ಹೊರ ರಾಜ್ಯದಿಂದ ಚಾಮರಾಜನಗರಕ್ಕೆ ಬರುವ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ

ಪ್ರಸ್ತುತ ನೆರೆಯ ಕೇರಳದಿಂದ 45ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು ಇವರನ್ನು ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ

news18-kannada
Updated:May 13, 2020, 3:36 PM IST
ಹೊರ ರಾಜ್ಯದಿಂದ ಚಾಮರಾಜನಗರಕ್ಕೆ ಬರುವ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ
ವಲಸೆ ಕಾರ್ಮಿಕರು
  • Share this:
ಚಾಮರಾಜನಗರ(ಮೇ.13): ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಗೆ ಹೊರ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. 14 ದಿನಗಳ ಕ್ವಾರಂಟೈನ್ ನಂತರ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗುವುದು. ನೆಗೆಟಿವ್ ಬಂದರೆ ಮಾತ್ರ ಅವರ ಗ್ರಾಮಗಳಿಗೆ ಕಳುಹಿಸಲು ಕ್ರಮ ವಹಿಸಲಾಗಿದೆ.

ಸೇವಾ ಸಿಂಧು ಪೋರ್ಟಲ್ ನಲ್ಲಿ ಇಲ್ಲಿಯವರೆಗೆ 450 ವಲಸೆ ಕಾರ್ಮಿಕರು ಜಿಲ್ಲೆಗೆ ಬರಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಹಸಿರು ಹಾಗು ಕಿತ್ತಳೆ ವಲಯದಿಂದ ಬರುವ 150 ಮಂದಿಗೆ ಮಾತ್ರ ಅನುಮತಿ ನೀಡಲಾಗದ್ದು ಇವರಿಗೆ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲೇ ಸ್ಕ್ರೀನಿಂಗ್ ಮಾಡಿ ನಂತರ ಇವರನ್ನು ಹತ್ತಿರದ ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. 14ನೇ ದಿನಕ್ಕೆ ಇವರ ಗಂಟಲು ದ್ರವ ಪರೀಕ್ಷೆ ನಡೆಸಿ ನೆಗೆಟಿವ್ ಬಂದರಷ್ಟೇ ಅವರನ್ನು ಅವರ ಗ್ರಾಮಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದ್ದಾರೆ.

ರೆಡ್ ಝೋನ್ ಹಾಗು ಹೈ ರಿಸ್ಕ್ ಇರುವ ಐದು ರಾಜ್ಯಗಳಿಂದಲು ಜಿಲ್ಲೆಗೆ ಬರಲು ವಲಸೆ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಬಗ್ಗೆ ಸದ್ಯದಲ್ಲೇ ಪರಿಶೀಲನೆ ನಡೆಸಲಾಗುವುದು. ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಪ್ರತಿ ತಾಲೂಕಿನಲ್ಲು 5 ಹಾಸ್ಟೆಲ್ ಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ವಲಸೆ ಕಾರ್ಮಿಕರು ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಂತೆ ಚೆಕ್ ಪೋಸ್ಟ್ ಗಳಲ್ಲೇ ಅವರನ್ನು ಸ್ಕ್ರೀನಿಂಗ್ ಮಾಡಲಾಗುವುದು ನಂತರ ಹತ್ತಿರದ ಹಾಸ್ಟೆಲ್ ಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುವುದು. ಅವರಿಗೆ ರೋಗ ಲಕ್ಷಣ ಇಲ್ಲದೆ ಇದ್ದರೂ ಸಹ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಲೇಬೇಕು ಎಂದರು.

ಪ್ರಸ್ತುತ ನೆರೆಯ ಕೇರಳದಿಂದ 45ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು ಇವರನ್ನು ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ನಂತರ ಮದ್ದೂರು ಗಿರಿಜನ ಆಶ್ರಮ ಶಾಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು ಮೇಲುಕಾಮನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ತಮಿಳುನಾಡಿನಿಂದ ಪುಣಜನೂರು ಚೆಕ್ ಪೋಸ್ಟ್ ಮೂಲಕ ಬರುವ ಕಾರ್ಮಿಕರಿಗೆ ಚಾಮರಾಜನಗರ ತಾಲೂಕು ಕೋಳಿಪಾಳ್ಯ ಹಾಗು ರಂಗಸಂದ್ರದಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗುವುದು. ಸತ್ತೆಗಾಲ ಚೆಕ್ ಪೋಸ್ಟ್ ಮೂಲಕ ಬರುವ ಹೊರರಾಜ್ಯದ ಕಾರ್ಮಿಕರಿಗೆ ಕೊಳ್ಳೇಗಾಲ ತಾಲೂಕು ತಿಮ್ಮರಾಜಿಪುರದಲ್ಲಿರುವ ಹಾಸ್ಟೆಲ್ ನಲ್ಲಿ, ಬಾಣಹಳ್ಳಿ ಹಾಗು ಹೆಗ್ಗವಾಡಿ ಚೆಕ್ ಪೋಸ್ಟ್ ಮೂಲಕ ಬರುವ ಕಾರ್ಮಿಕರಿಗೆ ಹರವೆ ಮತ್ತು ಉಮ್ಮತ್ತೂರು ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ಹೀಗೆ 800 ಕ್ಕು ಹೆಚ್ಚು ಮಂದಿಗೆ ಕ್ವಾರಂಟೈನ್ ಮಾಡಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಕ್ವಾರಂಟೈನ್ ಕೇಂದ್ರಗಳಿಗು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ನೋಡಲ್ ಆಫೀಸರ್ ಗಳನ್ನು ಸಹ ನೇಮಕ ಮಾಡಲಾಗಿದೆ.

ಪ್ರತಿಯೊಬ್ಬರು ಕೊರೋನಾ ವಾರಿಯರ್ ಆಗಬೇಕು

ಜನರ ಸಹಕಾರ ಹಾಗು ಜನಪ್ರತಿನಿಧಿಗಳ ಬೆಂಬಲದಿಂದ ಚಾಮರಾಜನಗರ ಜಿಲ್ಲೆ ಹಸಿರುವಲಯದಲ್ಲಿದೆ. ಆದರೆ ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಬರುತ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ಸಡಿಲಿಸಿ ಸಾಕಷ್ಟು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕರು ಕೊರೋನಾ ವಾರಿಯರ್ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.ಇದನ್ನೂ ಓದಿ : ಹೆಸ್ಕಾಂನಿಂದ ಗ್ರಾಹಕನಿಗೆ ವಿದ್ಯುತ್​​​ ಬಿಲ್​​ ಶಾಕ್ : ಅಷ್ಟಕ್ಕೂ ಮನೆಗೆ ಕರೆಂಟ್ ಬಿಲ್ ಬಂದಿದ್ದು ಎಷ್ಟು ಗೊತ್ತಾ?

ಇದುವರೆಗೆ ಸರ್ಕಾರ ಹೇರಿದ್ದ ಸಾಮಾಜಿಕ ಅಂತರ ಎಂಬುದು ಇನ್ನುಮುಂದೆ ಸಾರ್ವಜನಿಕರ ಜವಾಬ್ದಾರಿ ಆಗಬೇಕು ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳವುದು ಆ ಮೂಲಕ ಕೊರೊನಾ ಜೊತೆ ಬದುಕುವುದನ್ನು ರೂಡಿಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

(ವರದಿ : ಎಸ್.ಎಂ‌.ನಂದೀಶ್ )
First published: May 13, 2020, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading