ಬೆಂಗಳೂರು(ಜೂನ್ 18): ಕೊರೊನೋ ಸಂಕಷ್ಟದ ಮಧ್ಯೆ ಪಿಯುಸಿ ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆ ಸಾಂಗವಾಗಿ ಮುಗಿಯಿತು. ಮಾರ್ಚ್ ತಿಂಗಳಿನಲ್ಲಿ ಜರುಗಿದ್ದ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದ ಪರೀಕ್ಷೆ ಮಾತ್ರ ಕೊರೊನೋ ಲಾಕ್ ಡೌನ್ ನಿಂದಾಗಿ ಮುಂದೂಡಲಾಗಿತ್ತು. ಇಂದು ಕೊರೊನೋ ಸಂಕಷ್ಟದ ಮಧ್ಯೆ ಅತ್ಯಂತ ಮುಂಜಾಗ್ರತಾ ಕ್ರಮಗಳ ಪಾಲಿಸಿ ಪರೀಕ್ಷೆಯನ್ನು ಪಿಯು ಬೋರ್ಡ್ ನಡೆಸಿತು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಮೊದಲು ಥರ್ಮಲ್ ಸ್ಕ್ರೀನಿಂಗ್ ಆನಂತರ ಕೈಗೆ ಸ್ಯಾನಿಟೈಸ್ ನೀಡಲಾಗುತ್ತಿತ್ತು. 10.30ಕ್ಕೆ ಇದ್ದ ಆರಂಭವಾಗುವ ಪರೀಕ್ಷೆಗೆ ಎರಡು ಗಂಟೆ ಮುಂಚೆಯೇ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು. ಬೇರೆ ರಾಜ್ಯಗಳಿಂದ ಬಂದವರು, ಅನಾರೋಗ್ಯ ಕಾಣಿಸಿಕೊಂಡವರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ರಾಜ್ಯದಾದ್ಯಂತ 1,016 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 5.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡು 18,524 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 1889 ವಿದ್ಯಾರ್ಥಿಗಳು ಹೊರರಾಜ್ಯಗಳಿಂದ ಆಗಮಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆದಿದ್ದಾರೆ. ಸಾಮಾಜಿಕ ಅಂತರದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದೇಳುತ್ತಲೇ ಬೆಂಗಳೂರಿನ ಪಿಯು ಬೋರ್ಡ್ ಕಚೇರಿ ಸಮೀಪವೇ ಇರುವ ಸರಕಾರಿ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಆರೋಪಗಳು ಕೇಳಿಬಂದವು.
ಇದನ್ನೂ ಓದಿ: ದಕ್ಷಿಣ ಕನ್ನಡ: ಕೋವಿಡ್-19 ಆತಂಕದ ನಡುವೆ ನಡೆದ ಪಿಯು ಪರೀಕ್ಷೆ
ಕೊಠಡಿಯಲ್ಲಿ 24 ವಿದ್ಯಾರ್ಥಿಗಳ ಒಂದೇ ಟೇಬಲ್ನಲ್ಲಿ ಒಬ್ಬರು ಎರಡು ಬದಿ ಪರೀಕ್ಷೆ ಬರೆದಿದ್ದಾರೆ. 18-20 ವಿದ್ಯಾರ್ಥಿಗಳು ಮಾತ್ರ ಒಂದು ಕೊಠಡಿಯಲ್ಲಿರಬೇಕು ಎಂಬ ಮಾತು ಕೇಳಿಬಂದವು. ಆದರೆ ಮಲ್ಲೇಶ್ವರಂನಲ್ಲಿರುವ ಅಮ್ಮಣ್ಣಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಂದೇ ಟೇಬಲ್ ನಲ್ಲಿ ಒಬ್ಬರಂತೆ ಜಿಗ್ ಜಾಗ್ ರೀತಿ ಪರೀಕ್ಷೆ ನಡೆಸಲಾಯಿತು. ಯಾವ ಪರೀಕ್ಷಾ ಕೇಂದ್ರದಲ್ಲೂ ಯಾವುದೇ ಸಮಸ್ಯೆ ಆಗಿಲ್ಲ ಎಂದು ಪಿಯು ಬೋರ್ಡ್ ಹಂಗಾಮಿ ಅಧ್ಯಕ್ಷ ಡಾ ರೇಜು ತಿಳಿಸಿದರು.
ಪರೀಕ್ಷೆ ಬರೆಯುವ ಮುನ್ನ ಇದ್ದ ಮುಂಜಾಗ್ರತೆ ಪರೀಕ್ಷೆ ನಂತರ ವಿದ್ಯಾರ್ಥಿಗಳಲ್ಲಿ ಕಾಣಸಿಗಲಿಲ್ಲ. ಪರೀಕ್ಷೆ ಮುಗಿಯಿತಲ್ಲ ಎಂಬ ಸಂತಸದಲ್ಲಿ ಖುಷಿ ಖುಷಿಯಾಗಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸ್ನೇಹಿತರ ಜೊತೆ ಮಾತನಾಡುತ್ತ ಕೊರೊನೋ ಸಂಕಷ್ಟ ನೆನಪಿಸಿಕೊಳ್ಳದೆ ಸಾಮಾಜಿಕ ಅಂತರ ಮರೆತುಬಿಟ್ಟಿದ್ದರು. ಒಟ್ಟಿನಲ್ಲಿ ಪಿಯು ಪರೀಕ್ಷೆ ಬರೆದಿದ್ದಾಯಿತು, ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸರತಿ ಆರಂಭವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ