HOME » NEWS » Coronavirus-latest-news » RAJASTHAN COPS HALDI AT POLICE STATION BEACUSE SHES COULDNT GET LEAVE KVD

Corona Effect: ಮದುವೆ ದಿನದಂದು ಮಾತ್ರ ರಜೆ; ಠಾಣೆಯಲ್ಲೇ ಮಹಿಳಾ ಪೇದೆಗೆ ಅರಿಶಿಣ ಶಾಸ್ತ್ರ..!

ಸಹೋದ್ಯೋಗಿಗಳ ಸರ್​​ಪ್ರೈಸ್​ ಕಂಡು ಪೇದೆ ರೂಪಾ ಭಾವುಕರಾದರು. ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಎಲ್ಲರಿಗೂ ಧನ್ಯವಾದ ತಿಳಿಸಿದರು.

Kavya V
Updated:April 24, 2021, 3:40 PM IST
Corona Effect: ಮದುವೆ ದಿನದಂದು ಮಾತ್ರ ರಜೆ; ಠಾಣೆಯಲ್ಲೇ ಮಹಿಳಾ ಪೇದೆಗೆ ಅರಿಶಿಣ ಶಾಸ್ತ್ರ..!
ಠಾಣೆಯಲ್ಲೇ ಪೇದೆಗೆ ಅರಿಶಿಣ ಶಾಸ್ತ್ರ
  • Share this:
ಜೈಪುರ: ಕೊರೋನಾ 2ನೇ ಅಲೆ ಇಡೀ ದೇಶವನ್ನೇ ರಣರಂಗವನ್ನಾಗಿಸಿದೆ. ಹೆಮ್ಮಾರಿ ಸೋಂಕಿನಿಂದ ಭಾರತೀಯರನ್ನು ರಕ್ಷಿಸಲು ವೈದ್ಯರು-ನರ್ಸ್​ಗಳು, ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ 2ನೇ ಅಲೆಯಿಂದ ಇಡೀ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊರೋನಾ ವಾರಿಯರ್ಸ್​ಗೆ ಬಿಡುವಿಲ್ಲದ ಕೆಲಸ. ಜನರ ಜೀವ ಉಳಿಸಲು ವೈದ್ಯಕೀಯ ವಲಯ ದುಡಿಯುತ್ತಿದ್ದರೆ, ಜನರನ್ನು ರಕ್ಷಿಸಲು ಪೊಲೀಸರು ಜೀವವನ್ನು ಲೆಕ್ಕಿಸದೇ ಕರ್ತವ್ಯಕ್ಕೆ ನಿರ್ವಹಿಸುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಗಾಗಿ ಪೊಲೀಸರಿಗೆ ರಜೆಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ಮದುವೆಗೆ ರಜೆ ಸಿಗದ ಮಹಿಳಾ ಪೇದೆಯೊಬ್ಬರಿಗೆ ಸಹೋದ್ಯೋಗಿಗಳು ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಮಾಡಿದ್ದಾರೆ.

ರಾಜಸ್ಥಾನದ ದುಂಗರಪುರ ಪೊಲೀಸ್​ ಠಾಣೆಯಲ್ಲಿ ಇಂಥಹದೊಂದು ಅಪರೂಪದ ಘಟನೆ ನಡೆದಿದೆ. ದುಂಗರಪುರ ಠಾಣೆಯ ಪೇದೆ ರೂಪಾ ಎಂಬುವರಿಗೆ ಕಳೆದ ವರ್ಷವೇ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದ ಮದುವೆಯನ್ನು ಈ ವರ್ಷಕ್ಕೆ ಮುಂದೂಡಿ ಏ.30ರಂದು ನಿಗದಿಪಡಿಸಲಾಗಿತ್ತು. ಈ ವರ್ಷವೂ ಮದುವೆಯ ತಿಂಗಳು ಬರುತ್ತಿದಂತೆ ಮತ್ತೆ ಕೊರೋನಾ ಅಬ್ಬರಿಸಿದೆ. ಇದರಿಂದ ರಾಜಸ್ಥಾನ ಪೊಲೀಸ್​ ಇಲಾಖೆ ರಜೆಗಳನ್ನು ರದ್ದು ಮಾಡಿದೆ. ಪೇದೆ ರೂಪಾಗೆ ನೀಡಿದ್ದ ರಜೆಗಳು ರದ್ದಾಗಿ, ಕೇವಲ ಮದುವೆಯ ದಿನವಷ್ಟೇ ರಜೆಯನ್ನು ಮಂಜೂರು ಮಾಡಿದ್ದಾರೆ. ಹೀಗಾಗಿ ರೂಪಾ ತನ್ನೂರಿಗೆ ಹೋಗಿ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.

ಪೇದೆ ರೂಪಾಳ ಪರಿಸ್ಥಿತಿ ಕಂಡು ಮರುಗಿದ ಸಹೋದ್ಯೋಗಿಗಳು ಆಕೆಗೆ ಸರ್​​​ಪ್ರೈಸ್​ ಕೊಟ್ಟಿದ್ದಾರೆ. ರೂಪಾ ಕೆಲಸಕ್ಕೆ ಬಂದಾಗ ಠಾಣೆಯಲ್ಲೇ ಆಕೆಗಾಗಿ ಅರಿಶಿಣ ಶಾಸ್ತ್ರ (ಹಳದಿ ರಸಂ) ಮಾಡಿದ್ದಾರೆ. ಠಾಣೆ ಎದುರು ಮದುಮಗಳನ್ನು ಕೂರಿಸಿ ಎಲ್ಲರೂ ಅರಿಶಿಣ ಹಚ್ಚಿ, ರಾಜಸ್ಥಾನದ ಸಾಂಪ್ರದಾಯಿಕ ಹಾಡನ್ನು ಹಾಡಿದ್ದಾರೆ. ಕೆಲಸದ ಸ್ಥಳದಲ್ಲೇ ಕುಟುಂಬಸ್ಥರಂತೆ ಎಲ್ಲಾ ಶಾಸ್ತ್ರಗಳನ್ನು ಮಾಡಿದ್ದಾರೆ. ಸಹೋದ್ಯೋಗಿಗಳ ಸರ್​​ಪ್ರೈಸ್​ ಕಂಡು ಪೇದೆ ರೂಪಾ ಭಾವುಕರಾದರು. ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: ಕುಟುಂಬಸ್ಥರನ್ನು ಕಳೆದುಕೊಂಡ ‘ಗಟ್ಟಿಮೇಳ’ ನಟ; ಕೊರೋನಾದ ಕರಾಳತೆ ಬಿಚ್ಚಿಟ್ಟ ಪವನ್​​ಕುಮಾರ್​!

ಈ ಬಗ್ಗೆ ಠಾಣೆಯ ಇನ್ಸ್​​ಪೆಕ್ಟರ್​ ದಿಲೀಪ್​ ದಾನ್​ ಮಾತಾನಾಡಿ, ಕೊರೋನಾ ಪರಿಸ್ಥಿತಿಯಿಂದ ಪೊಲೀಸರಿಗೆ ರಜೆಗಳು ಸಿಗುತ್ತಿಲ್ಲ. ಆದರೆ ಪೊಲೀಸರಿಗೂ ವೈಯಕ್ತಿಕ ಬದುಕಿದೆ. ಮದುವೆ ಶಾಸ್ತ್ರಗಳಿಂದ ವಂಚಿತಳಾಗಿ ರೂಪಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ನಾವು ಆಕೆಗೆ ಠಾಣೆಯಲ್ಲೇ ಅರಿಶಿಣ ಶಾಸ್ತ್ರ ನೆರವೇರಿಸಿದ್ದೇವೆ. ಯಾವುದೇ ಶಾಸ್ತ್ರ, ಮುಹೂರ್ತವನ್ನು ರೂಪಾ ಮಿಸ್​ ಮಾಡಿಕೊಳ್ಳಬಾರದು. ಮದುವೆಯ ದಿನದಂದು ರಜೆ ನೀಡಿದ್ದು, ರೂಪಾ ಊರಿಗೆ ಹೋಗುತ್ತಾರೆ ಎಂದು ತಿಳಿಸಿದ್ದಾರೆ.

ಸಹೋದ್ಯೋಗಿಗಳ ತೋರಿದ ಔದಾರ್ಯಕ್ಕೆ ಪೇದೆ ರೂಪಾ ಕೃತಜ್ಞತೆಗಳನ್ನು ಸಲ್ಲಿಸಿ ಮದುವೆಗಾಗಿ ತಮ್ಮ ಊರಿಗೆ ಹೊರಟ್ಟಿದ್ದಾರೆ. ಇಷ್ಟೆ ಅಲ್ಲದೇ ರೂಪಾ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಮೂಲಕವೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮದುವೆ ಇನ್ವಿಟೇಷನ್​​ನಲ್ಲಿ ಸಾಮಾಜಿಕ ಅಂತರ, ಮಾಸ್ಕ್​ ಧಾರಣೆಯ ಮಹತ್ವದ ಬಗ್ಗೆ ಮುದ್ರಿಸಿ ಮಾದರಿಯಾಗಿದ್ದಾರೆ.
Published by: Kavya V
First published: April 24, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories