎಂದೂ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ, ಜಪಾನ್ ಬಿಟ್ಟರೆ ನರೇಂದ್ರ ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅತಿದೊಡ್ಡದು
ಕೊರೋನಾ ವಿರುದ್ಧದ ಹೋರಾಟದಲ್ಲಿ ಪರೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚುತ್ತಿರುವುದು ಡಾ. ಹರ್ಷ್ ವರ್ಧನ್ ಅವರು ನೀಡಿದ ಮಾಹಿತಿಯಿಂದ ಗೊತ್ತಾಗುತ್ತದೆ. ದೇಶದಲ್ಲಿ ಈಗ ದಿನಕ್ಕೆ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಇದೆ. ದೇಶಾದ್ಯಂತ 352 ಸರ್ಕಾರಿ ಲ್ಯಾಬ್ಗಳು ಹಾಗೂ 140 ಖಾಸಗಿ ಲ್ಯಾಬ್ಗಳಲ್ಲಿ ಪರೀಕ್ಷಾ ಸೌಲಭ್ಯ ಇದೆ ಎಂದವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ