ಪೊಲೀಸ್ ಕಾನ್ಸ್​ಟೇಬಲ್ ಕಿವಿ ಕಚ್ಚಿ ಪೊಲೀಸರ ಅತಿಥಿಯಾದ ಖಾಸಗಿ ಶಾಲೆಯ ಶಿಕ್ಷಕ..!

ಆರೋಪಿ ಸುರೇಶ್ ಚವ್ಹಾಣನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ 353 ಕಲಂ ನಡಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಾಸಗಿ ಶಾಲಾ ಶಿಕ್ಷಕ ಸುರೇಶ್ ಚವ್ಹಾಣ

ಖಾಸಗಿ ಶಾಲಾ ಶಿಕ್ಷಕ ಸುರೇಶ್ ಚವ್ಹಾಣ

  • Share this:
ವಿಜಯಪುರ(ಮೇ. 14): ಕೊರೋನಾ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಅದರಲ್ಲಿಯೂ ಪೊಲೀಸ್, ಕಂದಾಯ, ಆರೋಗ್ಯ, ಮಹಾನಗರ ಪಾಲಿಕೆ, ಹೆಸ್ಕಾಂ ಸೇರಿದಂತೆ ನಾನಾ ಇಲಾಖೆಗಳ ಸಿಬ್ಬಂದಿ ಹಗಲಿರುಳು ಜನರಿಗಾಗಿ ದುಡಿಯುತ್ತಿದ್ದಾರೆ. ಇಂಥದ್ದೆ ಕೆಲಸಕ್ಕೆ ಮುಂದಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಕಿವಿ ಕಚ್ಚುವ ಮೂಲಕ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಪೊಲೀಸರ ಅತಿಥಿಯಾದ ಘಟನೆ ಗುಮ್ಮಟ ನಗರಿ ವಿಜಯಪುರ ನಗರದ ಹೊರ ವಲಯದ ಮಹಲ್ ಬಳಿ ಇರುವ ಐನಾಪುರ ತಾಂಡಾದಲ್ಲಿ ನಡೆದಿದೆ. 

ಅಷ್ಟಕ್ಕೂ ಆಗಿದ್ದೇನು..?

ಲಾಕ್​ ಡೌನ್ ಸಡಿಲಿಕೆಯ ಬಳಿಕ ವಲಸೆ ಕಾರ್ಮಿಕರು ತವರು ಜಿಲ್ಲೆ ವಿಜಯಪುರಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ತಹಶೀಲ್ದಾರ್​ ಮೋಹನಕುಮಾರಿ ಈ ತಾಂಡಾಕ್ಕೆ ಹೋಗಿದ್ದಾರೆ. ಆದರೆ, ಅಲ್ಲಿ ನಡೆದ ಈ ಅಮಾನುಷ ಘಟನೆ ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೊರ ರಾಜ್ಯಗಳಿಂದ ಬಂದ ಜನರನ್ನು ಕ್ವಾರಂಟೈನ್ ಮಾಡಲು ತಹಶೀಲ್ದಾರ್​ ಮೋಹನಕುಮಾರಿ ಮತ್ತು ಸಿಬ್ಬಂದಿ ತಾಂಡಾದಲ್ಲಿರುವ ಸಮುದಾಯ ಭವನದ ಕೀ ಕೇಳಿದ್ದಾರೆ. ಆಗ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್​​ ಬಾಬು ಕಡಣಿ ಕೀ ಕೊಡುವಂತೆ ಸಂಬಂಧಿಸಿದವರಿಗೆ ವಿಚಾರಿಸಿದ್ದಾನೆ. ಆಗ, ನಾನು ಕೀ ಕೊಡುವುದಿಲ್ಲ ಎಂದು ಖಾಸಗಿ ಶಾಲೆಯ ಶಿಕ್ಷಕ ಸುರೇಶ್ ಚವ್ಹಾಣ ತಕರಾರು ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಸುರೇಶ ಚವ್ಹಾಣ ಏಕಾಏಕಿ ಪೊಲೀಸ್ ಪೇದೆಯ ಕಿವಿ ಕಚ್ಚಿ ಅಮಾನವೀಯತೆ ಮೆರೆದಿದ್ದಾನೆ.

ತಹಶೀಲ್ದಾರ್​ ಕಣ್ಣೆದುರೇ ನಡೆದ ಈ ಘಟನೆಯಿಂದ ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯ ಬಳಿಕ ವಿಜಯಪುರ ತಹಸೀಲ್ದಾರ ಮೋಹನಕುಮಾರಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸುರೇಶ್ ಚವ್ಹಾಣನನ್ನು ಪೊಲೀಸರು ಬಂಧಿಸಿದ್ದಾರೆ.  ಆತನ ವಿರುದ್ಧ ಐಪಿಸಿ 353 ಕಲಂ ನಡಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾರತ ಲಾಕಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ಕಾರ್ಮಿಕರು ತವರು ಜಿಲ್ಲೆ ವಿಜಯಪುರಕ್ಕೆ ವಾಪಸ್ಸಾಗುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಈ ಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲು ಸಮುದಾಯ ಭವನ ಬಳಕೆ ಮಾಡಿಕೊಳ್ಳಲು ವಿಜಯಪುರ ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಈ ವೇಳೆ ಸಮುದಾಯ ಭವನ ತನ್ನದೆಂದು ಹೇಳಿದ ಈ ಭೂಪ ಕೀ ಕೊಡದೆ ಸತಾಯಿಸಿದ್ದ. ಸಮುದಾಯ ಭವನದ ಕೀ ತನ್ನ ಬಳಿ ಇರಿಸಿಕೊಂಡಿದ್ದ. ಅಧಿಕಾರಿಗಳು ಕೇಳಿದಾಗ ನೀಡದೇ ಮೊಂಡುತನ ಪ್ರರ್ಶಿಸಿದ್ದ ಸುರೇಶ್ ಚವ್ಹಾಣ, ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ತಹಶೀಲ್ದಾರ್ ಮೋಹನಕುಮಾರಿಯಿಂದ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಈಗಾಗಲೇ ಆರೋಪಿ ವಿರುದ್ಧ ಐಪಿಸಿ ಕಲಂ 353ರ ಅಡಿ ದೂರು ದಾಖಲಾಗಿದೆ. ಈಗ ವಾಪಸ್ಸಾಗುತ್ತಿರುವವರು ನಮ್ಮವರೇ ಆಗಿದ್ದಾರೆ. ಅವರ ಬಗ್ಗೆ ಲಘುವಾಗಿ ವರ್ತಿಸುವುದು ಸರಿಯಲ್ಲ. ಅಧಿಕಾರಿಗಳು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದು, ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಚಿಕ್ಕೋಡಿಯಲ್ಲಿ 20 ರೂಪಾಯಿ ಹಣದ ಆಸೆಗೆ 4 ವರ್ಷದ ಮಗುವನ್ನು ಕೊಂದ ಪಾಪಿ ಮಹಿಳೆ

ಒಟ್ಟಾರೆ ಮಕ್ಕಳಿಗೆ, ಸಮಾಜಕ್ಕೆ ಮಾದರಿಯಾಗಬೇಕಾಗಿದ್ದ ಖಾಸಗಿ ಶಾಲೆಯ ಶಿಕ್ಷಕ ಅಮಾನವೀಯವಾಗಿ ನಡೆದುಕೊಂಡು ರೀತಿ ಮಾತ್ರ ವ್ಯಾಪಕ ಟೀಕೆಗೆ ಗುರಿಯಾಗಿದೆ.
First published: