ನನ್ನ ದೇಶ ನರಳುತ್ತಿದೆ ಸಹಾಯ ಮಾಡಿ.. ಭಾರತಕ್ಕಾಗಿ ವಿಶ್ವದೆದುರು ಮೊರೆಯಿಟ್ಟ ನಟಿ ಪ್ರಿಯಾಂಕ ಚೋಪ್ರಾ..!

ಭಾರತಕ್ಕೆ  ಏಕೆ ಇಂಥಾ ಪರಿಸ್ಥಿತಿ ಬಂದಿದೆ. ಏಕೆ ಮೊದಲೇ ಎಚ್ಚೆತ್ತುಕೊಂಡಿಲ್ಲ ಎಂಬೆಲ್ಲಾ ಪ್ರಶ್ನೆಗಳನ್ನು ನೀವು ಕೇಳಬಹುದು. ಖಂಡಿತ ಅದಕ್ಕೆಲ್ಲಾ ಉತ್ತರಿಸೋಣ ಆದರೆ ಮೊದಲು ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಿದೆ.

ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ

  • Share this:
ಕೊರೋನಾ 2ನೇ ಅಲೆಯಿಂದ ಭಾರತ ಉಸಿರುಗಟ್ಟಿ ನರಳುತ್ತಿದೆ. ನಿತ್ಯ ಲಕ್ಷಾಂತರ ಸೋಂಕಿತರು, ಸಾವಿರಾರು ಜನರ ಸಾವಿನಿಂದ ಇಡೀ ದೇಶ ತತ್ತರಿಸುತ್ತಿದೆ. ಭಯಾನಕ ಒತ್ತಡದಲ್ಲಿರುವ ಭಾರತ ವೈದ್ಯಕೀಯ ಕ್ಷೇತ್ರ ಸೋಂಕಿತರಿಗೆ ಹಾಸಿಗೆ ನೀಡಲಾಗದೆ, ಆಕ್ಸಿಜನ್ ಹೊಂದಿಸಲಾಗದೆ​, ಸಕಾಲಕ್ಕೆ ಚಿಕಿತ್ಸೆ ನೀಡಲಾಗದೆ ಕೈಚೆಲ್ಲುತ್ತಿದೆ. ಈ ಸಂಕಷ್ಟದಿಂದ ದೇಶವಾಸಿಗಳನ್ನು ಪಾರು ಮಾಡಲು ಹಲವು ರಾಷ್ಟ್ರಗಳು, ದೇಶದ ಉದ್ಯಮಿಗಳು, ಪ್ರಭಾವಿಗಳು ಸಹಾಯಹಸ್ತ ಚಾಚುತ್ತಿದ್ದಾರೆ. ಹಿಂದೆಂದಿಗಿಂತಲೂ ಭಾರತಕ್ಕೆ ಈಗ ಸಹಾಯದ ಅಗತ್ಯವಿದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತ್ತಿಸಿಕೊಂಡಿರುವ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಜೋನ್ಸ್​​ ಕೈ ಜೋಡಿಸಿದ್ದಾರೆ. ಭಾವನಾತ್ಮಕ ವಿಡಿಯೋ ಮೂಲಕ ಸಹಾಯ ಮಾಡಿ ಎಂದು ಇಡೀ ವಿಶ್ವಕ್ಕೆ ಮೊರೆಯಿಟ್ಟಿದ್ದಾರೆ.

ದೇಶದ ಜನ ಸಾಯುತ್ತಿದ್ದರೆ ಕೆಲ ಬಾಲಿವುಡ್​ ನಟನಟಿಯರು ವಿದೇಶ ಪ್ರವಾಸಗಳಲ್ಲಿ ಮೋಜುಮಸ್ತಿ ಮಾಡುತ್ತಿರುವುದಕ್ಕೆ ಇತ್ತೀಚೆಗೆ ಟೀಕೆಗಳು ವ್ಯಕ್ತವಾಗಿತ್ತು. ಇದಕ್ಕೆ ಅಪವಾದ ಎಂಬಂತೆ ಮಾಜಿ ವಿಶ್ವಸುಂದರಿ ಪ್ರಿಯಾಂಕ ದೇಶದ ಸಹಾಯಕ್ಕೆ ಮುಂದೆ ಬಂದಿದ್ದಾರೆ. ತಮ್ಮ ಇಸ್ಟಾಂಗ್ರಾಂನಲ್ಲಿ ನನ್ನ ದೇಶ ನರಳುತ್ತಿದೆ, ಸಹಾಯ ಮಾಡಿ ಎಂದು ವಿಡಿಯೋ ಮೂಲಕ ಕೇಳಿಕೊಂಡಿರುವುದು ಹಲವರ ಮನ ಗೆದ್ದಿದೆ. ಜೊತೆಗೆ ಲಕ್ಷಾಂತರ ರೂಪಾಯಿ ದೇಣಿಗೆಯೂ ಸಂಗ್ರಹವಾಗಿದೆ.

ಭಾರತ ನನ್ನ ಮನೆ. ಇಂದು ನನ್ನ ದೇಶ ನರಳುತ್ತಿದ್ದು, ರಕ್ತಸಿಕ್ತಗೊಂಡಿದೆ. ನಾನು ಲಂಡನ್​ನಲ್ಲಿ ನನ್ನ ಕುಟುಂಬದ ಜೊತೆ ಇದ್ದೇನೆ. ಆದರೆ ಭಾರತದಲ್ಲಿ ನನ್ನ ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು, ಪ್ರತಿಯೊಬ್ಬ ಭಾರತೀಯನು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ.  ಕೊರೋನಾದಿಂದ ಆಸ್ಪತ್ರೆಗಳಲ್ಲಿ ಹಾಸಿಗೆಗಳ, ಆಕ್ಸಿಜನ್​ ಸಿಲಿಂಡರ್​ಗಳ ಕೊರತೆ ಕಾಣುತ್ತಿದೆ. ಚಿತಾಗಾರಗಳು ಬಿಡುವಿಲ್ಲದೆ ದಹಿಸುತ್ತಿದೆ. ಇನ್ನೆಂದಿಗಿಂಲೂ ಭಾರತಕ್ಕೆ ಈಗ ಸಹಾಯದ ಅಗತ್ಯವಿದೆ ಎಂದಿದ್ದಾರೆ ಪ್ರಿಯಾಂಕ ಚೋಪ್ರಾ.

ಭಾರತಕ್ಕೆ  ಏಕೆ ಇಂಥಾ ಪರಿಸ್ಥಿತಿ ಬಂದಿದೆ. ಏಕೆ ಮೊದಲೇ ಎಚ್ಚೆತ್ತುಕೊಂಡಿಲ್ಲ ಎಂಬೆಲ್ಲಾ ಪ್ರಶ್ನೆಗಳನ್ನು ನೀವು ಕೇಳಬಹುದು. ಖಂಡಿತ ಅದಕ್ಕೆಲ್ಲಾ ಉತ್ತರಿಸೋಣ ಆದರೆ ಮೊದಲು ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಿದೆ. ಪ್ರಾಣ ಬಿಡುತ್ತಿರುವ ಜನರನ್ನು ರಕ್ಷಿಸಬೇಕಿದೆ. ಎಲ್ಲರೂ ಸುರಕ್ಷಿತವಾಗಿರದಿದ್ದರೆ, ಯಾರೊಬ್ಬರೂ ಸುರಕ್ಷಿತ ಅಲ್ಲ ಎನ್ನುವುದನ್ನು ಜಾಗತಿಕ ಮಟ್ಟದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪ್ರಿಯಾಂಕ ವಿದೇಶಿಗರ ಮನವೊಲಿಸಿದ್ದಾರೆ.


ನನ್ನ ಇಸ್ಟಾಗ್ರಾಂ ಖಾತೆಯಲ್ಲಿ 62 ಮಿಲಿಯನ್​​ ಹಿಂಬಾಲಕರಿದ್ದೀರಾ. ಪ್ರತಿಯೊಬ್ಬರು 10 ಡಾಲರ್​ ದೇಣಿಗೆ ನೀಡಿದರೂ ಕೋಟ್ಯಂತರ ರೂಪಾಯಿ ಭಾರತದ ಸಹಾಯಕ್ಕೆ ಬರುತ್ತದೆ ಎಂದು ಪ್ರಿಯಾಂಕ ಮನವಿ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಪತಿ ಹಾಲಿವುಡ್​ ಸಿಂಗರ್​ ನಿಕ್​ ಜೋನ್ಸ್​ ಸಹ ಈ ದೇಣಿಗೆಗೆ ಕೈ ಜೋಡಿಸಿದ್ದಾರೆ. INDIA NEED HELP, GIVE INDIA ಘೋಷವಾಕ್ಯಗಳೊಂದಿಗೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ದೇಶದಲ್ಲಿ ನಟ ಸೋನು ಸೋದ್​​ ಜನರ ಸಹಾಯಕ್ಕೆ ನಿಂತಿದ್ದರೆ, ಜಾಗತಿಕ ಮಟ್ಟದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಪ್ರಿಯಾಂಕ ಚೋಪ್ರಾ ದೇಶಕ್ಕಾಗಿ ನೆರವು ಯಾಚಿಸುತ್ತಿದ್ದಾರೆ.
Published by:Kavya V
First published: