ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿದ್ದ ಪುಲಿಕೇಶಿ ನಗರ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆದ ಕಾನ್ಸ್ಟೇಬಲ್ನನ್ನು ನಗರ ಪೊಲೀಸರು ಹೂಮಳೆ ಸುರಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಒಂದು ವಾರದ ಹಿಂದೆ 38 ವರ್ಷದ ಪೊಲೀಸ್ ಕಾನ್ಸ್ಟೇಬಲ್ಗೆ ಸೋಂಕು ಇರೋದು ದೃಢವಾಗಿತ್ತು. ಕೂಡಲೇ ಕಾನ್ಸ್ಟೇಬಲ್ನನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇಂದು ಕಾನ್ಸ್ಟೇಬಲ್ ಸಂಪೂರ್ಣ ವಾಗಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಸಮಯದಲ್ಲಿ ಪೊಲೀಸರು ಡ್ರಮ್, ಬ್ಯಾಂಡ್ ಬಾರಿಸಿದರು. ಜೊತೆಗೆ ಕಾನ್ಸ್ಟೇಬಲ್ ಮೇಲೆ ಹೂವು ಸುರಿದು ಸ್ವಾಗತ ಕೋರಿದರು. ಇನ್ನು ಇದೇ ವೇಳೆ ಖುದ್ದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ, ಡಿಸಿಪಿಗಳಾದ ರೋಹಿಣಿ ಸೆಪಟ್, ನಾರಾಯಣ್, ಡಾ.ಸೌಮ್ಯಲತಾ ಹಾಗೂ ಹಲವರು ಪೊಲೀಸ್ ಇನ್ಸ್ಪೆಕರ್ಗಳು ಹಾಗೂ ಸಿಬ್ಬಂದಿಯವರು ಹಾಜರಾಗಿದ್ದರು.
ಆಸ್ಪತ್ರೆಯ ಬಳಿ ಆಗಮಿಸಿದ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಕಾನ್ಸ್ಟೇಬಲ್ಗೆ ಚಿಕಿತ್ಸೆ ನೀಡಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಹೂಗುಚ್ಚ ನೀಡಿ ಸನ್ಮಾನ ಮಾಡಿದರು. ಜೊತೆಗೆ ಎರಡು ಕೈಗಳಿಂದ ನಮಸ್ಕಾರ ಸಹ ಮಾಡಿದರು. ಇನ್ನು ಗುಣಮುಖವಾದ ಕಾನ್ಸ್ಟೇಬಲ್ಗೆ ಆಸ್ಪತ್ರೆ ಆವರಣದಿಂದ ಗೇಟ್ ಬಳಿಯವರೆಗೂ ಹೂವಿನ ಸುರಿಮಳೆಯನ್ನೇ ಸುರಿಸಿದರು. ನಂತರ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಇದೇ ವೇಳೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸಹ ಬಂದಿದ್ದರು.
ಇದನ್ನು ಓದಿ: ಲಾಕ್ಡೌನ್ 5.O ವೇಳೆ 13 ನಗರಗಳು ಸೇರಿದಂತೆ 145 ಜಿಲ್ಲೆಗಳಲ್ಲಿ ಮಾತ್ರ ಕಟ್ಟುನಿಟ್ಟು, ಉಳಿದೆಡೆ ಭಾರೀ ವಿನಾಯಿತಿ
ಪೊಲೀಸರು ಸಹ ಸಾಮಾಜಿಕ ಅಂತರದಲ್ಲಿ ನಿಂತು ಚಪ್ಪಾಳೆ ಹೊಡೆದು ಕಾನ್ಸ್ಟೇಬಲ್ನನ್ನು ಬರಮಾಡಿಕೊಂಡರು. ಮೇ 20 ರಂದು ಫ್ರೇಜರ್ ಟೌನ್ ಟ್ರಾಫಿಕ್ ಠಾಣಾ ಸಿಬ್ಬಂದಿಗೆ ಟೆಸ್ಟ್ ಮಾಡಿಸಲಾಗಿತ್ತು. ಮೇ 22ರಂದು ಬಂದ ಪರೀಕ್ಷಾ ವರದಿಯಲ್ಲಿ ಹೆಡ್ ಕಾನ್ಸ್ಟೇಬಲ್ಗೆ ಸೋಂಕು ಇರುವುದು ದೃಢಪಟ್ಟಿತ್ತು.
ಹೆಗಡೆ ನಗರದ ಕ್ವಾಟ್ರಸ್ನಲ್ಲಿ ವಾಸವಿದ್ದ ಸೋಂಕಿತ ಕಾನ್ಸ್ಟೇಬಲ್ಗೆ ಸೋಂಕು ದೃಢವಾಗುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಸಂಪೂರ್ಣ ಗುಣಮುಖರಾದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ