Siddaramaih: ಕೊರೋನಾದಿಂದ ಮೃತಪಟ್ಟವರ ಪರಿಹಾರವನ್ನು 5 ಲಕ್ಷಕ್ಕೆ ಏರಿಸಿ; ಸಿದ್ದರಾಮಯ್ಯ ಒತ್ತಾಯ

ಕೊರೋನಾ ಸೋಂಕನ್ನು ಈಗಾಗಲೇ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಿಪತ್ತು ಪರಿಹಾರ‌ದ ನಿಯಮಗಳಡಿ ಮೃತ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ - ಬಿಎಸ್​ವೈ

ಸಿದ್ದರಾಮಯ್ಯ - ಬಿಎಸ್​ವೈ

  • Share this:
    ಬೆಂಗಳೂರು (ಜೂನ್ 14); ಕೊರೋನಾ ವಾರಿಯರ್ಸ್​​ ಹೊರತಾಗಿಯೂ ಸೋಂಕಿನಿಂದ ಮೃತಪಟ್ಟ ಬಿಪಿಎಲ್​ ಕಾರ್ಡ್​ದಾರರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂದು ಘೋಷಿಸಿದ್ದರು.  ಹಲವು ಕುಟುಂಬಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಒಂದು ಕುಟುಂಬದಲ್ಲಿ ಎಷ್ಟೇ ಮಂದಿ ಕೊರೊನಾದಿಂದ ಸತ್ತಿದ್ದರು ಒಬ್ಬರ ಸಾವಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂದು ಬಿಎಸ್​ವೈ ಹೇಳಿದ್ದರು. ಸಂಕಷ್ಟದ ಕಾಲದಲ್ಲಿ ನೊಂದವರ ಪರ ನಿಂತ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದರು. ಇದೇ ವೇಳೆ ಟ್ವೀಟ್​ ಮೂಲಕ ಸರ್ಕಾರ ಕಿವಿಮಾತು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಪರಿಹಾರದ ಹಣವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.



    ಟ್ವೀಟ್ ಮೂಲಕ ಮನವಿ ಮಾಡಿರುವ ಸಿದ್ದರಾಮಯ್ಯ, "ಕೊರೋನಾ ಸೋಂಕನ್ನು ಈಗಾಗಲೇ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಿಪತ್ತು ಪರಿಹಾರ‌ದ ನಿಯಮಗಳಡಿ ಮೃತ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯ ಇದೆ.‌ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಈ ಅವಕಾಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಳಸಿಕೊಳ್ಳಬೇಕು.



    ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಬಿಪಿಎಲ್ ಕುಟುಂಬಕ್ಕೆ ಘೋಷಿಸಿರುವ ಒಂದು ಲಕ್ಷ ರೂಪಾಯಿ ಪರಿಹಾರವನ್ನು ವಿಪತ್ತು ನಿರ್ವಹಣಾ ನಿಯಮಕ್ಕೊಳಪಡಿಸಿ ಐದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತೇನೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

    ರಾಜ್ಯದಲ್ಲಿ ಈವರೆಗೆ ಕೊರೋನಾದಿಂದ 32,913 ಮಂದಿ (ಜೂ.13ರವರೆಗೆ) ಮೃತಪಟ್ಟಿದ್ದಾರೆ. ಇದರಲ್ಲಿ BPL ಕಾರ್ಡ್​​ ಹೊಂದಿರುವ ಕುಟುಂಬದಲ್ಲಿ ಒಬ್ಬರ ಸಾವಿಗೆ ಪರಿಹಾರ ನೀಡಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ 250 ರಿಂದ 300 ಕೋಟಿಗಳಷ್ಟು ಹಣವನ್ನು ಮೀಸಲಿಟ್ಟಿದೆ. ಈ ಹಣ ಸುಮಾರು 25 ಸಾವಿರ ಬಿಪಿಎಲ್ ಕುಟುಂಬ ವರ್ಗದವರಿಗೆ ಪರಿಹಾರ ಸಿಗಲಿದೆ ಎಂದು ಅಂದಾಜಿಸಲಾಗಿದೆ.

    ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಇವತ್ತು ಹಣಕಾಸಿನ‌ ಅಧಿಕಾರಿಗಳ ಜೊತೆಯೂ ಚರ್ಚೆ ಮಾಡಿದ್ದೇನೆ. ಈಗ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಕೊಡ್ತಾ ಇದ್ದೇವೆ ಎಂದರೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ ಎಂಬುದು ಗೊತ್ತಾಗುತ್ತೆ. ಕೊರೊನಾದಿಂದ ಮೃತಪಟ್ಟವರ ಪರಿಹಾರ ಯೋಜನೆಗೆ 250-300 ಕೋಟಿ ಹಣ ವೆಚ್ಚವಾಗುತ್ತೆ.

    ಇದನ್ನೂ ಓದಿ: ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟ ಒಬ್ಬರಿಗೆ ₹1 ಲಕ್ಷ ಪರಿಹಾರ : ಸಿಎಂ ಯಡಿಯೂರಪ್ಪ ಘೋಷಣೆ

    ತಂದೆ-ತಾಯಿ ಇಬ್ಬರು ಕೊರೋನಾಗೆ ಬಲಿಯಾಗಿದ್ದರೆ ಅಂತವರ ಮಕ್ಕಳಿಗೂ ಈ ಪರಿಹಾರ ಮೊತ್ತ ಸಿಗಲಿದೆ. ಪ್ರಧಾನಿ ಮೋದಿ ಘೋಷಿಸಿರುವಂತೆ 10 ಲಕ್ಷದ ಪರಿಹಾರದ ಜೊತೆ ರಾಜ್ಯ ಸರ್ಕಾರದ 1 ಲಕ್ಷವೂ ಸೇರಲಿದೆ. ಕೊರೋನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳಿಗೆ ತಲಾ 10 ಲಕ್ಷ ಪರಿಹಾರವನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

    ಇದನ್ನೂ ಓದಿ: Mob Lynching| ರಾಜಸ್ಥಾನ; ಹಸುವಿನ ಕಳ್ಳಸಾಗಾಣೆ ಅನುಮಾನ, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ!

    ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 70,421 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 2,95,10,410ಕ್ಕೆ ಏರಿಕೆಯಾಗಿದೆ. ಒಂದೇ ದಿನ ಸೋಂಕಿನಿಂದ 3, 921 ಜನ ಮೃತಪಟ್ಟಿದ್ದಾರೆ. ಈವರೆಗೆ ಕೊರೊನಾದಿಂದ ಸತ್ತವರು 3,74,305ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ ಸೋಂಕಿನಿಂದ 1,19,501 ಜನ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 2,81,62,947ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಸದ್ಯ 9,73,158 ಆಕ್ಟೀವ್​ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:MAshok Kumar
    First published: