ಮಾನವೀಯತೆ ಎಲ್ಲಕ್ಕಿಂತ ಮೇಲು: ರಂಜಾನ್ ಉಪವಾಸ ಮುರಿದು ಸೋಂಕಿತರಿಗೆ ಪ್ಲಾಸ್ಮಾ ನೀಡಿದ ವ್ಯಕ್ತಿ

ದೇವರಿಗಾಗಿ ಮಾಡುವ ಉಪವಾಸ ಶ್ರೇಷ್ಠ. ಆದರೆ ಮತ್ತೊಬ್ಬರ ಪ್ರಾಣ ಉಳಿಸಲು ಉಪವಾಸ ವೃತವನ್ನು ಮುರಿದರೆ ತಪ್ಪಿಲ್ಲ ಎಂದು ಹೇಳುವ ಮೂಲಕ ಮನ್ಸೂರಿ ಆದರ್ಶ ಮೆರೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೈಪುರ್ (ಏ.16): ಹೆಮ್ಮಾರಿ ಕೊರೋನಾ ಸೋಂಕು ದೇಶ-ಭಾಷೆಗಳಾಚೆಗೆ ಎಲ್ಲರನ್ನೂ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಅದೆಷ್ಟೋ ಕೋವಿಡ್​ ಸೋಂಕಿತರು ಸಾವಿನ ಮನೆ ಸೇರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್ ಕೊರತೆ, ಔಷಧಿ-ಲಸಿಕೆ ಸಿಗುತ್ತಿಲ್ಲ ಎಂಬ ಸುದ್ದಿಗಳನ್ನು ನಿತ್ಯ ನೋಡುತ್ತಿದ್ದೇವೆ. ಇಂಥ ಸಂಕಷ್ಟದ ಕಾಲದಲ್ಲಿ ಒಬ್ಬೊರಿಗೊಬ್ಬರು ನೆರವಾಗಲೇಬೇಕು ಎಂಬುವುದನ್ನು ರಾಜಸ್ಥಾನದ ವ್ಯಕ್ತಿಯೊಬ್ಬರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ತಮ್ಮ ರಂಜಾನ್ ಉಪವಾಸವನ್ನು ಮುರಿದು ಇಬ್ಬರು ಸೋಂಕಿತ ಮಹಿಳೆಯರಿಗೆ ಪ್ಲಾಸ್ಮಾ ನೀಡುವ ಮೂಲಕ ನೆರವಾಗಿದ್ದಾರೆ.

  ಜೈಪುರದ ಆಸ್ಪತ್ರೆಯೊಂದರಲ್ಲಿ ಇಬ್ಬರು ಸೋಂಕಿತ ಮಹಿಳೆಯರ ಆರೋಗ್ಯ ಬಿಗಡಾಯಿಸಿದ್ದರಿಂದ ತಕ್ಷಣಕ್ಕೆ ಪ್ಲಾಸ್ಮಾ ಬೇಕಾಗಿತ್ತು. ಒಂದೇ ರಕ್ತದ ಗುಂಪಿನ, ಕೊರೋನಾದಿಂದ ಗುಣಮುಖರಾದ, ಈವರೆಗೆ ಯಾವುದೇ ಕೊರೋನಾ ಲಸಿಕೆಯನ್ನು ಪಡೆಯದವರು ಮಾತ್ರ ಪ್ಲಾಸ್ಮ್ ನೀಡಬಹುದು. ಹೀಗಾಗಿ ಸೂಕ್ತ ಪ್ಲಾಸ್ಮಾ ದಾನಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಖೀಲ್ ಮನ್ಸೂರಿ ಎಂಬುವರಿಗೆ ಗೊತ್ತಾಗಿದೆ. ಪ್ಲಾಸ್ಮಾ ನೀಡಲು ಅರ್ಹರಾಗಿದ್ದ ಮನ್ಸೂರಿಯವರು ಪವಿತ್ರ ರಂಜಾನ್ ಉಪವಾಸ ಕೈಗೊಂಡಿದ್ದರು. ಪ್ಲಾಸ್ಮಾ ನೀಡಬೇಕಾದರೆ ಉಪವಾಸವನ್ನು ಕೈ ಬಿಡಬೇಕಾಗಿತ್ತು.

  ಇದನ್ನು ಓದಿ: ಅಂದು ಸುಶಾಂತ್.. ಇಂದು ಕಾರ್ತಿಕ್ ಆರ್ಯನ್.. ಕರಣ್ ಜೋಹರ್ ಸಿನಿಮಾಗಳಿಂದ ಕಿಕ್ಔಟ್ ಯಾಕೆ?

  ಬೇರೆ ಯೋಚನೆಯನ್ನೇ ಮಾಡದೇ ಮನ್ಸೂರಿ ಕೂಡಲೇ ಆಸ್ಪತ್ರೆಗೆ ಬಂದು ಸೋಂಕಿತರ ಮಹಿಳೆಯರಿಗೆ ಪ್ಲಾಸ್ಮಾ ನೀಡಿದ್ದಾರೆ. ಮೊದಲು ಮನ್ಸೂರಿ ಪ್ಲಾಸ್ಮಾ ನೀಡಲು ಶಕ್ತರಾಗಿದ್ದಾರೆಯೇ ಎಂದು ವೈದ್ಯರು ಪರೀಕ್ಷಿಸಿದ್ದಾರೆ. ಪ್ಲಾಸ್ಮಾ ನೀಡಲು ಅರ್ಹರು ಎಂದು ತಿಳಿದೊಡನೆ ಪ್ಲಾಸ್ಮಾ ಪಡೆಯಲು ಮುಂದಾದರು. ಉಪವಾಸವಿದ್ದ ಮನ್ಸೂರಿಗೆ ಪ್ಲಾಸ್ಮಾ ದಾನಕ್ಕೂ ಮುನ್ನ ಆಹಾರ ಸೇವಿಸಲು ವೈದ್ಯ ಹೇಳಿದ್ದಾರೆ. ರಂಜಾನ್ ಉಪವಾಸ ಮುರಿದ ಮನ್ಸೂರಿ ಉಪಹಾರ ಸೇವಿಸಿ ಪ್ಲಾಸ್ಮಾ ನೀಡಿದ್ದಾರೆ. ದೇವರಿಗಾಗಿ ಮಾಡುವ ಉಪವಾಸ ಶ್ರೇಷ್ಠ. ಆದರೆ ಮತ್ತೊಬ್ಬರ ಪ್ರಾಣ ಉಳಿಸಲು ಉಪವಾಸ ವೃತವನ್ನು ಮುರಿದರೆ ತಪ್ಪಿಲ್ಲ ಎಂದು ಹೇಳುವ ಮೂಲಕ ಮನ್ಸೂರಿ ಆದರ್ಶ ಮೆರೆದಿದ್ದಾರೆ.

  ಇದನ್ನು ಓದಿ: ಪವರ್​ ಸ್ಟಾರ್​ ಪವನ್​ ಕಲ್ಯಾಣ್​ಗೆ ಕೋವಿಡ್​; ಆಸ್ಪತ್ರೆಗೆ ದಾಖಲಾದ ಜನಸೇನಾ ನಾಯಕ

  ಮನ್ಸೂರಿ ಅವರಿಂದ ಪಡೆದ ಪ್ಲಾಸ್ಮಾವನ್ನು 36 ವರ್ಷದ ನಿರ್ಮಲಾ ಎಂಬುವರಿಗೆ ಹಾಗೂ 30 ವರ್ಷದ ಮತ್ತೊಬ್ಬ ಮಹಿಳೆಗೆ ನೀಡಲಾಗಿದೆ. ಅಲ್ಲಾ ಇಬ್ಬರು ರೋಗಿಗಳನ್ನು ಅಪಾಯದಿಂದ ಕಾಪಾಡಿ, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮನ್ಸೂರಿ ಹೇಳಿದ್ದಾರೆ. ಮನ್ಸೂರಿ ಹೀಗೆ ರೋಗಿಗಳ ಸಹಾಯಕ್ಕೆ ಧಾವಿಸಿದ್ದು ಇದೇ ಮೊದಲಲ್ಲ. ಹೀಗಾಗಲೇ 3 ಬಾರಿ ಪ್ಲಾಸ್ಮಾವನ್ನು ನೀಡಿದ್ದಾರೆ. ಈವರೆಗೆ 17ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.

  ನಿರಂತರವಾಗಿ ರಕ್ತದಾನ ಮಾಡುತ್ತಿದ್ದ ಮನ್ಸೂರಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಕೆಟ್ಟ ಪರಿಸ್ಥಿತಿಯಲ್ಲೂ ಒಂದು ಒಳ್ಳೆಯ ವಿಷಯವನ್ನು ಕಾಣು ಎಂಬಂತೆ ಕೊರೋನಾದಿಂದ ಮನ್ಸೂರಿ ಒಂದೊಳ್ಳೆಯ ದಾರಿಯನ್ನು ಕಂಡು ಕೊಂಡಿದ್ದಾರೆ. ಕೊರೋನಾ ಬರುವ ಮುನ್ನ ರಕ್ತದಾನಿಯಾಗಿದ್ದ ಮನ್ಸೂರಿ ಈಗ ಪ್ಲಾಸ್ಮಾ ದಾನಿಯಾಗಿ ಹಲವರಿಗೆ ನೆರವಾಗುತ್ತಿದ್ದಾರೆ.

  (ವರದಿ: ಕಾವ್ಯಾ ವಿ)
  Published by:Seema R
  First published: