ದೆಹಲಿಯಿಂದ ಕರ್ನಾಟಕಕ್ಕೆ ವಿಶೇಷ ರೈಲು ಕಳುಹಿಸಲು ರೈಲ್ವೆ ಇಲಾಖೆ ಒಪ್ಪಿಗೆ

ಮೇ 12ನೇ ತಾರೀಖು ಯುಎಇನಿಂದ ಮಂಗಳೂರಿಗೆ ವಿಮಾನ ಸಂಚರಿಸಲಿದೆ.‌ ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದೆ. ಅದರ ವೇಳಾಪಟ್ಟಿಯನ್ನೂ ವಿದೇಶಾಂಗ ಇಲಾಖೆ ಶೀಘ್ರವೇ ಪ್ರಕಟಿಸಲಿದೆ ಸದಾನಂದಗೌಡ ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ದೇಶದಲ್ಲಿ ಈಗ ಕೊರೋನಾ ಸೋಂಕು ಹರಡುವಿಕೆ ತಡೆಯುವುದರ ಜೊತೆಗೆ ಅನ್ನ ಅರಸಿ ದೇಶದ ಮೂಲೆ ಮೂಲೆಗಳಿಗೆ ಹೋಗಿದ್ದ ವಲಸಿಗರನ್ನು ಅದರಲ್ಲೂ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸುವುದೇ ದೊಡ್ಡ ಸವಾಲಾಗಿದೆ. ಇದೇ ರೀತಿ ಲಾಕ್ಡೌನಿಂದಾಗಿ ಉತ್ತರ ಭಾರತದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ಕಳುಹಿಸಲು ವಿಶೇಷ ರೈಲು ಬಿಡುಗಡೆ ಮಾಡುವುದಕ್ಕೆ ಕಡೆಗೂ ರೈಲ್ವೆ ಇಲಾಖೆ ಅನುಮತಿ ನೀಡಿದೆ.

ಉತ್ತರ ಭಾರತದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯಕ್ಕೆ ಕಳುಹಿಸಲು ವಿಶೇಷ ರೈಲು ಬಿಡುಗಡೆ ಮಾಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ‌ ಡಿ.ವಿ.‌ ಸದಾನಂದಗೌಡ ಅವರು ರೈಲ್ವೆ ಸಚಿವ ಪಿಯುಶ್‌ ಗೋಯಲ್‌ ಅವರ ಜೊತೆ ನಡೆಸಿದ್ದ ಮಾತುಕತೆ ಯಶಸ್ವಿಯಾಗಿದೆ. ಒಂದೆರಡು ದಿನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚರಿಸಲು ರೈಲ್ವೆ ಇಲಾಖೆ ಅನುಮತಿ ನೀಡಿದೆ.

ಈ ವಿಷಯವನ್ನು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುವ ಕೇಂದ್ರ ಸಚಿವ ಡಿ.ವಿ.‌ ಸದಾನಂದಗೌಡ ಅವರು, ದೆಹಲಿ ಮಾತ್ರವಲ್ಲದೆ ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಭಾರತದ ಮತ್ತಿತರ ಸ್ಥಳಗಳಿಂದಲೂ ರಾಜ್ಯಕ್ಕೆ ವಾಪಸ್‌ ಆಗಲು ಕನ್ನಡಿಗರು ಕಾತರರಾಗಿದ್ದಾರೆ. ಆ ರಾಜ್ಯಗಳ ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿರುವ ಕನ್ನಡಿಗರನ್ನು ಕೂಡಲೇ ದೆಹಲಿಗೆ ಕರೆಸಿಕೊಂಡು ನಂತರ ದೆಹಲಿಯಿಂದ ಬೆಂಗಳೂರಿಗೆ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡುವಂತೆ ದೆಹಲಿಯಲ್ಲಿರುವ ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದಲ್ಲದೆ ವಿವಿಧ ದೇಶಗಳಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ವಿಮಾನಗಳ ವ್ಯವಸ್ಥೆ ಮಾಡುವಂತೆ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಸಮಾಲೋಚನೆ ನಡೆಸಿದ್ದೇನೆ. ವಿದೇಶಾಂಗ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ‌. ಮೇ 12ನೇ ತಾರೀಖು ಯುಎಇನಿಂದ ಮಂಗಳೂರಿಗೆ ವಿಮಾನ ಸಂಚರಿಸಲಿದೆ.‌ ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದೆ. ಅದರ ವೇಳಾಪಟ್ಟಿಯನ್ನೂ ವಿದೇಶಾಂಗ ಇಲಾಖೆ ಶೀಘ್ರವೇ ಪ್ರಕಟಿಸಲಿದೆ ಸದಾನಂದಗೌಡ ಅವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ವಿಮಾನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೊದಲ ಪಟ್ಟಿಯಲ್ಲಿ ದುಬೈನಿಂದ ಕರ್ನಾಟಕಕ್ಕೆ ಯಾವುದೇ ವಿಮಾನ ನಿಗದಿಯಾಗಿರಲಿಲ್ಲ. ಈ ವಿಚಾರವನ್ನು ಕೂಡ ವಿದೇಶಾಂಗ ಸಚಿವರ ಜೊತೆ ಪ್ರಸ್ತಾಪಿಸಿದ್ದೇನೆ ಎಂದು ಸದಾನಂದಗೌಡ ತಿಳಿಸಿದ್ದಾರೆ. ಈ ನಡುವೆ ವಿಶೇಷ ವಿಮಾನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಅರಬ್ ದೇಶಗಳಲ್ಲಿರುವ ಕನ್ನಡಿಗರು ಸಚಿವ ಸದಾನಂದಗೌಡರಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನು ಓದಿ: ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಕರೆದೊಯ್ಯುವ ವಿಷಯದಲ್ಲಿ ಸೋನಿಯಾ ಗಾಂಧಿ ರಾಜಕೀಯ ಮಾಡದಿರಲಿ; ಎಐಆರ್​ಎಂಎಫ್ ಮನವಿ

ದೆಹಲಿ ಮತ್ತಿತರ ಸ್ಥಳಗಳಿಂದ ತಮ್ಮ ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಕರ್ನಾಟಕಕ್ಕೆ ಮರಳಲು ಇಚ್ಛಿಸಿದ ಅನೇಕ ದೆಹಲಿವಾಸಿ ಕನ್ನಡಿಗರು ಹಾಗೂ ಯಾತ್ರಾರ್ಥಿಳಿಗೂ ಅಗತ್ಯ ಪರವಾನಿಗೆಯನ್ನು ಕೊಡಿಸಲಾಗುತ್ತಿದೆ ಎಂದು ಕೂಡ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
First published: