ಲಾಠಿಗೂ ಸೈ, ಕರುಣೆಗೂ ಸೈ; ಪರ ಊರುಗಳಿಂದ ಓದಲು ಬಂದವರಿಗೆ ಆರಕ್ಷಕರ ರಕ್ಷಣೆ

ಭಾರತ ಲಾಕಡೌನ್ ಆಗಿದ್ದರಿಂದ ಇವರಿಗೆ ಊಟ, ಉಪಹಾರ ಕಷ್ಟವಾಗಿತ್ತು. ಈ ವಿಷಯ ತಿಳಿದ ವಿಜಯಪುರ ನಗರದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಪಿಎಸ್ಐ ಶಂಕರಗೌಡ ಸ್ಪಂದಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಊಟ ನೀಡಿದ ಪೊಲೀಸರು

ವಿದ್ಯಾರ್ಥಿನಿಯರಿಗೆ ಊಟ ನೀಡಿದ ಪೊಲೀಸರು

  • Share this:
ವಿಜಯಪುರ(ಮಾ. 31): ಅವರೆಲ್ಲ ತರಬೇತಿಗಾಗಿ ಬಸವನಾಡಿಗೆ ಬಂದಿದ್ದಾರೆ.  ಬಡ ಮತ್ತು ಮಧ್ಯಮ ವರ್ಗದ ಈ ಯುವತಿಯರು ಕೆಎಎಸ್ ಸೇರಿದಂತೆ ನಾನಾ  ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿಗಾಗಿ ಬಂದಿದ್ದರು. ಭಾರತ ಲಾಕ್​​​ ಡೌನ್ ಆಗಿದ್ದು, ಇವರಿಗೆ ಆತಂಕದ ಜೊತೆಗೆ ಭವಿಷ್ಯಕ್ಕೂ ಕುತ್ತು ತಂದಿತ್ತು.  ಇಂಥವರ ನೆರವಿಗೆ ಧಾವಿಸುವ ಮೂಲಕ ಆರಕ್ಷಕರು ರಕ್ಷಣೆ ನೀಡಿದ್ದಾರೆ.

ನೆರೆಯ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ನಾನಾ ಜಿಲ್ಲೆಗಳ ಸಾವಿರಾರು ಜನ ವಿದ್ಯಾರ್ಥಿಗಳು ವಿಜಯಪುರದಲ್ಲಿರುವ ಹಲವು ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತಮಗಿಷ್ಟವಾದ ಸರಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಇವರು ನಾನಾ ಕನಸುಗಳನ್ನು ಹೊತ್ತು ಬಂದಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಿದ್ದರು. ಆದರೆ, ಸುಮಾರು 20ಕ್ಕೂ ಹೆಚ್ಚು ಯುವತಿಯರು ತಮ್ಮೂರಿಗೆ ತೆರಳಲು ಸಾಧ್ಯವಾಗದೆ ತಾವಿರುವ ರೂಮ್​​​​ ಗಳಲ್ಲಿಯೇ ಉಳಿದುಕೊಂಡಿದ್ದಾರೆ. 

ಭಾರತ ಲಾಕ್​​​ ಡೌನ್ ಆಗಿದ್ದರಿಂದ ಇವರಿಗೆ ಊಟ, ಉಪಹಾರ ಕಷ್ಟವಾಗಿತ್ತು. ಈ ವಿಷಯ ತಿಳಿದ ವಿಜಯಪುರ ನಗರದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಪಿಎಸ್ಐ ಶಂಕರಗೌಡ ಸ್ಪಂದಿಸಿದ್ದಾರೆ. ಸಿಪಿಐ ರವೀಂದ್ರ ನಾಯ್ಕೋಡಿ ಇವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದು, ಲಾಕಡೌನ್ ಮುಗಿಯುವ ತನಕ ಇಲ್ಲಿಯೇ ಆರಾಮವಾಗಿರಿ. ಬೇರೆ ಸಮಸ್ಯೆ ಇದ್ದರೂ ತಿಳಿಸಿ.  ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.  ಈ ಯುವತಿಯರಿಗೆ ತಮ್ಮ ಸರಕಾರಿ ಮೊಬೈಲ್ ನಂಬರ್ ನೀಡಿ ಕಷ್ಟ ಎದುರಾದರೆ ಕರೆ ಮಾಡುವಂತೆ ವಿನಂತಿಯನ್ನೂ ಮಾಡಿದ್ದಾರೆ.  

ಅಷ್ಟೇ ಅಲ್ಲ, ಈ ಯುವತಿಯರು ತಂಗಿರುವ ರೂಮ್​​​ ಗಳ ಮಾಲಿಕರು ಬಾಡಿಗೆಯನ್ನೂ ಪಡೆಯದಂತೆ ಮನವೊಲಿಸಿದ್ದಾರೆ. ಪರಿಣಾಮ ತಮ್ಮೂರಿಗೆ ತೆರಳಲೂ ಆಗದೆ, ತಮ್ಮ ತಂದೆ-ತಾಯಿಗಳಿಂದ ಬಾಡಿಗೆಯನ್ನೂ ಪಡೆಯಲು ಕಷ್ಟದ ಪರಿಸ್ಥಿತಿಯಲ್ಲಿದ್ದ ಈ ವಿದ್ಯಾರ್ಥಿನಿಯರಲ್ಲಿ ಈಗ ತಮ್ಮ ಕನಸುಗಳನ್ನು ಪೂರ್ಣಗೊಲಿಸಲು ಅವಕಾಶ ಸಿಕ್ಕಿದೆ. ದಿಕ್ಕೆ ತಪ್ಪಿದಂತಾಗಿದ್ದ ತಮಗೆ ಗಾಂಧಿಚೌಕ್ ಪೊಲೀಸರು ನೆರವಾಗುವ ಮೂಲಕ ಸಮಸ್ಯೆ ನೀಗಿಸಿದ್ದಾರೆ.  ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ : ಮದ್ಯಪ್ರಿಯರಿಗೆ ಶಾಕ್; ಏಪ್ರಿಲ್ 14ರವರೆಗೆ ಲಿಕ್ಕರ್ ಮಾರಾಟ ಇಲ್ಲ!

ಈ ಯುವತಿಯರಿಗಷ್ಟೇ ಅಲ್ಲದೇ, ಇತರ ಹತ್ತಾರು ಯವಕರಿಗೆ ಇದೇ ಪೊಲೀಸರು ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ತೋರಿದ್ದಾರೆ.   ಭಾರತ ಲಾಕಡೌನ್ ಸಂದರ್ಭದಸಲ್ಲಿ ಅತೀ ಹೆಚ್ಚಾಗಿ ಸುದ್ದಿಯಲ್ಲಿದ್ದದ್ದು ಪೊಲೀಸರು.  ಕಾನೂನು ಉಲ್ಲಂಘಿಸುವ ಪುಂಡರಿಗೆ ಲಾಠಿ ರುಚಿ ತೋರಿಸಿ, ತರಹೇವಾರಿ ಶಿಕ್ಷೆ ನೀಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದರು. ಪೊಲೀಸರೆಂದರೆ ಕೇವಲ ಶಿಕ್ಷೆ ನೀಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಅಪವಾದವಾಗಿದೆ. 
First published: