ಸಾಮಾಜಿಕ ಅಂತರ ಒಂದೇ ವೈರಾಣು ನಿಯಂತ್ರಣಕ್ಕೆ ಮದ್ದು: ಆರ್. ಅಶೋಕ್

ಬಹಳಷ್ಟು ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ಮುಚ್ಚುವ ಮೂಲಕ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಎಲ್ಲಾ ಖಾಸಗಿ ವೈದ್ಯರು ತಕ್ಷಣದಿಂದಲೇ ತಮ್ಮ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಸಚಿವರು ಹೇಳಿದ್ಧಾರೆ.

ದೇವನಹಳ್ಳಿಯಲ್ಲಿ ಆರ್. ಅಶೋಕ್

ದೇವನಹಳ್ಳಿಯಲ್ಲಿ ಆರ್. ಅಶೋಕ್

  • Share this:
ಬೆಂಗಳೂರು ಗ್ರಾಮಾಂತರ: ಮಾರಕವಾದ ವೈರಾಣು ಕೋವಿಡ್-19 ನೊಂದಿಗೆ ಜೀವನ ಸರಿದೂಗಿಸಿಕೊಂಡು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವ ಮೂಲಕ  ವೈರಾಣು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಆರ್. ಅಶೋಕ್, ಕೋವಿಡ್-19 ವೈರಾಣು ಹರಡುವಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ದೇಶ ಹಾಗೂ ರಾಜ್ಯಕ್ಕೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ, ಜನರಿಗೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅರಿತು ಸರ್ಕಾರ ‌ಭಾನುವಾರದ ಲಾಕ್ ಡೌನ್ ಹಾಗೂ ಕರ್ಫ್ಯೂ ಸಮಯ ಮುಂದುವರಿಕೆ ಕ್ರಮ ಹೊರತುಪಡಿಸಿ ಎಲ್ಲವನ್ನೂ ಸಡಿಲಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿ.ಪಿ. ಯೋಗೇಶ್ವರ್​ಗೆ MLC ಸ್ಥಾನ ನೀಡಿದರೆ ಪಕ್ಷ ಕಟ್ಟಲು ಸಹಕಾರಿ: ಬಿಜೆಪಿ ಕಾರ್ಯಕರ್ತರ ಮನವಿ

ಬಹಳಷ್ಟು ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ಮುಚ್ಚುವ ಮೂಲಕ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಎಲ್ಲಾ ಖಾಸಗಿ ವೈದ್ಯರು ತಕ್ಷಣದಿಂದಲೇ ತಮ್ಮ ಸೇವೆಯನ್ನು ಮತ್ತೆ ಆರಂಭಿಸಬೇಕು. ಯಾವುದೇ ವೈದ್ಯಕೀಯ ತುರ್ತು ಅಥವಾ ಅಪಘಾತಗೊಳಗಾದ ವ್ಯಕ್ತಿಗಳು ಆರೋಗ್ಯ ಸೇವೆಗೆ ಬಂದಾಗ ಕೋವಿಡ್-19 ತಪಾಸಣೆಗೆ ಶಿಫಾರಸ್ಸು ಮಾಡದೆ, ಅಗತ್ಯ ಸೇವೆಯನ್ನು ನೀಡಬೇಕು ಎಂದು ತಿಳಿಸಿದರು.

ಸರ್ಕಾರಿ ಹಾಗೂ ಖಾಸಗಿ ಬಸ್, ಟ್ಯಾಕ್ಸಿ, ಆಟೋ ಹಾಗೂ ಅಂತರ ಜಿಲ್ಲಾ ರೈಲ್ವೆ ಸೇವೆಯನ್ನು ಆರಂಭಿಸಲು ಅನುಮತಿ ನೀಡಲಾಗಿದ್ದು, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಹಾಗೂ ಸೇವೆಯ ವೇಳೆ ಸ್ಯಾನಿಟೈಸರ್ ಇಟ್ಟುಕೊಳ್ಳುವುದು ಕಡ್ಡಾಯ. ಪ್ರಯಾಣಿಕರು ಪ್ರಯಾಣಿಸುವಾಗ ಮಾಸ್ಕ್ ಧರಿಸದಿದ್ದರೆ ಪೊಲೀಸ್ ಇಲಾಖೆ ಅಂತಹ ಪ್ರಯಾಣಿಕರಿಂದ ದಂಡವನ್ನು ವಸೂಲಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಹಲವು ಜಿಲ್ಲೆಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವುದರ ಜೊತೆಗೆ ತನ್ನ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಜಿಲ್ಲೆಯಲ್ಲಿರುವ ಕಾರ್ಯದೊತ್ತಡದ ಮಧ್ಯೆ, ಅಧಿಕಾರಿಗಳು ಹಗಲಿರುಳು ದುಡಿದ ಪರಿಣಾಮ ಕೋವಿಡ್-19 ವೈರಾಣು ಹರಡುವಿಕೆಯನ್ನು ನಿಯಂತ್ರಣದಲ್ಲಿ ಇಡುವುದರ ಮೂಲಕ ಬೇರೆ ಜಿಲ್ಲೆಯವರಿಗೆ ಮಾದರಿಯಾಗಿರುವುದು ಶ್ಲಾಘನೀಯ ಎಂದೂ ಕಂದಾಯ ಸಚಿವರು ಪ್ರಶಂಸಿಸಿದರು.

ಇದನ್ನೂ ಓದಿ: ದುಡ್ಡು ಕೊಟ್ಟರೆ ಕ್ವಾರಂಟೈನ್ ಇಲ್ಲ? ಬೆಂಗಳೂರಲ್ಲಿ ಕೊರೋನಾ ಸಂಕಷ್ಟದಲ್ಲಿ ಭ್ರಷ್ಟಾಚಾರದ ಕರ್ಮಕಾಂಡ?

ಕೋವಿಡ್-19 ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತ ಸಂಬಂಧಪಟ್ಟ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಶೀಘ್ರವಾಗಿ ಆಯೋಜಿಸಿ, ಆರ್ಥಿಕ ಚಟುವಟಿಕೆಯನ್ನು ಮತ್ತೆ ಪ್ರರಂಭಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ. ನಾಗರಾಜ,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಜಿತ್.ವಿ.ಜೆ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಉಪ ವಿಭಾಗಾಧಿಕಾರಿ ಅರಳ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

First published: