HOME » NEWS » Coronavirus-latest-news » PUTTUR MAHALINGESHWARA KSHETRA HELPS TO PEOPLE AMID COVID PANDEMIC AKP LG

ಕೊರೋನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತ ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರ...!

ಸುಮಾರು 42 ಪ್ರತ್ಯೇಕ ಕೊಠಡಿಗಳು ಈಗಾಗಲೇ ಸಿದ್ಧಗೊಂಡಿದ್ದು, ಇನ್ನೂ ಕೆಲವು ಕೊಠಡಿಗಳು ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಪ್ರತೀ ರೋಗಿಗೂ ಪ್ರತ್ಯೇಕ ಕೊಠಡಿ, ಹಾಸಿಗೆ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಈ ಐಸೋಲೇಶನ್ ವಾರ್ಡ್ ಒಳಗೊಂಡಿದೆ.

news18-kannada
Updated:May 17, 2021, 3:11 PM IST
ಕೊರೋನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತ ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರ...!
ಬೆಡ್​ ವ್ಯವಸ್ಥೆ
  • Share this:
ದಕ್ಷಿಣ ಕನ್ನಡ(ಮೇ 17): ರಾಜ್ಯದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾ ಸೋಂಕು ಭಾಧಿತರ ಆರೈಕೆಗೆ ಸರಕಾರ ಸಾಕಷ್ಟು ಕ್ರಮಗಳನ್ನೂ ಕೈಗೊಂಡಿದೆ. ಸರಕಾರದ ಈ ಕಾರ್ಯಕ್ಕೆ ಹಲವು ಸಂಘ-ಸಂಸ್ಥೆಗಳೂ ಸಾಥ್ ನೀಡಿದ್ದು, ಇಲ್ಲೊಂದು ದೇವಸ್ಥಾನ ಕೊರೊನಾ ಸೋಂಕಿತರ ಐಸೋಲೇಶನ್ ವಾರ್ಡ್ ಅನ್ನೂ ಸಿದ್ಧಗೊಳಿಸಿದೆ. ಕೊರೊನಾ ಲಾಕ್ ಡೌನ್ ನಿಂದ ಊರಿಗೆ ತೆರಳಲಾಗದೆ ಬಾಕಿ ಉಳಿದ 50 ಕ್ಕೂ ಮಿಕ್ಕಿದ ಕಾರ್ಮಿಕರಿಗೂ ಈ ದೇವಸ್ಥಾನ ದಿನಂಪ್ರತಿ ಊಟೋಪಚಾರವನ್ನೂ ನೀಡುತ್ತಿದೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್-19 ನ ಎರಡನೇ ಅಲೆ ರಾಜ್ಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ರಾಜ್ಯದ ನಗರ ಪ್ರದೇಶಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಕೊರೊನಾ ಇದೀಗ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿದ್ದು, ಕೊರೊನಾ ಸೋಂಕಿತರ ನಿರ್ವಹಣೆಯೇ ಕಷ್ಟಸಾಧ್ಯವಾಗುವಂತಹ ಸ್ಥಿತಿಯೂ ನಿರ್ಮಾಣಗೊಂಡಿದೆ. ಕೊವಿಡ್ ನಿರ್ವಹಣೆಯಲ್ಲಿ ಸರಕಾರದ ವತಿಯಿಂದ ಸಾಕಷ್ಟು ಕೆಲಸಗಳು ನಡೆಯುತ್ತಿದ್ದು, ಸರಕಾರದ ಈ ಕಾರ್ಯಕ್ಕೆ ಕೆಲವು ಸಂಘ-ಸಂಸ್ಥೆಗಳೂ ಕೈ ಜೋಡಿಸಿವೆ.

ದಕ್ಷಿಣಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವೂ ಸರಕಾರದ ಕೋವಿಡ್ ನಿರ್ವಹಣೆಯ ಕೆಲಸದಲ್ಲಿ ಪ್ರತಿನಿತ್ಯ ತನ್ನನ್ನು ತೊಡಗಿಸಿಕೊಂಡಿದೆ. ಲಾಕ್ ಡೌನ್ ಕಾರಣದಿಂದಾಗಿ ಉದ್ಯೋಗದ ನಿಮಿತ್ತ ಪುತ್ತೂರಿಗೆ ಆಗಮಿಸಿದ್ದ ಸುಮಾರು 50 ಕ್ಕೂ ಮಿಕ್ಕಿದ ಕಾರ್ಮಿಕರಿಗೆ ದಿನನಿತ್ಯ ಊಟೋಪಚಾರದ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದಲೇ ನೀಡಲಾಗುತ್ತಿದೆ.

ಗುಣಮುಖ ಕೋವಿಡ್ ರೋಗಿಗಳಿಂದ 20 ಕೆಜಿ ಬಳಕೆಯಾಗದ ಔಷಧಿ ಸಂಗ್ರಹಿಸಿದ ಮುಂಬೈನ ವೈದ್ಯ ದಂಪತಿ

ಸುಮಾರು ಒಂದು ತಿಂಗಳಿನಿಂದ ಮೈಸೂರು, ಮಹಾರಾಷ್ಟ್ರ ಭಾಗದ ಈ ಕಾರ್ಮಿಕರು ಪುತ್ತೂರು ಜಾತ್ರೆಯಲ್ಲಿ ಮನೋರಂಜನಾ ಪರಿಕರಗಳನ್ನು ತಂದಿದ್ದು, ಜಾತ್ರೆ ಮುಗಿದ ತಕ್ಷಣವೇ ಲಾಕ್ ಡೌನ್ ಘೋಷಣೆಯಾದ ಹಿನ್ನಲೆಯಲ್ಲಿ ಕಾರ್ಮಿಕರ ತಂಡ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲೇ ತಂಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಈ ಕಾರ್ಮಿಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಕಲ್ಪಿಸಲಾಗಿದೆ. ಇದೀಗ ಕೊರೊನಾ ಭಾಧಿತರ ಐಸೋಲೇಶನ್ ವಾರ್ಡನ್ನು ಕೂಡಾ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ.

ಸುಮಾರು 42 ಪ್ರತ್ಯೇಕ ಕೊಠಡಿಗಳು ಈಗಾಗಲೇ ಸಿದ್ಧಗೊಂಡಿದ್ದು, ಇನ್ನೂ ಕೆಲವು ಕೊಠಡಿಗಳು ಸದ್ಯದಲ್ಲೇ ಸೇರ್ಪಡೆಗೊಳ್ಳಲಿದೆ. ಪ್ರತೀ ರೋಗಿಗೂ ಪ್ರತ್ಯೇಕ ಕೊಠಡಿ, ಹಾಸಿಗೆ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಈ ಐಸೋಲೇಶನ್ ವಾರ್ಡ್ ಒಳಗೊಂಡಿದೆ. ಅಲ್ಲದೆ ಇಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಬೇಕಾದ ನರ್ಸ್ ಹಾಗೂ ವೈದ್ಯರ ಸೌಲಭ್ಯವನ್ನೂ ಕಲ್ಪಿಸಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯ ಪ್ರಯುಕ್ತ ವ್ಯಾಪಾರಿಗಳಿಗೆ ಸ್ಟಾಲ್ ಹಾಕಲೆಂದು ಮಹಾಲಿಂಗೇಶ್ವರ ಸಭಾಂಗಣದಲ್ಲಿ ತಾತ್ಕಾಲಿಕ ಸ್ಟಾಲ್ ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಜಾತ್ರೆ ಮುಗಿದ ಮರುದಿನವೇ ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಹೇರಿಕೆಯಾದ ಹಿನ್ನಲೆಯಲ್ಲಿ ಸ್ಟಾಲ್ ಗೆ ಬಂದಿದ್ದ ಪರಿಕರಗಳೆಲ್ಲವೂ ದೇವಸ್ಥಾನದಲ್ಲೇ ಉಳಿಯುವಂತಾಗಿದೆ.
Youtube Video

ಇದನ್ನೇ ಬಳಸಿಕೊಂಡು ಇದೀಗ ಈ ಐಸೋಲೇಶನ್ ವಾರ್ಡ್ ನಿರ್ಮಿಸಲಾಗಿದ್ದು, ಇದರ ಎಲ್ಲಾ ಕಾಮಗಾರಿಗಳನ್ನು ದೇವಸ್ಥಾನದ ನಿತ್ಯ ಕರಸೇವಕರೇ ಮಾಡಿ ಮುಗಿಸಿದ್ದಾರೆ.  ಕೊರೊನಾ ಮಹಾಮಾರಿ ತಡೆಗೆ ಸರಕಾರದ ಜೊತೆಗೆ ಸಂಘ-ಸಂಸ್ಥೆಗಳೂ ತೊಡಗಿಕೊಂಡಿದ್ದು, ಪುತ್ತೂರಿನ ಈ ದೇವಸ್ಥಾನವೂ ಕೊರೊನಾ ಸಂಕಷ್ಟದಲ್ಲಿ ಜನರ ನೆರವಿಗೆ ನಿಂತಿದೆ.
Published by: Latha CG
First published: May 17, 2021, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories