ನವ ದೆಹಲಿ (ಮೇ 28); "ಭಾರತದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಲು ಹಾಗೂ ಇದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಬೇಜವಾಬ್ದಾರಿ ನಡೆ ಮತ್ತು ನೌಟಂಕಿ ನಾಟಕಗಳೇ ಕಾರಣ. ಏಕೆಂದರೆ ಅವರಿಗೆ ಕೊರೋನಾ ಸೋಂಕಿನ ಬಗ್ಗೆ ಏನೂ ಗೊತ್ತಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಇಂದು ಆನ್ಲೈನ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, "ಕೊರೋನಾ ಮೊದಲ ಅಲೆ ಯಾರಿಗೂ ಅರ್ಥವಾಗಲಿಲ್ಲ…ಆದರೆ ಎರಡನೆಯ ಅಲೆಯ ಬಗ್ಗೆ ಎಲ್ಲರಲ್ಲೂ ಭಯ ಇತ್ತು. ವಿದೇಶಗಳಲ್ಲಿ ಇದನ್ನು ಸರಿಯಾಗಿ ನಿಭಾಯಿಸಿದ್ದರು. ಆದರೆ, ಭಾರತದಲ್ಲಿ ಈ ಸೋಂಕು ಉಲ್ಬಣವಾಗಲು ಪ್ರಧಾನಮಂತ್ರಿ ಮೋದಿಯೇ ಜವಾಬ್ದಾರರಾಗಿದ್ದಾರೆ. ಅವರ ಸಾಹಸಗಳು(ಸ್ಟಂಟ್‌ಗಳು), ಸಾವಿನ ಬಗ್ಗೆ ಅವರ ಸುಳ್ಳುಗಳು ಮತ್ತು ನೌಟಂಕಿ ನಾಟಕಗಳೇ ಈ ದುರಂತಗಳಿಗೆಲ್ಲಾ ಕಾರಣ" ಎಂದು ತಿಳಿಸಿದ್ದಾರೆ.
LIVE: My interaction with members of the Press about GOI’s Covid vaccine disaster. https://t.co/YbC8iSe4aw
— Rahul Gandhi (@RahulGandhi) May 28, 2021
"ಕೊರೋನಾ ದೇಶವನ್ನು ಪ್ರವೇಶಿಸಲು ನೀವು ಬಾಗಿಲು ತೆರೆದಿದ್ದೀರಿ, ಆದರೆ ಇನ್ನೂ ಬಾಗಿಲು ಮುಚ್ಚಿಲ್ಲ. ದೇಶದ ಜನಸಂಖ್ಯೆಯ ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದ್ದೀರಿ, ಉಳಿದವರು ಇನ್ನೂ ಅಪಾಯದಲ್ಲಿದ್ದಾರೆ. ಅಮೆರಿಕ ತನ್ನ ಅರ್ಧದಷ್ಟು ಜನಸಂಖ್ಯೆಗೆ ಲಸಿಕೆ ನೀಡಿದೆ. ಬ್ರೆಜಿಲ್ ಶೇ.8 ರಿಂದ 9% ದಷ್ಟು ಲಸಿಕೆ ನೀಡಿದೆ. ಅವರು ದೊಡ್ಡ ಮಟ್ಟದಲ್ಲಿ ಲಸಿಕೆ ಉತ್ಪಾದಿಸುವುದಿಲ್ಲ, ಆದರೆ ನಾವು ಹೆಸರಿಗಷ್ಟೇ ವಿಶ್ವದಲ್ಲಿ ಅತಿಹೆಚ್ಚು ಲಸಿಕೆ ಉತ್ಪಾದಿಸುವ ದೇಶ. ಆದರೆ, ನಮ್ಮ ಜನಗಳಿಗೇ ಲಸಿಕೆ ನೀಡಲಾಗುತ್ತಿಲ್ಲ" ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: White Fungus ನಿಂದ ಕರುಳಲ್ಲಿ ರಂಧ್ರ; ದೆಹಲಿಯ ಮಹಿಳೆಯಲ್ಲಿ ಮೊದಲ ಪ್ರಕರಣ ಪತ್ತೆ !
"ಭಾರತವು ತನ್ನ ವ್ಯಾಕ್ಸಿನೇಷನ್ ತಂತ್ರವನ್ನು ಸರಿಯಾಗಿ ಮಾಡದಿದ್ದರೆ, ಕೊರೋನಾ ವೈರಸ್‌ನ ಅನೇಕ ಅಲೆಗಳು ದೇಶವನ್ನು ಕಾಡುವ ಭೀತಿ ಇದೆ. ಮಾರಣಾಂತಿಕ ಕೊರೋನಾ ಮತ್ತು ಲಾಕ್‌ಡೌನ್‌ಗಳಿಗೆ ಲಸಿಕೆಗಳು ಮಾತ್ರ ಶಾಶ್ವತ ಪರಿಹಾರವಾಗ ಬಲ್ಲವು. ಸಾಮಾಜಿಕ ಅಂತರ ಮತ್ತು ಮಾಸ್ಕ್‌ಗಳು ತಾತ್ಕಾಲಿಕವಾದವು. ಸರಿಯಾದ ವ್ಯಾಕ್ಸಿನೇಷನ್ ತಂತ್ರವಿಲ್ಲದಿದ್ದರೆ, ಭಾರತವು ಸೋಂಕಿನ ಅನೇಕ ಅಲೆಗಳನ್ನು ಎದುರಿಸುವುದು ಸಾಧ್ಯವಿಲ್ಲ.
ಲಸಿಕೆ ನೀಡುವ ಪ್ರಕ್ರಿಯೆ ಈ ವೇಗದಲ್ಲಿ ಮುಂದುವರಿದರೆ, ಸೋಂಕಿನ ಮೂರನೆಯ ಮತ್ತು ನಾಲ್ಕನೆಯ ಅಲೆಗಳೂ ಬರಲಿದೆ. ಏಕೆಂದರೆ ವೈರಸ್ ರೂಪಾಂತರಗೊಳ್ಳುತ್ತದೆ. ನಾವು ರೂಪಾಂತರ ಹೊಂದುತ್ತಿರುವ ಕಾಯಿಲೆಯಾದ ಕೊರೋನಾ ವೈರಸ್‌ನೊಂದಿಗೆ ಯುದ್ಧ ಮಾಡುತ್ತಿದ್ದೇವೆ. ಆದರೆ ಸರ್ಕಾರವು ವಿರೋಧ ಪಕ್ಷದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಭಾವಿಸುತ್ತಿದೆಯೆ ಹೊರತು ವೈರಸ್ ಜೊತೆ ಹೋರಾಡುತ್ತಿದ್ದೇವೆ ಎಂದಲ್ಲ" ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ