ದೇಶಾದ್ಯಂತ ಕೊರೊನಾ 2ನೇ ಅಲೆ ತಗ್ಗಿದ್ದು, 3ನೇ ಅಲೆಯ ಭೀತಿ ಶುರುವಾಗಿದೆ. 2ನೇ ಅಲೆ ವೇಳೆ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಸರ್ಕಾರಗಳ ಕಠಿಣ ಕ್ರಮ ಹಾಗೂ ಚಿಕಿತ್ಸೆ ಮೂಲಕ ಸಾವಿನ ಪ್ರಮಾಣವನ್ನು ನಿಯಂತ್ರಿಸಲಾಗಿತ್ತು. ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಯೆಲ್ಲೋ ಫಂಗಸ್, ಗ್ರೀನ್ ಫಂಗಸ್ ಕೂಡ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಈಗ ಮತ್ತೊಂದು ಅಪರೂಪದ ಫಂಗಸ್ ಕಾಣಿಸಿಕೊಂಡಿರುವುದು ದುಗುಡವನ್ನು ಹೆಚ್ಚಿಸಿದೆ. ಕೊರೊನಾದಿಂದ ಗುಣಮುಖರಾದ ಹೈದ್ರಾಬಾದ್ನ ವ್ಯಕ್ತಿಯಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದೆ. ಮೆದುಳಿನಲ್ಲಿ ಅಪರೂಪದ ಬಿಳಿ ಶಿಲೀಂದ್ರಿ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಚಿಕಿತ್ಸೆ ಬಳಿಕ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೆ ಅಂದಿನಿಂದಲೂ ಆರೋಗ್ಯ ಕ್ಷೀಣಿಸುತ್ತಿತ್ತು, ಅಂಗಾಂಗಗಳು ಸೊರಗಲಾರಂಭಿಸಿದವು. ನಂತರ ಮಾತನಾಡಲು ವ್ಯಕ್ತಿಗೆ ಸಾಧ್ಯವಾಗದೇ ಹೋದಾಗ ವೈದ್ಯರು ಎಂಆರ್ಐ ಸ್ಕ್ಯಾನ್ಗೆ ಮುಂದಾಗಿದ್ದರು. ಕೊರೊನಾದಿಂದ ಗುಣಮುಖರಾದ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರಬಹುದು ಎಂದು ವೈದ್ಯರು ಅಂದಾಜಿಸಿದ್ದರು. ಆದರೆ ಆಪರೇಷನ್ ಮಾಡಿದಾಗ ಮೆದುಳಿನಲ್ಲಿ ಅಪರೂಪದ ವೈಟ್ ಫಂಗಸ್ ಬೆಳೆದಿರುವುದು ತಿಳಿದು ಬಂದಿದೆ.
ಹೈದ್ರಾಬಾದ್ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್ ರಂಗಾನಂದಂ ಮಾತನಾಡಿ, ರೋಗಿಯ ಮೆದುಳಿನಲ್ಲಿ ಇನ್ಫೆಕ್ಷನ್ ಕಂಡು ಬಂದಿದೆ. ಇದೊಂದು ಅಪರೂಪದ ಪ್ರಕರಣವಾಗಿದೆ. ಸಾಮಾನ್ಯವಾಗಿ ಕೊರೊನಾದಿಂದ ಗುಣಮುಖರಾದ ಮಧುಮೇಹಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಂಡು ಬರುತ್ತದೆ. ಆದರೆ ವೈಟ್ ಫಂಗಸ್ಗೆ ತುತ್ತಾಗಿರುವ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇಲ್ಲ. ವೈಟ್ ಫಂಗಸ್ ಮಧುಮೇಹಿಗಳಲ್ಲದವರಿಗೂ ಬರುತ್ತದೆ ಎಂಬುವುದು ಅಚ್ಚರಿ ತರಿಸಿದೆ. ಇನ್ನು ಬ್ಲ್ಯಾಕ್ ಫಂಗಸ್ನಂತೆ ಇದು ಮೂಗಿನಿಂದ ಮೆದುಳಿಗೆ ಹಬ್ಬಿಲ್ಲ, ಮೆದುಳಿನಲ್ಲೇ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
MRI ಸ್ಕ್ಯಾನ್ನಲ್ಲಿ ಸಂಶಯಾಸ್ಪದ ವಸ್ತು ಮೆದುಳಿನಲ್ಲಿ ಕಂಡಿತ್ತು. ಆಪರೇಷನ್ನಿಂದ ವೈಟ್ ಫಂಗಸ್ ಪತ್ತೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ವೈಟ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವೈದ್ಯಕೀಯ ಸಂಶೋಧನೆ ನಡೆಯಬೇಕು ಎಂದು ಡಾ. ರಂಗಾನಂದಂ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ