Corona Vaccine: ದೇಶದಲ್ಲಿ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡಿ; ರಾಹುಲ್ ಗಾಂಧಿ ಒತ್ತಾಯ

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬಿಜೆಪಿ-ನೇತೃತ್ವದ ವ್ಯವಸ್ಥೆಯ ಬಲಿಪಶುಗಳನ್ನಾಗಿ ಮಾಡಬೇಡಿ. ಜೀವ ಉಳಿಸುವ ಲಸಿಕೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

  • Share this:
    ನವ ದೆಹಲಿ (ಏಪ್ರಿಲ್ 26); ದೇಶದಲ್ಲಿ ಕೊರೋನಾ ಎರಡನೇ ಅಲೆ ಮಿತಿ ಮೀರುತ್ತಿದೆ. ಇದೇ ಕಾರಣಕ್ಕೆ ಕೊರೋನಾ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಹೇಳಿಕೆಯಲ್ಲಿ ಮೇ.01 ರಿಂದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕಡ್ಡಾಯ ಎಂದು ತಿಳಿಸಿತ್ತು. ಆದರೆ, ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡಲು ಸಾಧ್ಯ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ನಡುವೆ ಇಂದು ಕೇಂದ್ರ ಸರ್ಕಾರ ಮೇ 1 ರಿಂದ ಕೋವಿಡ್ ಲಸಿಕೆಗಳಿಗೆ ಮೂರು ವಿಭಿನ್ನ ಬೆಲೆಗಳು ಇರುತ್ತವೆ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರ ಚರ್ಚೆಗಳನ್ನು ಬದಿಗಿಟ್ಟು ಮೊದಲು ರಾಜ್ಯಗಳಿಗೆ ಉಚಿತ ಲಸಿಕೆ ಒದಗಿಸಲಿ. ದೇಶದಲ್ಲಿ ಎಲ್ಲರೂ ಉಚಿತವಾಗಿ ಲಸಿಕೆ ಪಡೆಯುವಂತಾಗಲಿ" ಎಂದು ಆಗ್ರಹಿಸಿದ್ದಾರೆ.

    ಕೋವಿಡ್​ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿರುವ ರಾಹುಲ್ ಗಾಂಧಿ, "ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಬಿಜೆಪಿ-ನೇತೃತ್ವದ ವ್ಯವಸ್ಥೆಯ ಬಲಿಪಶುಗಳನ್ನಾಗಿ ಮಾಡಬೇಡಿ. ಜೀವ ಉಳಿಸುವ ಲಸಿಕೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡಬೇಕು ಮತ್ತು ಇದು ಇನ್ನು ಮುಂದೆ ಚರ್ಚೆಯ ಆಗಬಾರದು" ಎಂದು ಕಿವಿ ಮಾತು ಹೇಳಿದ್ದಾರೆ.

    ಈ ಕುರಿತು ಹಿಂದಿಯಲ್ಲಿ ತೀಕ್ಷ್ಣವಾದ ಟ್ವೀಟ್‌ ಮಾಡಿರುವ ಅವರು, "ಲಸಿಕೆ ವಿಚಾರ ಸಾಕಷ್ಟು ಚರ್ಚೆಯಾಗಿದೆ. ಇನ್ನು ಚರ್ಚೆ ಸಾಕು. ನಾಗರಿಕರು ಲಸಿಕೆಗಳನ್ನು ಉಚಿತವಾಗಿ ಪಡೆಯಬೇಕು. ಭಾರತವನ್ನು ಬಿಜೆಪಿ ನೇತೃತ್ವದ ವ್ಯವಸ್ಥೆಗೆ ಬಲಿಗೊಡಬೇಡಿ" ಎಂದಿದ್ದಾರೆ.

    ಕೇಂದ್ರವು ತನ್ನ ‘ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್ ವ್ಯಾಕ್ಸಿನೇಷನ್ ಸ್ಟಾಟರ್ಜಿ’ ಅಡಿಯಲ್ಲಿ, ಮೇ 1 ರಿಂದ ಲಸಿಕೆಗಳಿಗೆ ಮೂರು ವಿಭಿನ್ನ ಬೆಲೆಗಳು ಇರುತ್ತವೆ ಎಂದು ಘೋಷಿಸಿದ್ದು ಚರ್ಚೆಗೆ ಮತ್ತು ರಾಜ್ಯಗಳ ಆಕ್ಷೇಪಗಳಿಗೆ ಕಾರಣವಾಗಿದೆ.

    ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400. ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಎಂದು ದರ ನಿಗದಿ ಮಾಡಿದೆ. ಭಾರತ್ ಬಯೋಟೆಕ್ ಕೊವಾಕ್ಸಿನ್‌ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಎಂದು ನಿಗದಿ ಮಾಡಿದೆ. ಆದರೆ ಎರಡೂ ಕಂಪನಿಗಳು ಕೇಂದ್ರಕ್ಕೆ ಮಾತ್ರ ಒಂದು ಡೋಸ್‌ಗೆ ಕೇವಲ 150 ರೂ. ದರ ನಿಗದಿ ಮಾಡಿವೆ.

    ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ನಿನ್ನೆ ಫೇಸ್‌ಬುಕ್ ಪೋಸ್ಟ್‌ನಲ್ಲಿ, "ರಾಜ್ಯಗಳಿಗಿಂತ ಕೇಂದ್ರವು ಅಗ್ಗವಾಗಿ ಲಸಿಕೆ ಪಡೆಯುತ್ತಿದೆ ಎಂಬ ವಾದ ಸುಳ್ಳು" ಎಂದಿರುವುದು ಬಹುಪಾಲು ರಾಜ್ಯ ಸರ್ಕಾರಗಳಲ್ಲಿ ಆಕ್ರೋಶ ಮೂಡಿಸಿದೆ.

    ಇದನ್ನೂ ಓದಿ: ದೆಹಲಿ ಸೇರಿ 11 ರಾಜ್ಯಗಳಲ್ಲಿ ಕೊರೋನಾ ಲಸಿಕೆ ಉಚಿತ: ಕಡೆಗೂ ಕಣ್ಣುಬಿಟ್ಟ ಕರ್ನಾಟಕ ಸರ್ಕಾರ

    ಉಚಿತ ಲಸಿಕೆ ನೀಡಲು ಮುಂದಾದ 11 ರಾಜ್ಯಗಳು:

    ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಈ ನಡುವೆ ಮೇ 1ರಿಂದ ದೇಶದಲ್ಲಿ ಮೂರನೇ ಹಂತದ ಕೊರೋನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗಲಿದೆ. ಮೂರನೇ ಹಂತದಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಆದರೀಗ ಹೆಚ್ಚು ಚರ್ಚೆ ಆಗುತ್ತಿರುವುದು ಕೊರೋನಾ ಲಸಿಕೆಗಳನ್ನು ಉಚಿತವಾಗಿ ನೀಡುವ ಬಗ್ಗೆ.

    ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ರಾಜ್ಯಗಳು ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿವೆ. ಮೊದಲಿಗೆ ಕೇರಳ, ಛತ್ತೀಸ್‌ಗಡ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಒರಿಸ್ಸಾ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಉಚಿತ ಲಸಿಕೆ ನಿಡುವುದಾಗಿ ಘೋಷಿಸಿದ್ದವು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅಲ್ಲಿಗೆ ದೇಶಾದ್ಯಂತ 11 ರಾಜ್ಯಗಳು ಉಚಿತವಾಗಿ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದಂತಾಗಿದೆ.
    Published by:MAshok Kumar
    First published: