ನವದೆಹಲಿ (ಜೂ. 10): ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ಮುಕ್ತಾಯವಾಗುವ ಸನಿಹ ಬಂದಿದೆ. ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಆಗಿದೆ. ಜೊತೆಗೆ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಚಿಗರುತ್ತಿದೆ. ಆದರೆ ಕೊರೋನಾ ಮೂರನೇ ಅಲೆ ಬರಬಹುದು ಎಂಬ ಆತಂಕ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರ ತಯಾರಿ ಕೆಲಸ ಆರಂಭಿಸಿದ್ದು ಇಂದು ಗೃಹ ಇಲಾಖೆ ಸಭೆ ನಡೆಯಲಿದೆ.
ಆರೋಗ್ಯ ಕ್ಷೇತ್ರದ ತಜ್ಞರು ಮೂರನೇ ಅಲೆ ಕೊರೋನಾ ಬಗ್ಗೆ ಎಚ್ಚರಿಸಿದ್ದಾರೆ. ಇನ್ನೊಂದೆಡೆ ನೀತಿ ಆಯೋಗ ಕೂಡ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಮೂರನೇ ಅಲೆಯ ಕೊರೋನಾ ಬರಬಹುದೆಂಬ ಅಂದಾಜು ನೀಡಿದ್ದಾರೆ. ಸದ್ಯ ತಜ್ಞರ ಸಲಹೆಯಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಇಂದು ಬೆಳಿಗ್ಗೆ 11ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಇಲಾಖೆಯ ಸಭೆ ಕರೆದಿದ್ದಾರೆ.
ಇದನ್ನೂ ಓದಿ:Mumbai Building Collapse: ಮುಂಬೈನ ಮಲಾಡ್ನಲ್ಲಿ ಕಟ್ಟಡ ಕುಸಿತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಗೃಹ ಖಾತೆಯ ರಾಜ್ಯ ಸಚಿವರಾದ ಜಿ ಕಿಶನ್ ರೆಡ್ಡಿ ಮತ್ತು ನಿತ್ಯಾನಂದ್ ರೈ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿ ಆಗಲಿದ್ದಾರೆ. ಈ ಸಭೆಯಲ್ಲಿ ಮೂರನೇ ಅಲೆ ಕೊರೋನಾ ಅಲೆಯ ವೇಳೆ ಯಾವ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸಬೇಕು? ಯಾವ ರೀತಿಯ ಮಾರ್ಗಸೂಚಿಗಳನ್ನು ರೂಪಿಸಬೇಕು? ಲಾಕ್ಡೌನ್ ಮಾಡದೆ ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಲಿದೆ.
ಜೊತೆಗೆ ಈಗಾಗಲೇ ವಹಿಸಿರುವ ಮುನ್ನೆಚ್ಚರಿಕಾ ಕ್ರಮಗಳು ಏನೇನು? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ ಮುಂದೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಚರ್ಚಿಸಲಾಗುತ್ತದೆ.
ಇದನ್ನೂ ಓದಿ:Mumbai Rains: ಮುಂಬೈನಲ್ಲಿ ಭಾರೀ ಮಳೆ; ರಸ್ತೆ, ಮನೆಗಳು ಜಲಾವೃತ; ಇಂದು ರೆಡ್ ಅಲರ್ಟ್ ಘೋಷಣೆ
ಇದೇ ವೇಳೆ ಆಮ್ಲಜನಕದ ಸಮರ್ಪಕ ಪೂರೈಕೆ ಬಗ್ಗೆ, ಜಮ್ಮು - ಕಾಶ್ಮೀರದ ಸದ್ಯದ ಪರಿಸ್ಥಿತಿ ಬಗ್ಗೆ, ಅಮರನಾಥ ಯಾತ್ರೆ ಕುರಿತು, ಸಿಎಎಗೆ ಅರ್ಜಿ ಆಹ್ವಾನಿಸಿರುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ದೇಶದಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ನ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ ಮರುದಿನವೇ ರಾಜ್ಯಗಳಿಗೆ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೆಲವು ರಾಜ್ಯಗಳು ಅಧಿಕ ಪ್ರಮಾಣದಲ್ಲಿ ಲಸಿಕೆಗಳನ್ನು ಪೋಲು ಮಾಡುತ್ತಿರುವುದು, ದೇಶದಲ್ಲಿ ಲಸಿಕೆ ಹಂಚಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರವು ಮಂಗಳವಾರ ಬಿಡುಗಡೆ ಮಾಡಿದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ