ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಪರಿಸ್ಥಿತಿ; ಜುಲೈ 13 ರಿಂದ 23ರ ವರೆಗೆ ಪುಣೆ ಸಂಪೂರ್ಣ ಲಾಕ್‌ಡೌನ್

ಜುಲೈ 13 ರಿಂದ 23 ರವರೆಗೆ ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಗಳನ್ನು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶುಕ್ರವಾರ ಪ್ರಕಟಣೆಯನ್ನೂ ಹೊರಡಿಸಿದೆ. ಆದಾಗ್ಯೂ, ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಲಭ್ಯತೆಗೆ ಯಾವುದೇ ತಡೆ ಇರುವುದಿಲ್ಲ ಎಂದೂ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಪುಣೆ (ಜುಲೈ 10); ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಅದರಲ್ಲೂ ಪುಣೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಸಾಂಕ್ರಾಮಿಕ ರೋಗ ಹಿಡಿತಕ್ಕೆ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ಜುಲೈ 13 ರಿಂದ 23 ರವರೆಗೆ ಪುಣೆಯಲ್ಲಿ ಪೂರ್ಣ ಲಾಕ್‌ಡೌನ್ ಮಾಡಲು ಅಲ್ಲಿ ಸರ್ಕಾರ ಮುಂದಾಗಿದೆ. ಅಗತ್ಯ ಸೇವೆಗಳನ್ನು ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಭಾರತದಲ್ಲಿ 7,93,685 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 21,604ಜನ ಈ ವರೆಗೆ ಮೃತಪಟ್ಟಿದ್ದಾರೆ. ಆದರೆ, ಮಹಾರಾಷ್ಟ್ರ ಒಂದರಲ್ಲೇ 2,30,599 ಜನ ಈ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ, ಈವರೆಗೆ ಈ ಒಂದು ರಾಜ್ಯದಲ್ಲೇ ಬರೋಬ್ಬರಿ 9,667 ಜನ ಮೃತಪಟ್ಟಿದ್ದಾರೆ. ಹೀಗಾಗಿ ಭಾರತದಲ್ಲೇ ಮಹಾರಾಷ್ಟ್ರ ಕೊರೋನಾ ರಾಜಧಾನಿ ಎಂಬ ಕುಖ್ಯಾತಿಗೆ ಒಳಗಾಗಿದೆ.

ಭಾರತದ ಒಟ್ಟು ಕೊರೋನಾ ಸೋಂಕಿತರ ಪೈಕಿ ಶೇ.40ರಷ್ಟು ಜನ ಮಹಾರಾಷ್ಟ್ರದಲ್ಲೇ ಇದ್ದಾರೆ. ಅದರಲ್ಲೂ ಪಶ್ಚಿಮ ಮಹಾರಾಷ್ಟ್ರ ಭಾಗವಾದ ಪುಣೆಯಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಷ್ಟು ಕೈಮೀರಿದೆ. ಇದೇ ಕಾರಣಕ್ಕೆ ಇಡೀ ಪುಣೆಯನ್ನು ಮತ್ತೊಂದು ಹಂತದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, "ಜುಲೈ 13 ರಿಂದ 23 ರವರೆಗೆ ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಗಳನ್ನು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶುಕ್ರವಾರ ಪ್ರಕಟಣೆಯನ್ನೂ ಹೊರಡಿಸಿದೆ. ಆದಾಗ್ಯೂ, ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಲಭ್ಯತೆಗೆ ಯಾವುದೇ ತಡೆ ಇರುವುದಿಲ್ಲ" ಎಂದೂ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಭಾರತದಲ್ಲಿ ಮಾರ್ಚ್‌.25 ರಿಂದ ಹಲವು ಹಂತಗಳಲ್ಲಿ ಸತತವಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಆದರೂ, ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಿಂದ ಹಂತಹಂತವಾಗಿ ಲಾಕ್‌ಡೌನ್‌ ಅನ್ನು ಸಡಿಲಗೊಳಿಸಲಾಗುತ್ತಿದೆ. ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ : Vikas Dubey: ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು; ಕಾಂಗ್ರೆಸ್ ಒತ್ತಾಯ

ದೇಶದಾದ್ಯಂತ ಕಟ್ಟೆಚ್ಚರದೊಂದಿಗೆ ಹಲವು ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್‌ ಆಚರಿಸಲಾಗುತ್ತಿದೆ. ಆದರೆ, ಈವರೆಗೆ ಶಾಲಾ-ಕಾಲೇಜುಗಳನ್ನು ತೆರೆಯಲು, ಅಂತಾರಾಜ್ಯ ಸಾರಿಗೆಗೆ ಅನುಮತಿಸಲಾಗಿಲ್ಲ. ಅಲ್ಲದೆ, ಮನರಂಜನಾ ವಲಯಕ್ಕೂ ಯಾವುದೇ ಅನುಮತಿ ನೀಡಲಾಗಿಲ್ಲ ಎಂಬುದು ಉಲ್ಲೇಖಾರ್ಹ.
Published by:MAshok Kumar
First published: