ಕೂಲಿಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ರಾಮನಗರ ಜಿಲ್ಲಾಡಳಿತ

ರಾಮನಗರ - ಚನ್ನಪಟ್ಟಣದಲ್ಲಿ ಲಾಕ್‌ಡೌನ್‌ಗೆ ಜನ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕೆಂಬ ಕೂಗು ಕೇಳಿಬಂದಿದೆ.

ರಾಮನಗರದಲ್ಲಿರುವ ವಲಸಿಗ ಕೂಲಿಕಾರ್ಮಿಕರು

ರಾಮನಗರದಲ್ಲಿರುವ ವಲಸಿಗ ಕೂಲಿಕಾರ್ಮಿಕರು

 • Share this:
  ರಾಮನಗರ(ಏ. 09): ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಮನಗರ-ಚನ್ನಪಟ್ಟಣ ನಗರದಲ್ಲಿ ವಾಸ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರು, ನಿರ್ಗತಿಕರಿಗೆ ಮಾಸ್ಕ್‌ಗಳು ಹಾಗೂ ಸ್ಯಾನಿಟೈಜರ್‌ಗಳನ್ನ ವಿತರಣೆ ಮಾಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದರು. ಜಿಲ್ಲಾಡಳಿತ ಸಂಬಂಧಪಟ್ಟ ತಾಲೂಕು ಆಡಳಿತದ ಮೂಲಕ ಈ ಅಗತ್ಯ ಸುರಕ್ಷತಾ ಪರಿಕರಗಳನ್ನ ನೀಡಬೇಕೆಂದು ಮಾರ್ಚ್ 28ರಂದೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರು ಸೂಚನೆ ನೀಡಿದ್ದರು.

  ಇಲ್ಲಿಯವರೆಗೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ಮಾಡಿದೆ. ರಾಮನಗರ - ಚನ್ನಪಟ್ಟಣ ನಗರ ಭಾಗದಲ್ಲಿ ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರು ವಲಸೆ ಬಂದಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯವನ್ನ ಒದಗಿಸಬೇಕೆಂದು ಸ್ವತ: ಆರೋಗ್ಯ ಸಚಿವರೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಸಚಿವರ ಆದೇಶಕ್ಕೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲ. ಇದರಿಂದಾಗಿ ಎರಡೂ ನಗರದ ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿಕಾರ್ಮಿಕರು ಸಣ್ಣ ಜೋಪಡಿಗಳಲ್ಲಿ ವಾಸಮಾಡ್ತಿದ್ದಾರೆ. ಅವರು ಇರುವ ಜಾಗದಲ್ಲಿ ಯಾವುದೇ ಸ್ವಚ್ಛತೆಯಿಲ್ಲ. ಇದು ಮುಂದಿನ ದಿನಗಳಲ್ಲಿ ವೈರಸ್ ಹರಡಲು ಕಾರಣವಾಗಬಹುದು ಎಂಬ ಭೀತಿ ಇದೆ.

  ಇದನ್ನೂ ಓದಿ: ಹಂತ ಹಂತವಾಗಿ ಲಾಕ್ ಡೌನ್ ಹೀಗೆ ಸಡಿಲಿಸಿ; ತಜ್ಞರ ಸಮಿತಿ ನೀಡಿದ ಸಲಹೆಗಳ ಮುಖ್ಯಾಂಶಗಳಿವು

  ಜೊತೆಗೆ ಅವರು ವಾಸಮಾಡ್ತಿರುವ ಸ್ಥಳದಲ್ಲಿ ಶೌಚಾಲಯವಿಲ್ಲದೇ ಬೀದಿಬದಿಗಳೇ ಶೌಚಾಲಯದ ತಾಣಗಳಾಗಿವೆ. ಇನ್ನು ದಾನಿಗಳು ಕೊಟ್ಟಿರುವ ಒಂದೇ ಮಾಸ್ಕ್​ಗಳಲ್ಲಿ ವಾರ ಕಳೆದಿದ್ದಾರೆ. ಇದರಿಂದಾಗಿ ಮಾಸ್ಕ್​ಗಳು ಸಂಪೂರ್ಣ ಕಪ್ಪಾಗಿ ಗಲೀಜಾಗಿವೆ. ಕೆಲವರಿಗೆ ಇನ್ನೂ ಮಾಸ್ಕ್​ಗಳೇ ಸಿಕ್ಕಿಲ್ಲ.

  ಚನ್ನಪಟ್ಟಣದಿಂದ ಈಗ ಸದ್ಯಕ್ಕೆ ಕೊರೋನಾ ವಿಚಾರವಾಗಿ 8 ಜನರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆದರೆ ರಾಮನಗರ - ಚನ್ನಪಟ್ಟಣದಲ್ಲಿ ಲಾಕ್‌ಡೌನ್‌ಗೆ ಜನ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕೆಂಬ ಕೂಗು ಕೇಳಿಬಂದಿದೆ.

  ವರದಿ: ಎ.ಟಿ. ವೆಂಕಟೇಶ್

  First published: