ಪ್ರಸ್ತುತ ಇಡೀ ವಿಶ್ವವನ್ನು ಕಾಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಭಾರತಕ್ಕೂ ಮಾರಕವಾಗುವ ಸೂಚನೆ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮ ಏನು? ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಖುದ್ದಾಗಿ ಸಭೆ ನಡೆಸಿ ಪರಿಶೀಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಬೆಳೆಗ್ಗೆ 11.30ಕ್ಕೆ ಆರಂಭವಾದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳೂ ಭಾಗವಹಿಸಿದ್ದು, COVID (ಕೊರೋನಾ) ನಿಯಂತ್ರಣಕ್ಕೆ ತೆಗೆದುಕೊಂಡ ಸಿದ್ಧತೆ, ಪ್ರಕ್ರಿಯೆ ಮತ್ತು ಪ್ರಸ್ತುತ ಸನ್ನಿವೇಶಗಳ ಕುರಿತು ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ. ಅಲ್ಲದೆ, ಅಪಾಯ ಕಾಲದಲ್ಲಿ ತೆಗೆದುಕೊಳ್ಳಲಿರುವ ತುರ್ತು ಕ್ರಮ, ಆಸ್ಪತ್ರೆ ಸಿದ್ಧತೆ ಮತ್ತು ಪ್ರಯೋಗಾಲಯಗಳ ಕುರಿತು ಸೂಕ್ತ ಮಾಹಿತಿ ನೀಡಿದ್ದಾರೆ” ಎಂದು ವರದಿಯಾಗಿದೆ.
ವಿಮಾನ ನಿಲ್ದಾಣ ಸೇರಿದಂತೆ ದೇಶದ ಎಲ್ಲೆಡೆ ಜನ ನಿಬಿಡ ಪ್ರದೇಶದಲ್ಲಿ ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, “ಎಲ್ಲಾ ವಿಮಾನ ನಿಲ್ದಾಣ, ಬಂದರುಗಳು ಮತ್ತು ಭೂ ಗಡಿ ದಾಟುವಿಕೆಗಳಲ್ಲಿ ನಿರಂತರ ಜಾಗರೂಕತೆವಹಿಸಲಾಗಿದೆ. ಪ್ರೋಟೋಕಾಲ್ ಪ್ರಕಾರ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲೂ ಸಹ ಪ್ರತ್ಯೇಕ ಮತ್ತು ಸುರಕ್ಷಿತ ಹಾಸಿಗೆ ವ್ಯವಸ್ಥೆಯನ್ನು ಖಾತರಿಪಡಿಸಿಕೊಳ್ಳಲಾಗಿದೆ.
ಅಲ್ಲದೆ, ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ವಿಶೇಷ ಘಟಕ ಸ್ಥಾಪಿಸಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳ ಜೊತೆಗೆ ಯಶಸ್ವಿ ಸಂವಹನ ನಡೆಸಲಾಗುತ್ತಿದೆ. ಅಲ್ಲದೆ, ಇರಾನ್ನಲ್ಲಿರುವ ಭಾರತೀಯ ಪ್ರಜೆಗಳನ್ನು ಯಶಸ್ವಿಯಾಗಿ ದೇಶಕ್ಕೆ ಮರಳಿ ತರಲಾಗುವುದು” ಎಂದು ತಿಳಿಸಿದ್ದಾರೆ.
ಈ ವೇಳೆ ಎಲ್ಲಾ ಅಧಿಕಾರಿಗಳನ್ನೂ ಅಭಿನಂದಿಸಿರುವ ನರೇಂದ್ರ ಮೋದಿ, “ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಭಾರತ ಸಿದ್ದವಾಗಬೇಕಿದೆ. ಎಲ್ಲಾ ಇಲಾಖೆಗಳೂ ಒಮ್ಮುಖವಾಗಿ ಕಾರ್ಯನಿರ್ವಹಿಸಬೇಕು, ಕೊರೋನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ರೋಗದ ವಿರುದ್ಧ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಬೇಕು ಹಾಗೂ ಈ ಸೋಂಕು ಎಲ್ಲೆಡೆ ಹರಡದಂತೆ ನೋಡಿಕೊಳ್ಳಬೇಕು ” ಎಂದು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆಗೆ ನಡೆದ ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್, ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ ಹಿನ್ನೆಲೆ; ಕೊಡಗು, ಚಾಮರಾಜನಗರದಲ್ಲಿ ಹೈ ಅಲರ್ಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ