Seema.RSeema.R
|
news18-kannada Updated:March 3, 2020, 3:53 PM IST
ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರಪಂಚಾದ್ಯಂತ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ರೋಗ ಇದೀಗ ಭಾರತಕ್ಕೂ ಕಾಲಿಟ್ಟಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ಅಥವಾ ಕೋವಿಡ್-19 ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ವಿಶ್ವವನ್ನೇ ಕಾಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿಗೆ ನವದೆಹಲಿ ಮತ್ತು ಹೈದ್ರಾಬಾದ್ನ ವ್ಯಕ್ತಿಗಳು ತುತ್ತಾಗಿರುವುದು, ದೇಶದಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ ದೇಶಾದ್ಯಂತ ಕಟ್ಟೆಚ್ಚರವಹಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯದ ಆರೋಗ್ಯ ಸಚಿವರು ಮೇಲಿಂದ ಮೇಲೆ ಸಭೆ ನಡೆಸುವ ಮೂಲಕ ಸೋಂಕು ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸೋಂಕು ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಮತ್ತು ಹಲವು ಸಚಿವಾಲಯಗಳು ಜಂಟಿಯಾಗಿ ಕೆಲಸ ಮಾಡುತ್ತಿದ್ದು, ವೈರಸ್ ತಡೆಗಟ್ಟುವ ಮತ್ತು ಬೇರೆ ದೇಶಗಳಿಂದ ಭಾರತಕ್ಕೆ ಬರುವವರ ತಪಾಸಣೆಯನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಕೊರೋನಾ ಬಗ್ಗೆ ಭಯಪಡದೇ, ಸ್ವ ರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ಇದರ ವಿರುದ್ಧ ಹೋರಾಡೋಣ. ಇದಕ್ಕೆ ಬೇಕಾದ ಪ್ರಾಥಮಿಕ ಮುನ್ನೆಚ್ಚರಿಕೆ ವಹಿಸೋಣ ಎಂದಿದ್ದಾರೆ. ಇದೇ ವೇಳೆ ಸೋಂಕು ಹರಡದಂತೆ ಯಾವ ರೀತಿ ಎಚ್ಚರವಹಿಸಬಹುದು ಎಂಬ ಸಲಹೆಯನ್ನು ನೀಡಿದ್ದು, ಕೈ ಯನ್ನು ಪದೇ ಪದೇ ಸ್ವಚ್ಛಗೊಳಿಸೋಣ ಜೊತೆಗೆ ಕೆಮ್ಮುವಾಗ, ಸೀನುವಾಗ ಬಾಯಿಗೆ ಅಡ್ಡ ಬಟ್ಟೆ ಇಡಲು ಮರೆಯಬೇಡಿ ಎಂದಿದ್ದಾರೆ.
ಇದಕ್ಕೂ ಮುನ್ನ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆ ಸಭೆ ನಡೆಸಿದ ಪ್ರಧಾನಿ ದೆಹಲಿ ಪೌರತ್ವ ಹಿಂಸಾಚಾರ ಸೇರಿದಂತೆ ಕೊರೊನಾ ವೈರಸ್ ಕುರಿತು ಚರ್ಚೆ ನಡೆಸಿದರು.
ಇದನ್ನು ಓದಿ: ದೆಹಲಿ, ತೆಲಂಗಾಣ ಬಳಿಕ ಆಗ್ರಾದಲ್ಲಿ 6 ಕೊರೋನಾ ಶಂಕಿತ ಪ್ರಕರಣಗಳು: ದೆಹಲಿಯಲ್ಲಿ ಕೆಲ ಶಾಲೆಗಳಿಗೆ ರಜೆ ಘೋಷಣೆ
ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಕೂಡ ಸೋಮವಾರ ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು, ಇರಾನ್, ಇಟಲಿ, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ್ಗೆ ಅನಾವಶ್ಯಕವಾಗಿ ಪ್ರಯಾಣ ಮಾಡದಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
First published:
March 3, 2020, 3:53 PM IST